೨೦೨೬-೨೭ರ ಅಂತ್ಯದೊಳಗೆ ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ: ಸಿ.ಎಸ್.ಷಡಾಕ್ಷರಿ

ವಿಜಯ ಸಿಂಧೂರ ರೋಣ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘವು ೨೦೨೬-೨೭ರ ಅಂತ್ಯದೊಳಗೆ ರಾಜ್ಯ ನೌಕರರಿಗೆ ಕೇಂದ್ರ ಸರ್ಕಾರದ ಮಾದರಿಯ ವೇತನವನ್ನು ಜಾರಿಗೆ ತರಲು ಬದ್ಧವಾಗಿದೆ” ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು.
ಅವರು ಶನಿವಾರ ಪಟ್ಟಣದ ಗುರು ಭವನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಿದ್ದ ರೋಣ ತಾಲೂಕಾ ನೌಕರರ ಸಮಾವೇಶ,ಮಹಿಳಾ ದಿನಾಚರಣೆ, ಸರ್ವ ಸದಸ್ಯರ ಸಾಮಾನ್ಯ ಸಭೆ ಹಾಗೂ ತಾಲೂಕಾ ಉತ್ತಮ ಸರಕಾರಿ ನೌಕರ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.


ರಾಜ್ಯದ ನೌಕರರು ನೆಮ್ಮದಿಯಿಂದ ಇರುವಂತೆ ಮಾಡುವುದು ಸಂಘದ ಕರ್ತವ್ಯವಾಗಿದೆ. ಈ ಕಾರಣದಿಂದ ನೌಕರರಿಗೆ ನೀಡುವ ಹಬ್ಬದ ಮುಂಗಡವನ್ನು ಪ್ರಸ್ತುತ ಇರುವ ೨೫ ಸಾವಿರವನ್ನು ೫೦ ಸಾವಿರಕ್ಕೆ ಹೆಚ್ಚಳ ಮಾಡಲು ಪ್ರಯತ್ನಿಸಲಾಗುತ್ತಿದೆ. ಎನ್‌ಪಿಎಸ್ ಬದಲಾಗಿ ಒಪಿಎಸ್ ಜಾರಿಗೆ ತರುವ ಬಗ್ಗೆ ಸಂಘವು ಸತತ ಪ್ರಯತ್ನ ನಡೆಸಿದೆ” ಎಂದರು.
ಅಲ್ಲದೆ ನೌಕರರಿಗೆ ಮಿಲಿಟರಿ ಕ್ಯಾಂಟೀನ್ ಮಾದರಿಯಲ್ಲಿ ಶೇ.೨೦ರಿಂದ ೨೫ರಷ್ಟು ರಿಯಾಯಿತಿ ದರದಲ್ಲಿ ಗೃಹೋಪಯೋಗಿ ವಸ್ತುಗಳು ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸಲು ಎಂಎಸ್‌ಐಎಲ್ ಮುಖಾಂತರ ಕ್ಯಾಂಟೀನ್ ಯೋಜನೆ ರೂಪಿಸಲಾಗುತ್ತಿದೆ. ಇದನ್ನು ಮೊದಲ ಹಂತದಲ್ಲಿ ಬೆಂಗಳೂರಿನಲ್ಲಿ ಮತ್ತು ನಂತರ ಎಲ್ಲಾ ಜಿಲ್ಲೆಗಳಲ್ಲಿ ಜಾರಿಗೆ ತರಲಾಗುವುದು. ಕರ್ತವ್ಯದಲ್ಲಿರುವಾಗ ಮರಣ ಹೊಂದಿದ ಸರ್ಕಾರಿ ನೌಕರರಿಗೆ ೧ ಕೋಟಿ ರೂ. ವಿಮೆ ದೊರೆಯುವ ಸ್ಯಾಲರಿ ಪ್ಯಾಕೇಜ್ ಜಾರಿಗೆ ತರಲಾಗಿದೆ. ಅಕ್ಟೋಬರ್ ೧ರಿಂದ ಆರೋಗ್ಯ ಸಂಜೀವಿನಿ ಯೋಜನೆ ಜಾರಿಯಾಗಿದೆ. ಮೊದಲ ಹಂತದಲ್ಲಿ ಒಳರೋಗಿಗಳಿಗೆ, ಮುಂದಿನ ದಿನಗಳಲ್ಲಿ ಹೊರ ರೋಗಿ ಸೌಲಭ್ಯ ಪಡೆಯಲು ಕ್ರಮವಹಿಸಲಾಗಿದ್ದು, ಮಹಿಳಾ ನೌಕರರು ತಮ್ಮ ತಂದೆ-ತಾಯಿಗಳನ್ನು ಸಹ ಈ ಯೋಜನೆಗೆ ಸೇರಿಸಲು ಅವಕಾಶ ನೀಡಲಾಗಿದೆ” ಎಂದರು
“ಮಹಿಳಾ ನೌಕರರಿಗೆ ಋತುಚಕ್ರದ ಸಂದರ್ಭದಲ್ಲಿ ಪ್ರತಿ ತಿಂಗಳು ೧ರಂತೆ ವರ್ಷಕ್ಕೆ ೧೨ ವಿಶೇಷ ಸಾಂದರ್ಭಿಕ ರಜೆ ನೀಡುವಂತೆ ಸಂಘ ಮಾಡಿದ ಮನವಿಗೆ ಸರ್ಕಾರವು ಸ್ಪಂದಿಸಿದೆ. ಈ ಪ್ರಸ್ತಾವನೆಗೆ ಸಚಿವ ಸಂಪುಟದಲ್ಲಿ ಅನುಮೋದನೆ ದೊರೆತಿದ್ದು, ಇನ್ನು ಕೆಲವೇ ದಿನಗಳಲ್ಲಿ ಅಧಿಕೃತ ಆದೇಶ ಹೊರಬೀಳಲಿದೆ. ಇದರಿಂದ ರಾಜ್ಯದ ೨.೨೫ ಲಕ್ಷ ಮಹಿಳಾ ನೌಕರರಿಗೆ ಅನುಕೂಲವಾಗಲಿದೆ ಎಂದರು
“ಸಂಘವು ಪ್ರತಿ ವರ್ಷ ೧೦ ಸಾವಿರ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಮೂಲಕ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ವಿದ್ಯಾರ್ಥಿಗಳು ಕೇವಲ ಅಂಕ ಗಳಿಸಿದರೆ ಸಾಲದು, ಭವಿಷ್ಯಕ್ಕೆ ಪೂರಕವಾದ ಕೋರ್ಸ್ಗಳನ್ನು ಆಯ್ಕೆ ಮಾಡಿಕೊಂಡು, ಸತತ ಪ್ರಯತ್ನದಿಂದ ಸಾಧನೆ ಮಾಡಬೇಕು” ಎಂದು ಅವರು ಸಲಹೆ ನೀಡಿದರು.


ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಖನಿಜ ಅಭಿವೃದ್ದಿ ನಿಗಮದ ವಅಧ್ಯಕ್ಷ,ಶಾಸಕ ಜಿ.ಎಸ್.ಪಾಟೀಲ ಮಾತನಾಡಿ,ಸರಕಾರದ ಎಲ್ಲ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಹಗಲಿರುಳು ಶ್ರಮಿಸುವ ಸರಕಾರಿ ನೌಕರರ ಹಿತ ಕಾಯಲು ಸದಾ ಬದ್ದನಾಗಿ ಕೆಲಸ ಮಾಡುವೆ.ಕೊವಿಡ್ ನಂತಹ ಸಂದಿಗ್ದ ಸಮಯದಲ್ಲಿ ನೌಕರರ ಸೇವೆ ಅನನ್ಯ.ಅಂತಹ ಕಷ್ಟ ಕಾಲದಲ್ಲಿ ತಮ್ಮ ಜೀವದ ಹಂಗು ತೊರೆದು ಜನರ ಸೇವೆ ಮಾಡುವ ಮೂಲಕ ರಾಜ್ಯಕ್ಕೆ ಮಾದರಿ ಆಗಿದ್ದಾರೆ. ನೌಕರರ ಯಾವುದೇ ಬೇಡಿಕೆಗಳಿದ್ದರೂ ಶಕ್ತಿ ಮೀರಿ ಪ್ರಯುತ್ನಿಸಿ ಅವುಗಳಿಗೆ ಪರಿಹಾರ ಹುಡುಕುವೆ ಎಂದರು
ಅಧ್ಯಕ್ಷತೆ ವಹಿಸಿದ್ದ ತಾಲೂಕಾ ಅಧ್ಯಕ್ಷ ಎಸ್.ಜಿ.ದಾನಪ್ಪಗೌಡ್ರ ಮಾತನಾಡಿ, ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಕ್ಷರಿ ಅವರು ಅವರು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ, ನೌಕರರ ಕಲ್ಯಾಣ ಮತ್ತು ಸಮಾಜಮುಖಿ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ನೌಕರರ ಹಿತಾಸಕ್ತಿ, ಹಳೆ ಪಿಂಚಣಿ ಯೋಜನೆ ಓಪಿಎಸ್ ಜಾರಿಗಾಗಿ ಹೋರಾಟ, ಆರೋಗ್ಯ ಸಂಜೀವಿನಿ ಯೋಜನೆ, ಮತ್ತು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ದೇಣಿಗೆ ಸಂಗ್ರಹಿಸಿ ಸರ್ಕಾರಕ್ಕೆ ಬೆಂಬಲ ನೀಡುವುದರ ಮೂಲಕ ಅವರು ಸಮಾಜಸೇವೆ ಮತ್ತು ನೌಕರರ ಪರ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
೨೦೨೭ರ ವೇಳೆಗೆ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸಲು ಮತ್ತು ‘ಆರೋಗ್ಯ ಸಂಜೀವಿನಿ ಯೋಜನೆ ಜಾರಿಗೆ ತರಲು ಬದ್ಧರಾಗಿದ್ದಾರೆ. ನೈಸರ್ಗಿಕ ವಿಕೋಪಗಳ ಸಂಕಷ್ಟದ ಸಂದರ್ಭದಲ್ಲಿ ನೌಕರರಿಂದ ದೇಣಿಗೆ ಸಂಗ್ರಹಿಸಿ ಸರ್ಕಾರಕ್ಕೆ ಬೆಂಬಲ ನೀಡಿದ್ದಾರೆ. ನೌಕರರಲ್ಲಿ ಸ್ಪರ್ಧಾತ್ಮಕ ಮನೋಭಾವ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸುತ್ತಾರೆ. ಮಹಿಳಾ ನೌಕರರಿಗೆ ಋತುಚಕ್ರ ರಜೆ ಹಾಗೂ ಇತರೆ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಸರ್ಕಾರಿ ಕಚೇರಿಗಳಿಗೆ ಬರುವ ಸಾರ್ವಜನಿಕರಿಗೆ ನ್ಯಾಯಬದ್ಧವಾಗಿ ಮತ್ತು ಮಾನವೀಯತೆಯಿಂದ ಸೇವೆ ನೀಡಲು ನೌಕರರಿಗೆ ಕರೆ ನೀಡುತ್ತಾರೆ ಎಂದು ಹೇಳಿದರು
ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳಾರಿ,ವೈ.ಡಿ.ಗಾಣಿಗೇರ,ವಿ.ಬಿ.ಸೋಮನಕಟ್ಟಿಮಠ, ನಾಗರಾಜ ಕೆ, ಎ.ಎನ್.ಕಾಂಬೋಗಿ, ಮಲ್ಲಿಕಾರ್ಜುನ ಹನಸಿ, ಎಸ್.ಎಮ್.ಕಣವಿ,ರಮೇಶ ಹೊಸಮನಿ, ಆರ್.ಬಿ.ಉಳ್ಳೆಗಡ್ಡಿ, ರಾಘವೇಂದ್ರ ಪುರೋಹಿತ, ಚಂದ್ರಶೇಖರ ಕಂದಕೂರ, ಬಿ.ಎಸ್.ಭಜಂತ್ರಿ, ಗಿರೀಶ ಹೊಸೂರ, ಪ್ರಕಾಶ ಬಣಕಾರ, ಜಗದೀಶ ಬಿ, ಶಿವಪುತ್ರಪ್ಪ ದೊಡ್ಡಮನಿ, ಆರ್.ಎಲ್.ನಾಯ್ಕರ, ರಮೇಶ ನಾಯ್ಕ, ವಿಜಯಕುಮಾರ ನಾಯಕ್, ಶ್ರೀದೇವಿ ಕೊಳ್ಳಿ, ಶಿವಗಂಗಮ್ಮ, ರಶ್ಮಿ ನಡುವಿನಮನಿ,ಎಸ್.ಎಫ್.ತಹಸೀಲ್ದಾರ್, ರಾಮಣ್ಣ ಪೂರ, ಗೀತಾ ಆಲೂರ, ಮಹ್ಮದ್ ಮುಸ್ತಾಪಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *