ವಿಜಯ ಸಿಂಧೂರ ರೋಣ
‘ಕರ್ನಾಟಕದ ಆರ್ಥಿಕತೆ ಅಧೋಗತಿಗೆ ತಲುಪಿದ್ದು, ಸಿದ್ದರಾಮಯ್ಯ ಸರ್ಕಾರದಿಂದ ರಾಜ್ಯದ ಭವಿಷ್ಯ ಅಡ್ಡಗೋಡೆ ಮೇಲೆ ಇಟ್ಟಂತಾಗಿದೆ.ಈ ಬಜೆಟ್ ರಾಜ್ಯದ ಆರ್ಥಿಕತೆ ಅಧೋಗತಿಗೆ ತಳ್ಳಿದೆ ಎಂದು ಬಿಜೆಪಿ ಎಸ್.ಸಿ ಮೊರ್ಚಾ ಯುವ ಘಟಕದ ಅಧ್ಯಕ್ಷ ಚಂದ್ರಶೇಖರ ಮಾದರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಜೆಟ್ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಕೊಡುತ್ತೇವೆ ಎಂದು ಬೊಗಳೆ ಬಿಟ್ಟು ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಇಂದು ಕರ್ನಾಟಕದಲ್ಲಿ ‘ಸರ್ವರಿಗೂ ತೆರಿಗೆ, ಸರ್ವರಿಗೂ ಸಾಲ’ ಎಂಬ ಸ್ಥಿತಿ ನಿರ್ಮಿಸಿದೆ ಎಂದರು
‘ಜನರ ಕೆಂಗಣ್ಣಿಗೆ ಗುರಿಯಾಗಿ ಮುಜುಗರಕ್ಕೀಡಾಗುವ ಪರಿಸ್ಥಿತಿ ಬಂದಾಗಲೆಲ್ಲ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಿ ಜನರನ್ನು ದಿಕ್ಕು ತಪ್ಪಿಸುವ ಚಾಳಿಯನ್ನು ಬಜೆಟ್‌ನಲ್ಲಿಯೂ ಮುಂದುವರೆಸಿರುವ ಸಿದ್ದರಾಮಯ್ಯನವರು ಬಜೆಟ್ ಭಾಷಣದಲ್ಲೂ ಅದೇ ಚಾಳಿ ಪ್ರದರ್ಶನ ಮಾಡಿದ್ದಾರೆ. ರಾಜ್ಯದ ಆರ್ಥಿಕ ಭವಿಷ್ಯಕ್ಕೆ ಸ್ಪಷ್ಟ ದಿಕ್ಕು ನೀಡಬೇಕಾದ ಬಜೆಟ್‌ನಲ್ಲಿ ವಾಸ್ತವ ಸ್ಥಿತಿಗತಿಗಳನ್ನು ಪ್ರಾಮಾಣಿಕವಾಗಿ ಹೇಳುವ ಬದಲು ಕಟ್ಟು ಕಥೆಗಳನ್ನು ಹೇಳುತ್ತಾ ಕಾಲಹರಣ ಮಾಡಲಾಗಿದೆ’ ಎಂದರು
‘ಕಾಂಗ್ರೆಸ್ ಸರ್ಕಾರದ ಸಾಲದ ಪ್ರಮಾಣವೇ ಅದರ ಆರ್ಥಿಕ ನಿರ್ವಹಣೆಯ ನಿಜ ಮುಖವನ್ನು ಬಯಲಿಗೆಳೆಯುತ್ತದೆ. 2023-24 ₹82,000 2023, 2024-25ರಲ್ಲಿ ₹1.05 ಲಕ್ಷ ಕೋಟಿ, 2025-26ರಲ್ಲಿ ₹1.16 ಲಕ್ಷ ಕೋಟಿ, ಮತ್ತು ಈಗ 2026-27ರ ಬಜೆಟ್ ಅಂದಾಜಿನಲ್ಲಿ ₹1.32 ಲಕ್ಷ ಕೋಟಿ ಸಾಲ ಮಾಡಲು ಯೋಜನೆ ರೂಪಿಸಲಾಗಿದೆ. ಅಂದರೆ ಕೇವಲ ನಾಲ್ಕು ವರ್ಷಗಳಲ್ಲಿ ಈ ಸರ್ಕಾರವು ಸುಮಾರು ₹4.4 ಲಕ್ಷ ಕೋಟಿ ಹೊಸ ಸಾಲ ಮಾಡುವ ಪರಿಸ್ಥಿತಿ ಉಂಟುಮಾಡಿದೆ. ಇದು ಅಭಿವೃದ್ಧಿಗಾಗಿ ಮಾಡಿದ ಸಾಲವೇ? ಅಥವಾ ಚುನಾವಣಾ ಗ್ಯಾರಂಟಿಗಳಿಗಾಗಿ ರಾಜ್ಯದ ಭವಿಷ್ಯವನ್ನು ಒತ್ತೆ ಇಟ್ಟ ಸಾಲವೇ ಎಂಬ ಪ್ರಶ್ನೆ ಇಂದು ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಮೂಡಿದೆ’ ಎಂದು ಕುಟುಕಿದ್ದಾರೆ.
‘ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಹಣಕಾಸಿನ ಶಿಸ್ತನ್ನು ಕಟ್ಟುನಿಟ್ಟಾಗಿ ಕಾಪಾಡಲಾಗಿತ್ತು. ರಾಜ್ಯದ ಸಾಲವು ರಾಜ್ಯದ ಒಟ್ಟು ಆಂತರಿಕ ಉತ್ಪನ್ನ (ಜಿಎಸ್‌ಡಿಪಿ) ಶೇಕಡ 25ರ ಒಳಗೆ ಇತ್ತು. ಫಿಸ್ಕಲ್ ಡೆಫಿಸಿಟ್ ಶೇಕಡ 3ರೊಳಗೆ ಇತ್ತು ಮತ್ತು ಹಲವಾರು ವರ್ಷಗಳಲ್ಲಿ ರಾಜಸ್ವ ಉಳಿಕೆ ಕೂಡ ಇತ್ತು. ಆದರೆ ಇಂದು ಸ್ಥಿತಿ ಸಂಪೂರ್ಣ ಬದಲಾಗಿದೆ. ಸಾಲ ಮಾಡಿ ಸಂಬಳ ಕೊಡುವ ಮಟ್ಟಕ್ಕೆ ರಾಜ್ಯವನ್ನು ತಳ್ಳಿರುವುದು ಈ ಕಾಂಗ್ರೆಸ್ ಸರ್ಕಾರದ ಆರ್ಥಿಕ ದುರಾಡಳಿತದ ಸ್ಪಷ್ಟ ಉದಾಹರಣೆ. ಅಭಿವೃದ್ಧಿಯ ಬದಲು ಸಾಲ, ಆರ್ಥಿಕ ಶಿಸ್ತಿನ ಬದಲು ಅರಾಜಕತೆ, ದೂರದೃಷ್ಟಿಯ ಬದಲು ಕೇಂದ್ರ ಸರ್ಕಾರದತ್ತ ಬೊಟ್ಟು ಮಾಡುವ ಕ್ಷುಲ್ಲಕ ರಾಜಕೀಯ, ಇದೇ ಸಿದ್ದರಾಮಯ್ಯ ಅವರ ಬಜೆಟ್‌ನ ನಿಜ ಸ್ವರೂಪವಾಗಿದೆ’ ಎಂದು ಹೇಳಿದ್ದಾರೆ.
