ತಾಳಿಕೋಟೆ : ಆದಿಕಾಲದಿಂದ ಆಧುನಿಕ ಕಾಲದವರೆಗೆ ಎಲ್ಲರ ವಿಚಾರವು ಒಂದೇ, ಅದು ಏನೆಂದರೆ ಹೆಣ್ಣು ಗಂಡುಗಳಲ್ಲಿ ಮೇಲು ಕೀಳುಗಳಿಲ್ಲ,ಆತ್ಮಕ್ಕೆ ಜಾತಿ,ಲಿಂಗಗಳ ಭೇದವಿಲ್ಲ ಎಂದು ತಾಳಿಕೋಟೆಯ ತಾಲ್ಲುಕು ದಂಡಾಧಿಕಾರಿಗಳಾದ ಡಾ.ವಿನಯಾ ಹೂಗಾರ ಅವರು ಮಾತನಾಡಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ,ಯುವ ಘಟಕ ಹಾಗೂ ಕದಳಿ ವೇದಿಕೆ ತಾಳಿಕೋಟೆ ತಾಲ್ಲೂಕು ಘಟಕ ವತಿಯಿಂದ ದತ್ತಿ ಉಪನ್ಯಾಸ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಶುಕ್ರವಾರ ಸಾಯಂಕಾಲದಂದು ಪಟ್ಟಣದ ಕಾಳಿಕಾಮಾತೆ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ ತಾಲ್ಲೂಕು ದಂಡಾಧಿಕಾರಿಗಳಾದ ಡಾ. ವಿನಯಾ ಹೂಗಾರ ಅವರು ” ಮಹಿಳಾ ಸಬಲೀಕರಣಕ್ಕೆ ಶಿವಶರಣರ ಕೊಡುಗೆ” ಎಂಬ ವಿಷಯವಾಗಿ ಅವರು ಮಾತನಾಡಿ,ಸ್ತ್ರೀ ವಾದ ಪುರುಷವಾದ ಎಂದು ಸಮಾಜದಲ್ಲಿ ಏರುಪೇರುಗಳನ್ನುಂಟು ಮಾಡುವುದಲ್ಲ,ಸಮ ಸಮಾಜವನ್ನು ಕಟ್ಟುವ ಕನಸು ಆಗಬೇಕಿದೆ.ಮಕ್ಕಳಿಗೆ ವಚನ ತತ್ವದ ಅರಿವು ಮೂಡಿಸಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಲಿಂ.ಶರಣ ಶಂಕ್ರಪ್ಪ ಪರಪ್ಪ ಸರ ಶೆಟ್ಟಿ , ಲಿಂ.ಶರಣ ಪರಪ್ಪ ದೇವಪ್ಪ ಸರ ಶೆಟ್ಟಿ ಹಾಗೂ ಲಿಂ.ಶರಣೆ ದಾನಮ್ಮ ಪರಪ್ಪ ಸರ ಶೆಟ್ಟಿ ಅವರ ಸಂಸ್ಮರಣೆಯ ಅಂಗವಾಗಿ ಶರಣೆ ಶ್ರೀಮತಿ ಸುಮಂಗಲ ಈರಣ್ಣ ಕಲಬುರ್ಗಿ ಅವರು ದತ್ತಿದಾನಿಗಳಾಗಿದ್ದು ಅವರನ್ನು ವೇದಿಕೆ ಮೂಲಕ ಸನ್ಮಾನಿಸಲಾಯಿತು.
ಸಮಾಜ ಮುಖಿಯಾಗಿ ಕೆಲಸಮಾಡಿ ,ಹಸಿದವರಿಗೆ ಅನ್ನ ನೀಡುವ ,ತೃಷೆಯಾದಾಗ ನೀರುಣಿಸುವ ದಾಸೋಹ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಲಿಂ ಎಸ್.ಪಿ.ಸರಶೆಟ್ಟಿ ಅವರು ಹಾಗೂ ಅವರ ಸಮಗ್ರ ಕುಟುಂಬ ಶರಣರ ತತ್ವದಂತೆ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆ ಎಂದು ಶರಣ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶಿಕ್ಷಕ ಸಾಹಿತಿ ಸಾಹೇಬಗೌಡ ಬಿರಾದಾರ ಅವರು ದತ್ತಿ ಸಂಸ್ಮರಣೆ ಕುರಿತು ಮಾತನಾಡಿದರು.
ಇದೆ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಎಸ್ ಕೆ ಮಹಿಳಾ ಕಾಲೇಜಿನ ಉಪನ್ಯಾಸಕಿ ಜ್ಯೋತಿ ಹಿರೇಮಠ ಮಾತನಾಡಿ
ಆಯ್ದಕ್ಕಿ ಲಕ್ಕಮ್ಮನಿಂದ ಇಂದಿನವರೆಗೂ ಸಾಂಸ್ಕೃತಿಕವಾಗಿ ಮಹಿಳೆಯರು ಮುನ್ನಡೆಯತ್ತಿದ್ದಾರೆ.ಹೆಣ್ಣಾಗಿ ಹುಟ್ಟಿದ್ದೇವೆ ಎಂಬುದಕ್ಕೆ ಹೆಮ್ಮೆಪಡೋಣ ಎಂದು ಸಾಧಕಿಯರ ಹೆಸರುಗಳನ್ನು ತಿಳಿಸುತ್ತ ಜಗದ ಸಾಧನೆಗೆ ಹೆಣ್ಣು ಮಕ್ಕಳ ಕೊಡುಗೆ ಅಪಾರ ಎಂದರು.
ವೇದಿಕೆಯ ಮೇಲೆ ಶ್ರೀಮತಿ ಸುರೇಖಾ ಬಿಳೇಬಾವಿ, ನಿರ್ದೇಶಕರು, ಶಾರದಾದೇವಿ ಮಹಿಳಾಬ್ಯಾಂಕ್,ತಾಳಿಕೋಟೆ ಅವರು ಮಹಿಳೆಯರ ತ್ಯಾಗ ಮತ್ತು ಮಹತ್ವ ಕುರಿತು ಮಾತನಾಡಿದರು.
ಕದಳಿವೇದಿಕೆಯ ತಾಲ್ಲೂಕು ಅಧ್ಯಕ್ಷರಾದ ಶ್ರೀಮತಿ ಉಮಾ ಘಿವಾರಿ ಅವರು ಮಾತನಾಡಿ ಶಿವಶರಣರು ಮಹಿಳಾ ಸಬಲೀಕರಣಕ್ಕೆ ನಾಂದಿ ಹಾಡಿದ್ದಾರೆ.ಈ ಆಧುನಿಕ ಕಾಲದಲ್ಲಿ ಮಹಿಳೆಯರು ಎಲ್ಲಾ ರಂಗದಲ್ಲಿ ಸಾಧಕರಾಗಿದ್ದಾರೆ ಎಂದು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ.ಗುರುಪಾದ ಘೀವಾರಿ,ಈರಣ್ಣ ಕಲಬುರ್ಗಿ,ಜೆ ಎಸ್,ಜಂಬಲದಿನ್ನಿ ಗುರುಗಳು,
ಶಿವಲಿಂಗಪ್ಪ ಪಾಲ್ಕಿ,ರಮೇಶ ಸಾಲಂಕಿ,ಶರಣಬಸಪ್ಪ ಗಡೇದ,ಅವ್ವನಗೌಡ ಗೋನಾಲ,ಎಮ್.ಎಸ್.ನಾಗರಾಳ,ಭೀಮಣ್ಣ ಸುಳೆಬಾವಿ,ಜಗದೀಶ ಬಿಳೇಬಾವಿ,ಅಶೋಕ ಚಿನಗುಡಿ,ಅಪ್ಪು ಕಲ್ಲೂರ,ಸಿದ್ದು ಕರಡಿ,
ಕಾಶಿನಾಥ ಸಜ್ಜನ,ವಿಜಯಕುಮಾರ ಮೇಲಿನಮನಿ ಉಪಸ್ಥಿತರಿದ್ದರು.
ಕುಮಾರಿ ಸನ್ನಿಧಿ ಸಜ್ಜನ 500 ವಚನ ಕಂಠಪಾಠ ಮಾಡಿರುವ ಸಾಧನೆಗೆ ಸನ್ಮಾನಿಸಲಾಯಿತು.
,ಹೆಣ್ಣು ಮಕ್ಕಳ ಕುರಿತ ಸ್ವರಚಿತ ಹಾಡನ್ನು ಜಯಶ್ರೀ ಸಜ್ಜನ ಅವರು ಹಾಡಿದರು. ಉಮಾ ಸಾಲಂಕಿ ಸ್ವಾಗತಿಸಿದರು, ಸಂಗೀತಾ ಬಳಗಾನೂರ ಪರಿಚಯ
ಪ್ರಾಸ್ಥಾವಿಕ ನುಡಿಗಳನ್ನಾಡಿದರು.
ವಿಶಾಲಾಕ್ಷಿ ಬಡಿಗೇರ ಪ್ರಾರ್ಥಿಸಿದರು.ರತ್ನಕಲಾ ಸರಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು,ಸುವರ್ಣಾ ಗೋನಾಲ ವಂದಿಸಿದರು.
