
ರೋಣ:ರೈತನು ಕಷ್ಟಪಟ್ಟು ಬೆಳೆದ ಬೆಳೆ ಕ್ಷಣಾರ್ಧದಲ್ಲಿ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾದ ಮನಕಲುಕುವ ಘಟನೆ ರೋಣ ತಾಲ್ಲೂಕಿನ ಮಾಳವಾಡ ಗ್ರಾಮದ ಕೃಷಿಭೂಮಿಯಲ್ಲಿ ನಡೆದಿದೆ. ಗ್ರಾಮದ ರೈತ ಯಲ್ಲಪ್ಪ ಅಂಗಿ ಹಾಗೂ ನೆರೆ ಹೊರೆಯ ರೈತರ ಫಸಲು ಒಂದೇ ಕೂಡಿ ಹಾಕಿದರು.
ಸುಮಾರು ಇಪ್ಪತ್ತೈದು ಎಕರೆ ಕೃಷಿ ಭೂಮಿಯಲ್ಲಿ ಬೆಳೆದಿದ್ದ ಮೆಕ್ಕೆಜೋಳದ ಬೆಳೆ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಸಂಪೂರ್ಣವಾಗಿ ನಾಶವಾಗಿದೆ.
ಕೆಲವೇ ನಿಮಿಷಗಳಲ್ಲಿ ಬೆಳೆ ಭಸ್ಮ:
ಘಟನೆಯ ವೇಳೆ ಹೊಲದಲ್ಲಿ ಅಚಾನಕ್ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಬೆಂಕಿ ವೇಗವಾಗಿ ಹರಡಿ ಹೊಲದ ಬಹುಭಾಗವನ್ನು ಆವರಿಸಿತು. ಗಾಳಿ ವೇಗವಾಗಿ ಬೀಸುತ್ತಿದ್ದರಿಂದ ಬೆಂಕಿ ಇನ್ನಷ್ಟು ವ್ಯಾಪಿಸಿ ಮೆಕ್ಕೆಜೋಳದ ಬೆಳೆ ಸಂಪೂರ್ಣವಾಗಿ ಸುಟ್ಟುಹೋಯಿತು.
ಬೆಂಕಿ ನಂದಿಸಲು ಪ್ರಯತ್ನ :
ಬೆಂಕಿ ಕಾಣಿಸಿಕೊಂಡಾಗ ರೈತರು ಬೇರೆ ಹೊಲದ ಕೆಲಸದಲ್ಲಿ ನಿರತರಾಗಿದ್ದರು, ವಿಷಯ ತಿಳಿದು ಸ್ಥಳೀಯರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ನೀರು ಎರಚಿ ಬೆಂಕಿ ನಂದಿಸಲು ಪ್ರಯತ್ನಿಸಿದರು. ಆದರೆ ಗಾಳಿಯ ತೀವ್ರತೆಯಿಂದಾಗಿ ಬೆಂಕಿಯನ್ನು ತಕ್ಷಣ ನಿಯಂತ್ರಿಸಲು ಸಾಧ್ಯವಾಗಲಿಲ್ಲ.
ಲಕ್ಷಾಂತರ ನಷ್ಟ: ಈ ಅವಘಡದಿಂದ ರೈತನಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ. ಈ ವರ್ಷ ಉತ್ತಮ ಬೆಳೆಯ ನಿರೀಕ್ಷೆ ಇಟ್ಟುಕೊಂಡಿದ್ದ ರೈತನಿಗೆ ಈ ಘಟನೆ ಭಾರೀ ಆಘಾತ ತಂದಿದೆ.

ಸರ್ಕಾರಕ್ಕೆ ಮನವಿ: ಈ ಕುರಿತು ಮಾತನಾಡಿದ ರೈತ ಯಲ್ಲಪ್ಪ ಅಂಗಿ, “ಸಾಲ ಮಾಡಿಕೊಂಡು ತುಂಬಾ ಕಷ್ಟಪಟ್ಟು ಬೆಳೆ ಬೆಳೆದಿದ್ದೆ. ಆದರೆ ಕ್ಷಣಾರ್ಧದಲ್ಲಿ ಎಲ್ಲವೂ ಬೆಂಕಿಗೆ ಆಹುತಿಯಾಯಿತು. ಸರ್ಕಾರ ತಕ್ಷಣ ಪರಿಹಾರ ನೀಡಿ ನಮ್ಮಂತಹ ರೈತರಿಗೆ ನೆರವಾಗಬೇಕು,” ಎಂದು ಮನವಿ ಮಾಡಿದ್ದಾರೆ.
ಸ್ಥಳಕ್ಕೆ ತಹಶೀಲ್ದಾರ್ ನಾಗರಾಜ್ ಕೆ, ಅಗ್ನಿಶಾಮಕ ಠಾಣಾ ಅಧಿಕಾರಿ ಮಂಜುನಾಥ ಮೇಲಮನಿ, ಸಿಬ್ಬಂದಿಗಳಾದ ನಿಲ್ಲಪ್ಪ ರೋಣದ,ಹನುಮಂತ ಕಟ್ಟಿಮನಿ ಉಪಸ್ಥಿತರಿದ್ದರು.
