ವಿಜಯ ಸಿಂಧೂರ ತಾಳಿಕೋಟೆ
ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಇದರ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಮಡಿವಾಳಪ್ಪ ಅಮರಪ್ಪ ಬಿರಾದಾರ( ಗಡಿ ಸೋಮನಾಳ) ಅಧ್ಯಕ್ಷರಾಗಿ, ಮಾದೇವಿ ಪ್ರಭುಗೌಡ ಪಾಟೀಲ(ಗುತ್ತಿಹಾಳ) ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಸಹಕಾರ ಸಂಘದ ಕಾರ್ಯಾಲಯದಲ್ಲಿ ನಡೆದ ಸದರಿ ಚುನಾವಣೆಯಲ್ಲಿ ಸಂಘದ ಆಡಳಿತ ಮಂಡಳಿಯ ಒಟ್ಟು 12 ಸದಸ್ಯರಲ್ಲಿ 9 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.3 ಜನ ಸದಸ್ಯರು ಚುನಾವಣೆಗೆ ಗೈರು ಹಾಜರಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಮಡಿವಾಳಪ್ಪ ಅಮರಪ್ಪ ಬಿರಾದಾರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಾದೇವಿ ಪ್ರಭುಗೌಡ ಪಾಟೀಲ ಇವರಿಬ್ಬರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದೇ ಇರುವುದರಿಂದ ಇವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿಯೂ ಆದ ಸಹಕಾರ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ ಉತ್ನಾಳ ಘೋಷಿಸಿದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಎಸ್.ಬಿ.ಬಿರಾದಾರ ಸಹಾಯಕರಾಗಿ ಕಾರ್ಯನಿರ್ವಹಿಸಿದರು. ವಿಜಯೋತ್ಸವ: ಆರಂಭದಿಂದಲೂ ತೀವ್ರ ಹಣಾಹಣಿಗೆ ಕಾರಣವಾದ ಈ ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಿರುವುದಕ್ಕೆ ಅಧ್ಯಕ್ಷ ಮಡಿವಾಳಪ್ಪ ಬಿರಾದಾರ ಹಾಗೂ ಮಾದೇವಿ ಪಾಟೀಲ ಅವರ ಅಪಾರ ಬೆಂಬಲಿಗರು, ಮುಖಂಡರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ, ಗುಲಾಲು ಎರಚಿ, ಸಿಹಿ ವಿತರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಮಡಿವಾಳಪ್ಪ (ಮಡುಸೌಕಾರ) ಬಿರಾದಾರ ಅವರು ಮಾತನಾಡಿ ನಮ್ಮಿಬ್ಬರ ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ ಎಂದರು.
ಈ ಸಮಯದಲ್ಲಿ ಸಂಘದ ಆಡಳಿತ ಮಂಡಳಿಯ ನೂತನ ಸದಸ್ಯರಾದ ಮಾಳಪ್ಪ ಅಮಲ್ಯಾಳ, ಸಂಗನಗೌಡ ಪಾಟೀಲ, ಚಿದಾನಂದ ಬಿರಾದಾರ, ಬಾಬುಗೌಡ ಪಾಟೀಲ, ಯಮನಪ್ಪ ಹರಿಜನ, ಇರಸಂಗಪ್ಪ ದೋಳೆಕಾರ, ಸಿದ್ದಪ್ಪ ಕಟ್ಟಿಮನಿ ಹಾಗೂ ಮುಖಂಡರಾದ ಭೀಮನಗೌಡ ತಂಗಡಗಿ, ಜೈಭೀಮ ಮುತ್ತಗಿ, ಜಗನ್ನಾಥ ಮಸರಕಲ್ಲ,ನಿಂಗನಗೌಡ ಬಿರಾದಾರ,ಮೂಸಾ ಕಾಚಾಪೂರ, ಕುಮಾರಗೌಡ ಪಾಟೀಲ, ಪ್ರಫುಲ್ ಮುರಬಾಗಿ ಮತ್ತಿತರರು ಇದ್ದರು.
“ಆಡಳಿತ ಮಂಡಳಿಯ ಎಲ್ಲ ಸದಸ್ಯರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷಾತೀತವಾಗಿ ಸಂಘದ ಅಭಿವೃದ್ಧಿಗೆ ಶಕ್ತಿಮೀರಿ ಪ್ರಯತ್ನಿಸುತ್ತೇನೆ.” ಮಡುಸೌಕಾರ ಬಿರಾದಾರ ಸಂಘದ ನೂತನ ಅಧ್ಯಕ್ಷ.
