ತಾಳಿಕೋಟೆ ‘ಪ್ರಜಾಸೌಧ’ ಸ್ಥಳ ವಿವಾದ: ಸಿಎಂಗೆ ಮನವಿ – ಪಟ್ಟಣದಲ್ಲೇ ಸೌಧ ನಿರ್ಮಿಸಲು ಆಗ್ರಹ

ವಿಜಯ ಸಿಂಧೂರ, ತಾಳಿಕೋಟೆ
ಈಗಾಗಲೇ ನಿಗದಿಪಡಿಸಿರುವ ಪ್ರಜಾಸೌಧ ನಿರ್ಮಾಣ ಸ್ಥಳವನ್ನು ವಿರೋಧಿಸಿ, ತಾಳಿಕೋಟೆ ತಾಲೂಕ ಹೋರಾಟ ಸಮಿತಿಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿ, ಪಟ್ಟಣದೊಳಗಿನ ಸರ್ಕಾರಿ ಜಾಗದಲ್ಲೇ ಪ್ರಜಾಸೌಧ ನಿರ್ಮಿಸಲು ಆಗ್ರಹಿಸಿದೆ.


ಮನವಿಯಲ್ಲಿ, ತಾಳಿಕೋಟೆ ಪಟ್ಟಣದಿಂದ ಸುಮಾರು 5 ಕಿ.ಮೀ ದೂರದಲ್ಲಿರುವ ಮೈಲೇಶ್ವರ ಗ್ರಾಮದ ಸಮೀಪ ಗುರುತಿಸಿರುವ ಸ್ಥಳವು ನಿರ್ಜನ ಪ್ರದೇಶವಾಗಿದ್ದು, ಸಾರ್ವಜನಿಕರ ಅಗತ್ಯಗಳಿಗೆ ಅನುಕೂಲಕರವಲ್ಲ ಎಂದು ಕಳವಳ ವ್ಯಕ್ತಪಡಿಸಲಾಗಿದೆ. ಅಲ್ಲದೆ, ಪ್ರಸ್ತುತ ತಹಶೀಲ್ದಾರ್ ಹಾಗೂ ಶಾಸಕರ ಸಂಬಂಧಿಕರಿಗೆ ಸೇರಿದ 40 ರಿಂದ 50 ಎಕರೆ ಜಮೀನಿನಲ್ಲಿ ಪ್ರಜಾಸೌಧ ನಿರ್ಮಿಸಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಲಾಗಿದೆ.
ರೈತರು, ವೃದ್ಧರು, ಅಂಗವಿಕಲರು, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಸುರಕ್ಷತೆ ಮತ್ತು ಸುಲಭ ಸಂಚಾರದ ದೃಷ್ಟಿಯಿಂದ, ಪಟ್ಟಣದಿಂದ ದೂರದ ಪ್ರದೇಶದಲ್ಲಿ ಸರ್ಕಾರಿ ಕಚೇರಿ ನಿರ್ಮಾಣ ಮಾಡುವುದು ಸಮಂಜಸವಲ್ಲ ಎಂದು ಹೋರಾಟ ಸಮಿತಿ ಅಭಿಪ್ರಾಯಪಟ್ಟಿದೆ.
“ಸಾರ್ವಜನಿಕರ ಅನುಕೂಲದ ದೃಷ್ಟಿಯಿಂದ ತಾಳಿಕೋಟೆ ಪಟ್ಟಣದಲ್ಲಿಯೇ ಲಭ್ಯವಿರುವ ಸರ್ಕಾರಿ ಜಾಗದಲ್ಲಿ ಪ್ರಜಾಸೌಧ ನಿರ್ಮಿಸಬೇಕು” ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಹೋರಾಟವು ಕಳೆದ 35 ದಿನಗಳಿಂದ ನಿರಂತರವಾಗಿ ನಡೆಯುತ್ತಿದ್ದರೂ ತಾಲೂಕ ಆಡಳಿತ, ಜಿಲ್ಲಾ ಆಡಳಿತ ಹಾಗೂ ಸಂಬಂಧಪಟ್ಟ ಶಾಸಕರು ಧರಣಿ ಸ್ಥಳಕ್ಕೆ ಭೇಟಿ ನೀಡದೆ ಇರುವುದು ಜನರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಸಮಿತಿ ತಿಳಿಸಿದೆ.
ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಪ್ರಸ್ತುತ ಉಪಚುನಾವಣೆ ನಡೆಯುತ್ತಿರುವುದರಿಂದ, ಚುನಾವಣೆ ಪೂರ್ಣಗೊಂಡ ಬಳಿಕ ನಿಮ್ಮ ಮನವಿಗೆ ಸ್ಪಂದಿಸಿ ತಾಳಿಕೋಟೆ ಪಟ್ಟಣದಲ್ಲಿಯೇ ಸ್ಥಳ ಬದಲಾವಣೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇನೆ” ಎಂದು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ
ಹೋರಾಟ ಸಮಿತಿಯ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ, ಆರ್ ಎಸ್ ಪಾಟೀಲ (ಕುಚಬಾಳ) ಮುತ್ತಪ್ಪ ಚಮಲಾಪುರ, , ಕಾಶೀನಾಥ ಮುರಾಳ, ಮಾಸುಮಸಾಬ್ ಕೆಂಭಾವಿ,ಮುರಿಗೆಪ್ಪ ಸರಶೆಟ್ಟಿ, ದತ್ತು ಹೆಬಸೂರ, ಪರಶುರಾಮ ತಂಗಡಗಿ, ವಿಜಯಸಿಂಗ್ ಹಜೇರಿ, ಮಹೇಶ ಛಲವಾದಿ, ಪ್ರಕಾಶ್ ಹಜೇರಿ ಮುದಕಪ್ಪ ಬಡಿಗೇರ, ಸಿರಸಕುಮಾರ ಹಜೇರಿ, ಕಳಕೂಸಾ ರಂಗರೇಜ್ ಬಾಬು ಹಜೇರಿ , ಸೇರಿದಂತೆ ಅನೇಕರು ಮತ್ತು ಪಟ್ಟಣದ ಗಣ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!