ವಿಜಯ ಸಿಂಧೂರ ಗಜೇಂದ್ರಗಡ
ವೀರಶೈವ ಪರಂಪರೆಯನ್ನು ಪಸರಿಸುವಲ್ಲಿ ಶ್ರೀ ರೇಣುಕಾಚಾರ್ಯರ ಪಾತ್ರ ಮಹತ್ತರವಾಗಿದೆ ಎಂದು ವೀರಶೈವ ಜಂಗಮಾಭಿವೃದ್ದಿ ಸಂಘದ ಅಧ್ಯಕ್ಷ ಶಿವಕುಮಾರ ಕೋರಧಾನ್ಯಮಠ ಹೇಳಿದರು.
ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ವೀರಶೈವ ಜಂಗಾಮಭಿವೃದ್ದಿ ಸಂಘ ಹಾಗೂ ವೀರಶೈವ ಲಿಂಗಾಯತ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ರೇಣುಕಾರ್ಯರ ಯುಗಮಾನೋತ್ಸವ ಅಂಗವಾಗಿ ರೇಣುಕಾಚಾರ್ಯರ ಬಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ರಾಷ್ಟ್ರದ ಸನಾತನ ಸಂಸ್ಕೃತಿಯಲ್ಲಿ ದ್ವೈತ, ಅದ್ವೈತ, ವಿಶಿಷ್ಟ ಅದ್ವೈತ ಎಂಬ ಸಿದ್ಧಾಂತಗಳು ಪ್ರಚಲಿತದಲ್ಲಿದ್ದು, ಇತಿಹಾಸದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ. ಜಾತಿ, ಮತ, ಭಾಷೆ, ಪ್ರದೇಶ ಎಂಬ ಸಂಕುಚಿತ ಸಂಕೋಲೆಗಳನ್ನು ಮೀರಿ ಮಾನವ ಧರ್ಮದ ಉನ್ನತಿಗೆ ರೇಣುಕಾಚಾರ್ಯರು ಶ್ರಮಿಸಿದ್ದಾರೆ.ಯಾವುದೇ ಜಾತಿ ಜನಾಂಗದಲ್ಲಿ ಹುಟ್ಟಿದ ವ್ಯಕ್ತಿ ತನ್ನ ಸತ್ಯ, ಶುದ್ಧ ಆಚರಣೆಯಿಂದ ಸದ್ಗುರುವಿಗೆ ಶರಣಾತಿ ಗುರು ನೀಡಿದ ಬೋಧಾಮೃತವನ್ನು ಅಳವಡಿಸಿಕೊಂಡು ಜೀವನದಲ್ಲಿ ಉನ್ನತ್ತಕ್ಕೆ ಏರಲು ಸಾಧ್ಯ ಎಂದು ರೇಣುಕಾಚಾರ್ಯರು ತಿಳಿಸಿದ್ದಾರೆ ಎಂದರು.
ಟಿ.ಎಸ್.ರಾಜೂರ ಮಾತನಾಡಿ, ಯುಗ ಯುಗಗಳ ನಂಟು ಬೆಸೆದುಕೊಂಡಿರುವ ಪಂಚ ಆಚಾರ್ಯರ ಪರಂಪರೆಯಲ್ಲಿ ಜಗದ್ಗುರು ರೇಣುಕಾಚಾರ್ಯರು ಪ್ರಾಚೀನ ಕಾಲದಲ್ಲಿ ಅಸ್ಪೃಶ್ಯತೆಯನ್ನು ತೊಡೆದು ಸರ್ವಜನಾಂಗಕ್ಕೂ ಧಾಮೀಕ ಸ್ವಾತಂತ್ರ್ಯ ನೀಡಿದ ಕ್ರಾಂತಿ ಪುರುಷ ಎಂದರು.
ಈ ವೇಳೆ ಗುರುಸಿದ್ದಯ್ಯ ಸೂಗಿರಯ್ಯನಮಠ, ಚಂಬಣ್ಣ ಚವಡಿ, ಟಿ.ಎಸ್.ರಾಜೂರ, ಮಲ್ಲಯ್ಯಸ್ವಾಮಿ ಗುರುಸ್ಥಲಮಠ, ಶಾಂತಯ್ಯ ಪೂಜಾರ, ಎ.ಪಿ.ಗಾಣಿಗೇರ, ಅಮರಯ್ಯ ಗೌರಿಮಠ, ಶಿವಯ್ಯ ಚಕ್ಕಡಿಮಠ, ಮಹೇಶ.ಎಸ್, ಸಂತೋಶ ವಸ್ತçದ, ಶಿವಕುಮಾರ ಶಶಿಮಠ, ಮಾಂತಯ್ಯ ಕಪ್ಲಿಮಠ, ಬಸಯ್ಯ ಗೊಂಗಡಶೆಟ್ಟಿಮಠ, ಎಸ್.ಬಿ.ಹಿಡಕಿಮಠ, ಸಿದ್ದು ಗೊಂಗಡಶೆಟ್ಟಿಮಠ, ಶಿವು ಚಂದ್ರಗಿರಿಮಠ ಸೇರಿದಂತೆ ಇತರರು ಇದ್ದರು.
