ರೋಣ: ತಾಲೂಕಿನ ರೈತರಿಗೆ ಅನುಕೂಲವಾಗುವಂತೆ ಕುಸುಬೆ ಬೆಳೆಗಾಗಿ ಸರ್ಕಾರ ತಕ್ಷಣವೇ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಬೇಕೆಂದು ಭಾರತೀಯ ಕಿಸಾನ್ ಸಂಘವು ರೋಣ ತಹಶೀಲ್ದಾರ್ ಮನವಿ ಮಾಡಿದೆ.

ಈ ಕುರಿತು ಮಾತನಾಡಿದ ಸಂಘದ ಅಧ್ಯಕ್ಷ ಬಸನಗೌಡ ಪಾಟೀಲ್ ಪ್ರಸ್ತುತ ಮಾರುಕಟ್ಟೆಯಲ್ಲಿ ಕುಸುಬೆ ಬೆಲೆಯ ಅಸ್ಥಿರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ಪಾದನಾ ವೆಚ್ಚ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆ ರೈತರಿಗೆ ಭದ್ರತೆಯನ್ನು ನೀಡುತ್ತದೆ. ಆದರೆ ಖರೀದಿ ಕೇಂದ್ರಗಳ ಅಭಾವದಿಂದ ರೈತರು ಕಡಿಮೆ ದರಕ್ಕೆ ಬೆಳೆ ಮಾರಾಟ ಮಾಡಲು ತಳ್ಳಲ್ಪಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಕೃಷಿ ಮಾರುಕಟ್ಟೆಗಳಲ್ಲಿ ತಕ್ಷಣವೇ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಜೊತೆಗೆ ರೈತರಿಗೆ ಸರಳ ಹಾಗೂ ಸುಗಮ ನೋಂದಣಿ ಪ್ರಕ್ರಿಯೆಯನ್ನು ಕಲ್ಪಿಸಬೇಕು ಸರ್ಕಾರವು ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ತ್ವರಿತ ಕ್ರಮ ಕೈಗೊಳ್ಳದಿದ್ದರೆ ಹೋರಾಟ ನಡೆಸುವ ಎಚ್ಚರಿಕೆಯನ್ನು ಕೂಡ ಸಂಘ ನೀಡಿದೆ.
ಈ ಸಂದರ್ಭದಲ್ಲಿ ಶರಣಪ್ಪ ಹರ್ಲಾಪುರ, ಬಸುವರಾಜ ವೀರಾಪುರ, ಮಾಹಾದೇವಗೌಡ ಬಾವಿ, ಶಿವಾನಂದಪ್ಪ ಬಾವಿ, ಬಸನಗೌಡ ಬಾಳಣಗೌಡ್ರ, ನಿಂಗನಗೌಡ ಹಿರೇಸಕ್ಕರಗೌಡ್ರ, ರುದ್ರಪ್ಪ ರೋಣದ, ಆನಂದ ನರೇಗಲ್, ಮಲ್ಲಪ್ಪ ನೈನಾಪೂರ ಸೇರಿದಂತೆ ಅನೇಕರು ಹಾಜರಿದ್ದರು
