ವಿಜಯ ಸಿಂಧೂರ,ಡಂಬಳ
ಅಂಬೇಡ್ಕರ್ ಒಂದು ಸಮಾಜದ ಸೂರ್ಯ ಅಲ್ಲ, ಪ್ರತಿ ಸಮಾಜದ ಬೆಳಕು. ಅವರ ಜ್ಞಾನ ಸಂಪತ್ತು ಗಳಿಸಿಕೊಂಡರೆ ನಮ್ಮ ಆರ್ಥಿಕ, ರಾಜಕೀಯ, ಸಾಮಾಜಿಕ, ರಾಜಕೀಯ ಸಂಪತ್ತು ಸಿಗುತ್ತವೆ. ಅಂಬೇಡ್ಕರ್ ಅವರು ಜಗತ್ತೇ ಭಯಪಡುವಂತೆ ಓದಿದರು ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್.ಪಾಟೀಲ ಹೇಳಿದರು.
ಅವರು ಶನಿವಾರ ಮುಂಡರಗಿ ತಾಲೂಕಿನ ಡಂಬಳ ಗ್ರಾಮದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಅಂಬೇಡ್ಕರ್ ಮೂರ್ತಿ ಪೂಜೆ ಮಾಡುವುದನ್ನು ವಿರೋಧಿಸಿದವರು. ಮೂರ್ತಿ ಸ್ಥಾಪನೆಯಲ್ಲಿ ಹೆಚ್ಚು ಆಸಕ್ತಿ ವಹಿಸಿದಷ್ಟು ಅವರ ಚಿಂತನೆಗೆ ಹೇಗೆ ಮಹತ್ವ ಕೊಟ್ಟಿಲ್ಲ. ಇಂದಿನ ಮಕ್ಕಳೂ ಅವರಂತೆ ಓದಬೇಕು. ಆದರೆ, ಇಂದಿನ ಯುವ ಪಿಳಿಗೆಯ ಆಲೋಚನೆಗಳು ಭಿನ್ನ ಇರುವುದನ್ನ ನೋಡಿದರೆ ಆತಂಕವಾಗುತ್ತದೆ. ಮೂಢನಂಬಿಕೆ ತೊಲಗಿಸಿ ವೈಚಾರಿಕತೆ ತೊಡಗಿಸಿಕೊಳ್ಳಬೇಕು. ಅಂಬೇಡ್ಕರ್ ಅವರ ಬದುಕಿನ ಕೃತಿಗಳನ್ನ ಓದಿ ಅವರು ಅರ್ಥವಾಗುತ್ತದೆ” ಎಂದು ಹೇಳಿದರು.
“ಅಂಬೇಡ್ಕರ್ ಜಿವನ ಕಾಲದಲ್ಲಿ ಅವರದೇ ಅದ ಸಮುದಾಯದ ಪೀಳಿಗೆಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿ ಸಮಾನತೆಯನ್ನು ಪಡೆಯಲು ದೂರದೃಷ್ಟಿ ಇಟ್ಟುಕೊಂಡಿದ್ದರು. ಬಾಬಾ ಸಾಹೇಬ್‌ರನ್ನು ಒಂದೇ ಜಾತಿಗೆ ಸೀಮಿತಗೊಳಿಸುವ ಕೆಲಸ ದುರಾದೃಷ್ಟಕರ. ಜಾತಿ ತಾರತಮ್ಯ ಹೆಚ್ಚಾಗಿದೆ. ಇದು ಕೆಟ್ಟ ವ್ಯವಸ್ಥೆ. ಸಂವಿಧಾನ ಎಲ್ಲ ರೀತಿಯ ಸಮಾನತೆ ಕೊಟ್ಟಿದ್ದರೂ ಸಂವಿಧಾನ ಬದಲಾವಣೆಯ ಮಾತು ಹೆಚ್ಚು ಕೇಳಿಬರುತ್ತಿದೆ” ಎಂದು ವಿಷಾದ ವ್ಯಕ್ತಪಡಿಸಿದರು.
ಮುಖಂಡ ಗೋಣಿಬಸಪ್ಪ ಕೊರ್ಲಹಳ್ಳಿ ಮಾತನಾಡಿ, “ಇವತ್ತು ಮೂರ್ತಿ ಯಾಕೆ ಬೇಕು ಎಂಬ ವಿಚಾರ ಬರುತ್ತದೆ. ಪಠ್ಯಕ್ರಮದಲ್ಲಿ ಓದಿದರೆ ಅದರ ಬಗ್ಗೆ ಆ ವ್ಯಕ್ತಿ ಬಗ್ಗೆ ತಿಳಿಯಲ್ಲ. ಆ ಮೂರ್ತಿ ಪ್ರತಿಷ್ಠಾಪನೆಯಾಗಬೇಕು ಅದನ್ನು ತೋರಿಸಿ ಅವರ ಕೊಡುಗೆ ಬಗ್ಗೆ ತಿಳಿಸಿ ಹೇಳುವಂತದ್ದಾಗಬೇಕು. ಮೂರ್ತಿ ಕೇವಲ ಪೂಜೆಗೆ ಮೀಸಲಾಗದೆ, ಅವರ ಆದರ್ಶಗಳನ್ನು ಜಿವನದಲ್ಲಿ ಅಳವಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ನಮ್ಮ ಮಕ್ಕಳು ಅಂಬೇಡ್ಕರ್ ಅವರ ದಾರಿಯಲ್ಲಿ ಸಾಗುವಂತೆ ಪ್ರೇರೇಪಿಸಬೇಕು. ಮಾನವ ಅಂದ ಮೇಲೆ ಮಾನವೀಯತೆ ಇರಬೇಕು. ನಾವು ಯಾವುದೇ ಜಾತಿಗೆ, ದೇವರಿಗೆ, ಧರ್ಮಕ್ಕೆ ಮೀಸಲಾಗಬಾರದು, ಅದನ್ನು ಮೀರಿ ಮಾನವೀಯತೆ ಬೆಳೆಸಿಕೊಳ್ಳಬೇಕು” ಎಂದರು.
ಡಿ.ಡಿ.ಮೊನಾಳ ಮಾತನಾಡಿ, “ಜಾತಿ ತಾರತಮ್ಯ ಈ ದೇಶದಿಂದ ಸಂಪೂರ್ಣ ತೊಲಗಿಲ್ಲ. ಸ್ವತಂತ್ರ ಉದ್ಯೋಗ ಸೃಷ್ಟಿಸಿಕೊಳ್ಳಬೇಕು. ಸಮಾಜದಲ್ಲಿ ಆರ್ಥಿಕವಾಗಿ ಸಭಲರಾಗಬೇಕು. ಸ್ವತಂತ್ರ ಆರ್ಥಿಕ ಮೂಲಗಳನ್ನು ನಾವು ಕಟ್ಟಿಕೊಳ್ಳಬೇಕು. ಹಣ ಇಲ್ಲದವರನ್ನೂ ಅಗೌರವದಿಂದ ಕಾಣುವ ವ್ಯವಸ್ಥೆ ಇದೆ. ಅಂಬೇಡ್ಕರ್ ವಿಚಾರಗಳನ್ನು, ಆದರ್ಶಗಳನ್ನು ನಮ್ಮ ಮಕ್ಕಳಲ್ಲಿ ಬಿತ್ತುವಂತ ಕೆಲಸವಾಗಬೇಕು” ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ಪೂಜ್ಯ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ,
ವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಕೇವಲ ಮೀಸಲಾತಿ ಸೌಲಭ್ಯ ಕೊಟ್ಟ ಮಹಾಪುರುಷ ಮಾತ್ರವಲ್ಲ; ಪ್ರತಿಯೊಬ್ಬರಿಗೂ ಬದುಕುವ ಹಕ್ಕು ಕೊಟ್ಟ ಮಹಾ ಜ್ಞಾನಿ ಎಂದರು
ಶಾಂತಿ, ಸಮಾನತೆಗೆ ಕನಸಿದ ಬುದ್ಧ, ಬಸವ, ಅಂಬೇಡ್ಕರ್ ಅವರು ಕೇವಲ ಜಯಂತಿಗಾಗಿ ಮಾತ್ರ ನೆನಪಾಗದೆ ಸದಾ ಪ್ರಜ್ಞೆಯಾಗಿ ನಮ್ಮೊಳಗೆ ನೆಲೆಸಿರಬೇಕು ಎಂದು ಕರೆ ನೀಡಿದರು.
ಡಾ. ಅಂಬೇಡ್ಕರ್ ಅವರು ಖಡ್ಗದ ಬದಲಿಗೆ ಜ್ಞಾನದ ಶಕ್ತಿ ಕೊಟ್ಟಿದ್ದಾರೆ. ಅದನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ಅವರ ಹೆಸರನ್ನು ಘರ್ಷಣೆ, ಕಾನೂನು, ಸಂದರ್ಭಕ್ಕೆ ತಕ್ಕಂತೆ ಬಳಸದೆ ಓದುವುದಕ್ಕಾಗಿ ಬಳಸಬೇಕು ಎಂದು ಕಿವಿಮಾತು ಹೇಳಿದರು.
ಡಿ.ಡಿ. ಮೋರನಾಳ, ಅಬ್ದುಲಸಾಬ ಕಲಕೇರಿ, ಬಸವರಡ್ಡಿ ಬಂಡಿಹಾಳ, ಪುಲಕೇಶಗೌಡ ಪಾಟೀಲ, ರವಿ ದೊಡ್ಡಮನಿ, ಸೋಮಪ್ಪ ಹೈತಾಪುರ, ರಾಮಣ್ಣ ಮೇಗಲಮನಿ, ಹೇಮಣ್ಣ ಪೂಜಾರ ಸೇರಿದಂತೆ ಅನೇಕರು ಇದ್ದರು.
