ವಿಜಯ ಸಿಂಧೂರ ನರಗುಂದ
ಮೀಸಲಾತಿ ಪ್ರಮಾಣ ಶೇ50ರಷ್ಟು ಪ್ರಮಾಣ ಏರಿಕೆಯಾಗುತ್ತಿದೆ ಎಂದು ಪ್ರಶ್ನಿಸಿ ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ. ಈ ವ್ಯಕ್ತಿಗಳು ಕಾನೂನಾತ್ಮಕ ಹೋರಾಟ ನಡೆಸಲು ಕಾಂಗ್ರೆಸ್ ಸರ್ಕಾರವೇ ಕುಮ್ಮಕ್ಕು ನೀಡಿದೆ’ ಎಂದು ಬಿಜೆಪಿ ಎಸ್.ಸಿ ಘಟಕದ ಅಧ್ಯಕ್ಷ ಚಂದ್ರಶೇಖರ ಮಾದರ ಗಂಭೀರವಾಗಿ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ್ಯಾ. ನಾಗಮೋಹನ್ ದಾಸ್ ವರದಿ ಆದರಿಸಿ ಈ ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಿತ್ತು. ಆದರೆ ಇಂದಿರಾ ಸಹಾನಿ ಪ್ರಕರಣದ ತೀರ್ಪು ಉಲ್ಲೇಖಿಸಿ ಸಂವಿಧಾನಾತ್ಮಕ ಮಿತಿ ಶೇ50 ಮೀರಬಾರದು ಎಂದು ಕೆಲವರು ಕೋರ್ಟ್ ಮೊರೆ ಹೋಗಿದ್ದಾರೆ. ಅವರಿಗೆ ರಾಜ್ಯ ಸರ್ಕಾರವೇ ಕುಮ್ಮಕ್ಕು ನೀಡಿದೆ’ ಎಂದು ದೂರಿದರು.
‘ನ್ಯಾಯಾಲಯದಲ್ಲಿಯೂ ಅಡ್ವೋಕೇಟ್ ಜನರಲ್ ಸರ್ಕಾರದ ಬದ್ಧತೆಯನ್ನು ಸಮರ್ಥವಾಗಿ ಮಂಡಿಸಿಲ್ಲ. ಬದಲಾಗಿ ಶೇ50 ಮೀರಲು ಸಾಧ್ಯವಿಲ್ಲ ಎಂಬ ನಿಲುವು ವ್ಯಕ್ತಪಡಿಸಿದ್ದಾರೆ. ಇದು ಮೋಸವಲ್ಲದೇ ಮತ್ತೇನು? ಬಿ.ಆರ್. ಅಂಬೇಡ್ಕರ್ ಜನಸಂಖ್ಯೆ ಹೆಚ್ಚಾದರೆ ಮೀಸಲಾತಿ ಪ್ರಮಾಣ ಏರಿಕೆಗೆ ಸಂವಿಧಾನದಲ್ಲಿ ಅವಕಾಶ ನೀಡಿದ್ದಾರೆ. ಪೂನಾ ಒಪ್ಪಂದದ ಆಧಾರದಲ್ಲೂ ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ. ಆದರೆ ಈ ಅಂಶಗಳನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಪ್ರಯತ್ನವೇ ಆಗಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಒಳ ಮೀಸಲಾತಿ ಸಮರ್ಪಕ ಜಾರಿಯಾಗಿಲ್ಲ. ಎಚ್.ಸಿ.ಮಹಾದೇವಪ್ಪ, ತಿಮ್ಮಾಪುರ, ಕೆ.ಎಚ್. ಮುನಿಯಪ್ಪ, ಪ್ರಿಯಾಂಕ್ ಖರ್ಗೆ ಮೊದಲಾದವರು ಕುಳಿತುಕೊಂಡು ರಾಜಿ ನ್ಯಾಯ ಮಾದರಿಯಲ್ಲಿ ತಾವೇ ಹಂಚಿಕೊಂಡಂತೆ ಒಂದು ರೀತಿ ಮೀಸಲಾತಿ ತಮ್ಮ ಪಿತ್ರಾರ್ಜಿತ ಆಸ್ತಿ ಎಂದು ತಿಳಿದುಕೊಂಡಿದ್ದಾರೆ. ಈ ಸಚಿವರ ದಲಿತ ವಿರೋಧಿ ನೀತಿಯ ಆಟ ಅಂಬೇಡ್ಕರ್ ಅವರು ನೋಡಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು’ ಎಂದು ಹೇಳಿದರು.
ನರಗುಂದ ಮತಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಹೋರಾಟಗಾರರನ್ನು ಸಂಘಟಿಸಿ ಸರ್ಕಾರದ ಧೋರಣೆಯನ್ನು ಖಂಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಮಯದಲ್ಲಿ ಪರಸಪ್ಪ ಪೂಜಾರಿ, ಮೈಲಾರಪ್ಪ ಮಾದರ ಸೇರಿದಂತೆ ಅನೇಕರು ಇದ್ದರು.
