ಮುಂಡರಗಿ: ಪಟ್ಟಣದಲ್ಲಿ ಹಗಲು ಹೊತ್ತಿನಲ್ಲೇ ಮತ್ತೊಂದು ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ಪಟ್ಟಣದ ಜನರಲ್ಲಿ ಆತಂಕ ಮೂಡಿಸಿದೆ.ಈ ಬಾರಿ ದುಷ್ಕರ್ಮಿಗಳು ಬ್ಯಾಂಕ್ ವ್ಯವಸ್ಥಾಪಕರ ಮನೆಯನ್ನೇ ಗುರಿಯಾಗಿಸಿಕೊಂಡು ಮಧ್ಯಾಹ್ನದ ವೇಳೆಯಲ್ಲೇ ಮನೆಗೆ ನುಗ್ಗಿ ಹಣ, ಬಂಗಾರ ಹಾಗೂ ಬೆಳ್ಳಿ ವಸ್ತುಗಳನ್ನು ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಮಂಗಳವಾರ ನಡೆದಿದೆ.

ಪಟ್ಟಣದ ಜನನೀಬೀಡ ಪ್ರದೇಶದಲ್ಲಿ ವಾಸವಾಗಿರುವ ಕೆನರಾ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕರಾದ ರಾಘವೇಂದ್ರಕುಮಾರ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.ಮಧ್ಯಾಹ್ನ ಸುಮಾರು 3.20 ರಿಂದ 4.40 ಗಂಟೆಯೊಳಗಿನ ಅವಧಿಯಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.

ಘಟನೆಯ ವೇಳೆ ರಾಘವೇಂದ್ರಕುಮಾರ ಅವರು ಬ್ಯಾಂಕ್ ಕೆಲಸಕ್ಕೆ ತೆರಳಿದ್ದರೆ, ಅವರ ಪತ್ನಿ ಸ್ಥಳೀಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ದುಷ್ಕರ್ಮಿಗಳು ಮನೆಯ ಬಾಗಿಲಿನ ಕೀಲಿಯನ್ನು ಮುರಿದು ಒಳನುಗ್ಗಿ, ಮನೆಯಲ್ಲಿ ಇದ್ದ ಹಣ, ಬಂಗಾರ ಹಾಗೂ ಬೆಳ್ಳಿ ವಸ್ತುಗಳನ್ನು ಕದ್ದುಕೊಂಡು ಪರಾರಿಯಾಗಿದ್ದಾರೆ.
ಕೊಪ್ಪಳ ಪಟ್ಟಣಕ್ಕೆ ಸಂಪರ್ಕ ಹೊಂದಿರುವ ಪ್ರಮುಖ ರಸ್ತೆಗೆ ಸಮೀಪದಲ್ಲಿರುವ ಜನನೀಬೀಡ ಪ್ರದೇಶದಲ್ಲೇ ಈ ಘಟನೆ ನಡೆದಿರುವುದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
ಇತ್ತೀಚೆಗೆ ಪಟ್ಟಣದ ವಿದ್ಯಾನಗರ ಪ್ರದೇಶದಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಮಾಸುವ ಮುನ್ನವೇ ಹಗಲು ಹೊತ್ತಿನಲ್ಲಿ ಮತ್ತೊಂದು ಮನೆ ಕಳ್ಳತನ ನಡೆದಿರುವುದು ಜನರಲ್ಲಿ ಭಯವನ್ನು ಹೆಚ್ಚಿಸಿದೆ.ಸುದ್ದಿ ತಿಳಿಯುತ್ತಿದ್ದಂತೆ ಮುಂಡರಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಕರಣದ ತನಿಖೆಗಾಗಿ ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕೂಡ ಕರೆಸಿ ಪರಿಶೀಲನೆ ನಡೆಸಲಾಗಿದೆ.ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
