ವಿಜಯ ಸಿಂಧೂರ ತಾಳಿಕೋಟೆ
ನಿಸರ್ಗ ರಮಣೀಯ ಗುಡ್ಡಾಪುರ ದಾನಮ್ಮದೇವಿ ಕ್ಷೇತ್ರ ಲಕ್ಷಾಂತರ ಭಕ್ತರ ಶ್ರದ್ಧಾಕೇಂದ್ರ, ಕ್ಷೇತ್ರದಲ್ಲಿ ನೆಲೆಸಿರುವ ದಾನಮ್ಮದೇವಿ ನಂಬಿದವರ ಇಷ್ಟಾರ್ಥ ಈಡೇರಿಸುತ್ತ ಭಕ್ತರ ಪಾಲಿನ ಭಾಗ್ಯದೇವಿ ಎನಿಸಿದ್ದಾಳೆ ಎಂದು ಬಿಜೆಪಿ ಮುಖಂಡ ಬಸನಗೌಡ ಪಾಟೀಲ,ಯಡಿಯಾಪೂರ ಹೇಳಿದರು
ಅವರು ಮಂಗಳವಾರ ತಾಲೂಕಿನ ನಾವದಗಿ ಗ್ರಾಮದ ಬ್ರಹ್ಮಠದ ಶಿವಾಚಾರ್ಯ ಮಹಾಸ್ವಾಮಿಗಳವರ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವ ನಿಮಿತ್ಯ ಹಮ್ಮಿಕೊಂಡ ದಾನಮ್ಮದೇವಿ ಪುರಾಣ ಮಂಗಲ, ಗುರುವಂದನೆ ಹಾಗೂ ಧಾರ್ಮಿಕ ಸಭೆ ಉದ್ದೇಶಿಸಿ ಮಾತನಾಡಿದರು.

ಶಿವಯೋಗ ಸಾಧನೆ, ದಾಸೋಹ, ಕಾಯಕ ನಿಷ್ಠೆ, ಸತ್ಯ, ಧರ್ಮ, ನ್ಯಾಯ ಮೊದಲಾದ ಅಷ್ಟ ಗುಣಗಳನ್ನು ಅಳವಡಿಸಿಕೊಂಡ ದಾನಮ್ಮದೇವಿ ನುಡಿದದ್ದೆಲ್ಲ ಶಿವತತ್ತ್ವವಾಯಿತು, ನಡೆದದ್ದೆಲ್ಲ ಶಿವಪಥವಾಯಿತು ಎಂದರು
ಭಕ್ತರ ಉದ್ದಾರಕ್ಕಾಗಿ ದಾನಮ್ಮ ದೇವಿ ಮಹಾರಾಷ್ಟ್ರದ ಗುಡ್ಡಾಪುರದಲ್ಲಿ ನೆಲೆಸಿದ್ದರೂ ದೇವಿಯ ಹೆಚ್ಚು ಭಕ್ತರು ಕನ್ನಡಿಗರೇ ಆಗಿದ್ದಾರೆ. ಉಮರಾಣಿ ಗ್ರಾಮದ ಅನಂತರಾಯ ಹಾಗೂ ಶಿರಸಮ್ಮನವರ ಪುತ್ರಿಯಾಗಿ ಜನಿಸಿದ ದೇವಿ ಸಂಗಮೇಶ ಗುರುಗಳಿಂದ ಲಿಂಗಮ್ಮ ಎಂಬ ಹೆಸರನ್ನು ಪಡೆದಳು ಎಂದರು.
ಶಿವಶರಣರ ಸತ್ಸಂಗ ಬಯಸಿ ಕಲ್ಯಾಣಕ್ಕೆ ಹೋಗಿ ಅಲ್ಲಿ ಚನ್ನಬಸವಣ್ಣನವರಿಂದ ಲಿಂಗದೀಕ್ಷೆ ಪಡೆದು ದೃಷ್ಟಿಯೋಗದಲ್ಲಿ ಸಿದ್ದಿ ಹೊಂದಿದಳು. ಸಿದ್ಧರಾಮರ ಸಮಾಜ ಸೇವೆ ಕಂಡು ಪ್ರಭಾವಿತಳಾದ ಲಿಂಗಮ್ಮಳ ದಾನ ಮಾಡುವ ಗುಣ ಕಂಡು ಬಸವಣ್ಣನವರು ದಾನಮ್ಮದೇವಿ ಎಂದು ಕರೆದು ನಿನ್ನಿಂದ ಲೋಕ ಕಲ್ಯಾಣವಾಗಲೆಂದು ಹರಸಿದರು. ನಂತರ ಸಂಖ ಗ್ರಾಮಕ್ಕೆ ಬಂದು ಶರಣ ಸೋಮನಾಥನೊಂದಿಗೆ ಮದುವೆಯಾಗಿ ಕರುಣಸಿಂಧು, ಪತಧಾನ್ಯ, ಶಕ್ತಿದೇವಿ, ಯುಗಂತ ಅವತಾರೆ, ಶ್ರೀಶಕ್ತಿ, ದೈವಶಕ್ತಿ ಹೀಗೆ ಹಲವು ಹೆಸರು ಪಡೆದಳು ಎಂದು ಹೇಳಿದರು.
ಬಚನೂರ ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳು ಮಾತನಾಡಿ, 12ನೇ ಶತಮಾನದಲ್ಲಿ ಧರ್ಮ ಜಾಗೃತಿಗಾಗಿ ದೇಶ ಸಂಚಾರ ಮಾಡುತ್ತ ಲೋಕಕಲ್ಯಾಣ ಪರಮಾರ್ಥದ ಹಾದಿ ಹಿಡಿದು ಗುಡ್ಡಾಪುರದಲ್ಲಿ ಬಂದು ನೆಲೆಸಿದ ದೇವಿ ಭಕ್ತಿಯಿಂದ ಪ್ರಾರ್ಥಿಸಿದವರಿಗೆ ‘ಇಷ್ಟಾರ್ಥ’ ಕರುಣಿಸುತ್ತಾಳೆ ಎಂಬುದು ಭಕ್ತರ ನಂಬಿಕೆ. ಬಡವ ಬಲ್ಲಿದ ಎನ್ನದೆ ಎಲ್ಲ ವರ್ಗದ ಜನ ಇಲ್ಲಿಗೆ ಆಗಮಿಸಿ ಭಕ್ತಿ ಸೇವೆ ಸಮರ್ಪಿಸುವುದರಿಂದ ದೇವಿ, ನೊಂದವರ ಮನೆಮಾತಾಗಿದ್ದಾಳೆ. ನೊಂದವರ ನಂದಾದೀಪ ಎಂದೇ ಮನೆ ಮಾತಾಗಿದ್ದಾಳೆ ಎಂದು ಹೇಳಿದರು
ಚಬನೂರಿನ ಜ್ಯೋತಿಷ್ಯ ರತ್ನ ರಾಮಲಿಂಗಯ್ಯ ಮಹಾಸ್ವಾಮಿಗಳು ಮಾತನಾಡಿ ಐಹಿಕ ಜೀವನದ ಅತಿಯಾದ ಮೋಹದಿಂದ ಬದುಕಿನ ಉದ್ದೇಶವನ್ನು ಮರೆಯಬೇಡಿ, ಗುರುವಿನ ಮಾರ್ಗದರ್ಶನದಲ್ಲಿ ನಡೆದು ಬದುಕಿನ ಸಾರ್ಥಕತೆಯನ್ನು ಕಂಡುಕೊಳ್ಳಿ, ಪೂಜ್ಯ ರಾಜೇಂದ್ರ ಶಿವಾಚಾರ್ಯರ ಧರ್ಮ ಕಾರ್ಯಗಳಿಗೆ ಇದೇ ರೀತಿಯ ಸಹಕಾರ ಮುಂದೆಯೂ ಇರಲಿ ಎಂದರು.
ಸಾನಿಧ್ಯ ವಹಿಸಿದ ದೇವದುರ್ಗದ ಕಪಿಲ ಸಿದ್ದರಾಮ ಶಿವಾಚಾರ್ಯರು ಹಾಗೂ ಕೊಡೆಕಲ್ಲದ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ ಭಕ್ತಿಗೆ ಇನ್ನೊಂದು ಹೆಸರೇ ನಾವದಗಿ ಗ್ರಾಮ.ಪರ್ವತೇಶ್ವರ ಮಠ ಶ್ರೇಷ್ಠ ಆಧ್ಯಾತ್ಮಿಕ ಪರಂಪರೆಯನ್ನು ಹೊಂದಿದೆ, ಇದರ ಪೀಠಾಧಿಪತಿಗಳಾದ ರಾಜೇಂದ್ರ ಒಡೆಯರ್ ಅವರು ಸರಳ ಸಜ್ಜನ ಶರಣರು. ಈ ಭಾಗದ ಭಕ್ತರನ್ನು ಆಧ್ಯಾತ್ಮಿಕವಾಗಿ ಸಂಸ್ಕರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನಿಮ್ಮೆಲ್ಲರ ಭಕ್ತಿ ಮತ್ತು ಪ್ರೀತಿ ಅವರ ಮೇಲೆ ಸದಾ ಇದೇ ರೀತಿಯಾಗಿರಲಿ ಎಂದರು.
ಲಕ್ಕುಂಡಿಯ ಶರಣ ಅಪ್ಪಸಾಹೇಬಗೌಡ ಭೀ.ಪಾಟೀಲ ಕುಟುಂಬದಿಂದ ರಾಜೇಂದ್ರ ಒಡೆಯರ್ ಶಿವಾಚಾರ್ಯರಿಗೆ ತುಲಾಭಾರ ಹಾಗೂ ಸರ್ವ ಪೂಜ್ಯರಿಂದ ವಿಶೇಷ ಗುರುವಂದನಾ ಕಾರ್ಯಕ್ರಮ ಜರುಗಿತು.
ತುಂಬಗಿ-ಸಾಸನೂರ ಹಿರೇಮಠದ ಪೂಜ್ಯ ಮಹಾಂತಲಿಂಗ ಶಿವಾಚಾರ್ಯರು ದಿವ್ಯ ಸಾನಿಧ್ಯ ವಹಿಸಿದ್ದರು.
ಕಾರ್ಯಕ್ರಮದಲ್ಲಿ 20 ದಿನಗಳ ಕಾಲ ಸೇವೆ ಗೈದ ಮಹನೀಯರಿಗೆ ಶ್ರೀಮಠದಿಂದ ಗೌರವಿಸಲಾಯಿತು.
ಶಾಲಾ ಮಕ್ಕಳು ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.ಷ.ಬ್ರ. ಶ್ರೀ ರಾಜ ಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯ ಮಹಾಸ್ವಾಮಿಗಳು ಸಭೆಯ ಸಮ್ಮುಖ ವಹಿಸಿ ಆಶೀರ್ವಚನ ನೀಡಿದರು.ಸಾಹಿತಿ ಬಸವರಾಜ ಗೊರಜಿ ಹಾಗೂ ಡಾ.ಸೋಮಶೇಖರಯ್ಯ ಹಿರೇಮಠ ಕಾರ್ಯಕ್ರಮ ನಿರ್ವಹಿಸಿದರು.
ವೇದಿಕೆ ಕಾರ್ಯಕ್ರಮ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಶ್ರೀ ಗುರು ಪರ್ವತೇಶ್ವರರ ಭಾವಚಿತ್ರ ಹಾಗೂ ಧರ್ಮ ಗ್ರಂಥದ ಭವ್ಯ ಮೆರವಣಿಗೆ ನಡೆಯಿತು. ದೇವರ ಹಿಪ್ಪರಗಿ ಪರದೇಶಿ ಮಠದ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು, ಕಲ್ಮಠದ ಸಿದ್ದಲಿಂಗ ಮಹಾಸ್ವಾಮಿಗಳು, ಮಾತೋಶ್ರೀ ಸಾವಿತ್ರಿ ಅಮ್ಮನವರು ಸಮ್ಮುಖ ವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ.ಗುರುಲಿಂಗಯ್ಯ ಹಿರೇಮಠ, ಸಿ.ಸಿ.ಕರಡಕಲ್, ಶರಣಗೌಡ ಇಬ್ರಾಹಿಂಪೂರ, ರವಿಧಣಿ ದೇಶಮುಖ,ಎಸ್.ಎಸ್.ಹಾವರಗಿ, ಪುರಾಣಿಕ ರಾಚಯ್ಯ ಹಿರೇಮಠ, ಗ್ರಾಮದ ಗಣ್ಯರು, ಹಿರಿಯರು, ನಾವದಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಶ್ರೀ ಮಠದ ಭಕ್ತರು ಇದ್ದರು.
“ಸುಕ್ಷೇತ್ರ ನಾವದಗಿಯ ಬ್ರಹನ್ಮಠ ನನ್ನ ಮಠ ಅಲ್ಲ ಇದು ಭಕ್ತರ ಮಠ. ಗುರು ಪಟ್ಟಾಧಿಕಾರದ ದ್ವಿತೀಯ ವರ್ಷದ ಕಾರ್ಯಕ್ರಮದ ಯಶಸ್ವಿಗೆ ತನು ಮನ ಧನದಿಂದ ಸಹಕರಿಸಿದ ತಮ್ಮೆಲ್ಲರಿಗೂ ಅಭಿನಂದಿಸುತ್ತೇನೆ. ಶ್ರೀಪರ್ವತೇಶ್ವರರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.” ಷ.ಬ್ರ.ರಾಜಗುರು ರಾಜೇಂದ್ರ ಒಡೆಯರ್ ಶಿವಾಚಾರ್ಯರು ನಾವದಗಿ ಹೇಳಿದರು.
