ವಿಜಯ ಸಿಂಧೂರ ನ್ಯೂಸ್ ಗಜೇಂದ್ರಗಡ
ಗಜೇಂದ್ರಗಡ:ವೈರಾಗ್ಯನಿಧಿ, ವೀರವಿರಾಗಿಣಿ ಅಕ್ಕಮಹಾದೇವಿಯವರು ಸ್ತ್ರೀ ಕುಲದ ಧೈರ್ಯ, ಸ್ಥೈರ್ಯ, ಸ್ವಾಭಿಮಾನದ ನಿಧಿಯಾಗಿದ್ದಾರೆ ಎಂದು ಬಣಜಿಗ ಸಮಾಜದ ಅಧ್ಯಕ್ಷ ಉಮೇಶ ಮೆಣಸಗಿ ಹೇಳಿದರು.
ಪಟ್ಟಣದ ಬಣಜಿಗ ಸಮಾಜದ ವತಿಯಿಂದ ಅಕ್ಕಮಹಾದೇವಿ ವೃತ್ತಕ್ಕೆ ಮಾಲಾರ್ಪಣೆ ಅರ್ಪಿಸಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘
ಅಕ್ಕ ಮಹಾದೇವಿಯವರ 434 ವಚನಗಳು ತುಂಬಾ ಭಾವಗೀತಾತ್ಮಕವಾಗಿವೆ. ಅಕ್ಕನ ಅಂತರಂಗದ ದರ್ಶನವಾಗುವುದು ಅವರ ಅಮೂಲ್ಯ ವಚನಗಳಲ್ಲಿ. ಉಡುತಡಿಯಿಂದ ಕಲ್ಯಾಣ, ಕಲ್ಯಾಣದಿಂದ ಶ್ರೀಶೈಲದ ಕದಳಿವನದವರೆಗಿನ ಅಕ್ಕನವರ ಪಯಣ ಅಗ್ರಗಣ್ಯವಾದುದು’ ಛಲ ಹಾಗೂ ಧೈರ್ಯದಿಂದ 12ನೇ ಶತಮಾನದ ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ಅಕ್ಕಮಹಾದೇವಿ ನಡೆಸಿದ ಹೋರಾಟ ಅನುಕರಣೀಯ’ ಎಂದು ಹೇಳಿದರು.
ಅಕ್ಕ’ ವಿರಚಿತ ವಚನಗಳಲ್ಲಿ ಪ್ರಕೃತಿಯಲ್ಲಿ ದೇವರನ್ನು ಹುಡುಕುವ ಹಂಬಲವಿದೆ. ತನ್ನ ಇಷ್ಟದೈವವಾದ ಚನ್ನಮಲ್ಲಿಕಾರ್ಜುನನನ್ನು ಅರಸುತ್ತ ಗಿಳಿ, ನವಿಲು, ತರುಲತೆಗಳ ಜೊತೆ ಅವರು ನಡೆಸುವ ಸಂವಹನ ಕನ್ನಡ ಕಾವ್ಯದಲ್ಲಿ ನಡೆದಿರುವ ಅಪರೂಪದ ಪ್ರಯೋಗ’ ಎಂದು ತಿಳಿಸಿದರು.
ಸಮಾಜದ ಮುಖಂಡ ಮುತ್ತಣ್ಣ ಮೆಣಸಿನಕಾಯಿ ಮಾತನಾಡಿ , ‘ಮುಖ್ಯವಾಹಿನಿಯಲ್ಲಿ ಮಹಿಳೆಗೆ ಪ್ರಾತಿನಿಧ್ಯವಿರದಿದ್ದ ಕಾಲಮಾನದಲ್ಲಿ ಅಕ್ಕಮಹಾದೇವಿ ಮಹತ್ವದ ಸಾಹಿತ್ಯಿಕ ಪ್ರಯೋಗಗಳನ್ನು ನಡೆಸಿದಳು. ದಿಟ್ಟತನ ಹಾಗೂ ತಾಳ್ಮೆ ಅಕ್ಕನ ವ್ಯಕ್ತಿ ಹಾಗೂ ಕಾವ್ಯದಲ್ಲಿ ಕಂಡುಬರುವ ಪ್ರಧಾನ ಗುಣಗಳು’ ಎಂದು ಹೇಳಿದರು.
ಬಣಜಿಗ ಸಮಾಜದ ಯುವ ಘಟಕದ ಅಧ್ಯಕ್ಷ ಅವಿನಾಶ ಮತ್ತಿಕಟ್ಟಿ, ಬಸವರಾಜ ಶೀಲವಂತರ, ಮುತ್ತಣ್ಣ ಚಟ್ಟೆರ, ಹುಚ್ಚಪ್ಪ ಹಾವೇರಿ, ಮಹಾಂತೇಶ ಮಳಗಿ, ಬಸವರಾಜ ವಾಲಿ ಸೇರಿದಂತೆ ಇತರರು ಇದ್ದರು.
ವರದಿ: ಶಿವಕುಮಾರ ಶಶಿಮಠ, ಉಪ ಸಂಪಾದಕರು, ವಿಜಯ ಸಿಂಧೂರ ಪತ್ರಿಕೆ
