ಜನಗಣತಿಗೆ ಪೂರ್ವಸಿದ್ಧತೆ; ಎಪ್ರೀಲ್ ತಿಂಗಳಲ್ಲಿ ಗಣತಿ ಆರಂಭ: ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್

ವಿಜಯ ಸಿಂಧೂರ,ಗದಗ

“ದೇಶದಲ್ಲೇ ಮೊದಲು ರಾಜ್ಯದಲ್ಲಿ 2026ರ ಡಿಜಿಟಲ್ ಜನಗಣತಿಗೆ ಸಿದ್ಧತೆ, ಏಪ್ರಿಲ್‌ನಿಂದ ಮೊದಲ ಹಂತ ಆರಂಭ ಜನಗಣತಿ ಪ್ರಕ್ರಿಯೆಗೆ ಜಿಲ್ಲಾಡಳಿತ ಸಂಪೂರ್ಣವಾಗಿ ಸಜ್ಜಾಗಿದ್ದು, ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಈ ಬೃಹತ್ ಕಾರ್ಯವು ಏಪ್ರಿಲ್ ತಿಂಗಳಿನಿಂದ ಆರಂಭವಾಗಲಿದೆ” ಎಂದು ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ. ಆರ್. ಹೇಳಿದರು.

ಅವರು ಬುಧವಾರ ನಗರದ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜನಗಣತಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

“ಸಂಪೂರ್ಣ ಡಿಜಿಟಲ್ ಮಾದರಿಯಲ್ಲಿ ( ಆ್ಯಪ್ ಮೂಲಕ) ನಡೆಯಲಿರುವ ಈ ಗಣತಿ ಕಾರ್ಯಕ್ಕಾಗಿ ಜಿಲ್ಲೆಯಾದ್ಯಂತ ಅಧಿಕಾರಿಗಳ ತಂಡ ರಚನೆ ಹಾಗೂ ತರಬೇತಿ ಪ್ರಕ್ರಿಯೆಗಳು ಭರದಿಂದ ಸಾಗಿವೆ. ಜನಗಣತಿಯು ಒಟ್ಟು ಎರಡು ಹಂತಗಳಲ್ಲಿ ನಡೆಯಲಿದೆ. ಮೊದಲ ಹಂತ: 2026ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ನಡೆಯಲಿದೆ. ಎರಡನೇ ಹಂತ: 2027ರಲ್ಲಿ ಜನಸಂಖ್ಯಾ ಗಣತಿ ನಡೆಯಲಿದೆ” ಎಂದರೂ

“ಏಪ್ರಿಲ್ 1 ರಿಂದ 15ರವರೆಗೆ ಸಾರ್ವಜನಿಕರಿಗೆ ಈ ಬಾರಿಯ ಜನಗಣತಿಯ ವಿಶೇಷತೆಯೆಂದರೆ, ಸಾರ್ವಜನಿಕರೇ ಖುದ್ದಾಗಿ ಪೋರ್ಟಲ್ ಮೂಲಕ ತಮ್ಮ ಮಾಹಿತಿಯನ್ನು ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಏಪ್ರಿಲ್ 1 ರಿಂದ ಏಪ್ರಿಲ್ 15 ರವರೆಗೆ ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು” ಎಂದರು.

ಏಪ್ರಿಲ್ 16ರ ನಂತರ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ, ದಾಖಲಾದ ಮಾಹಿತಿಯನ್ನು ಪರಿಶೀಲಿಸಲಿದ್ದಾರೆ. ಹಾಗೂ ಉಳಿದವರ ಮಾಹಿತಿಯನ್ನು ಆ್ಯಪ್ ಮೂಲಕ ಸಂಗ್ರಹಿಸಲಿದ್ದಾರೆ. ಜಿಲ್ಲಾಡಳಿತದ ಸಿದ್ಧತೆ ಮತ್ತು ಅಧಿಕಾರಿಗಳ ನಿಯೋಜನೆ ಜನಗಣತಿಗಾಗಿ ಜಿಲ್ಲಾಧಿಕಾರಿಗಳು ಪ್ರಧಾನ ಜಿಲ್ಲಾ ಗಣತಿ ಅಧಿಕಾರಿಯಾಗಿ ಮತ್ತು ಅಪರ ಜಿಲ್ಲಾಧಿಕಾರಿಗಳು ಜಿಲ್ಲಾ ಗಣತಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು

ಉಪವಿಭಾಗ ಮಟ್ಟದಲ್ಲಿ ಉಪವಿಭಾಗಾಧಿಕಾರಿ ಅವರು ಉಪವಿಭಾಗೀಯ ಗಣತಿ ಅಧಿಕಾರಿಯಾಗಿರುತ್ತಾರೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪೌರಾಯುಕ್ತರು ಹಾಗೂ ತಾಲೂಕು ಮಟ್ಟದಲ್ಲಿ 7 ಜನ ತಹಶೀಲ್ದಾರ್‌ಗಳು ‘ಚಾರ್ಜ್ ಅಧಿಕಾರಿಗಳಾಗಿ ನೇಮಕಗೊಂಡಿದ್ದಾರೆ.

ಜಿಲ್ಲೆಯಾದ್ಯಂತ ಒಟ್ಟು 335 ಗ್ರಾಮೀಣ ಪ್ರದೇಶಗಳು ಹಾಗೂ ನಗರ ಪ್ರದೇಶಗಳಲ್ಲಿ ಒಟ್ಟು 209 ವಾರ್ಡ್ ಗಳನ್ನು ಗಣತಿಗಾಗಿ ಗುರುತಿಸಲಾಗಿದ್ದು ಗಣತಿದಾರರು ಮತ್ತು ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ, ಇವುಗಳಲ್ಲಿ ನಿಖರವಾದ ಗಣತಿ ಮಾದರಿಯನ್ನು ಅನುಸರಿಸಲು ಸೂಚಿಸಲಾಗಿದೆ. ಪ್ರತಿಯೊಂದು ತಾಲೂಕಿಗೂ ಒಬ್ಬರಂತೆ ಒಟ್ಟು 7 ಜನ ಕನ್ಸಲ್ಟೆಂಟ್‌ಗಳನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು.

ಗಣತಿಗೆ ಸಂಬಂಧಿಸಿದ ನಿಗದಿತ ನಮೂನೆಗಳಲ್ಲಿ ಯಾವುದೇ ಲೋಪವಿಲ್ಲದಂತೆ, ಸಂಪೂರ್ಣವಾದ ಮತ್ತು ನಿಖರವಾದ ವರದಿಯನ್ನು ಸಕಾಲದಲ್ಲಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಗಣತಿ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು ತಹಶೀಲ್ದಾರ್ (ತಾಲ್ಲೂಕು ಮಟ್ಟದ ಅಧಿಕಾರಿಗಳು) ಮತ್ತು ಸಂಬಂಧಪಟ್ಟ ಸಿಬ್ಬಂದಿಗಳಿಗೆ ಉನ್ನತ ಮಟ್ಟದ ತರಬೇತಿಯನ್ನು ನೀಡಲು ತೀರ್ಮಾನಿಸಲಾಗಿದೆ. ಈ ತರಬೇತಿಯನ್ನು ಪೂರ್ಣ ಪ್ರಮಾಣದಲ್ಲಿ ಒದಗಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಮುಖ್ಯ ಯೋಜನಾಧಿಕಾರಿ ಎ. ಎ.ಕಂಬಾಳಿಮಠ ಮಾತನಾಡಿ, “ಡಿಜಿಟಲ್ ಗಣತಿ ಸಿಬ್ಬಂದಿಗೆ ತರಬೇತಿ ಇದು ಸಂಪೂರ್ಣ ಆ್ಯಪ್ ಆಧಾರಿತ ಗಣತಿಯಾಗಿರುವುದರಿಂದ, ತಾಂತ್ರಿಕ ನಿರ್ವಹಣೆಗಾಗಿ 19 ಐಟಿ ಸಿಬ್ಬಂದಿಯನ್ನು ನೇಮಿಸಿ ಅವರಿಗೆ ಈಗಾಗಲೇ ತರಬೇತಿ ನೀಡಲಾಗಿದೆ” ಎಂದರು.

ಮಾಸ್ಟರ್ ಟ್ರೇನರ್‌ಗಳಾದ ಕಲ್ಲೂರ್ ಮತ್ತು ಗಿರೀಶ್ ತಿಮ್ಮಪ್ಪ ಅವರುಗಳಿಗೆ ತರಬೇತಿ ನೀಡಲಾಗಿದ್ದು, ಇವರು ಮುಂದಿನ 7-8 ದಿನಗಳಲ್ಲಿ ತಾಲೂಕು ಮತ್ತು ನಗರ ಮಟ್ಟದಲ್ಲಿ ಗಣತಿದಾರರು ಹಾಗೂ ಮೇಲ್ವಿಚಾರಕರಿಗೆ ಪೂರ್ಣ ಪ್ರಮಾಣದ ತರಬೇತಿ ನೀಡಲಿದ್ದಾರೆ. ಗಣತಿದಾರರು ಏಪ್ರಿಲ್ 1 ರೊಳಗೆ ತರಬೇತಿ ಮುಗಿಸಿ, ಆ್ಯಪ್ ಮೂಲಕ ಗಣತಿ ಮಾಡಲು ಸನ್ನದ್ಧರಾಗಲಿದ್ದಾರೆ” ಎಂದು ಹೇಳಿದರು.

ಜನಗಣತಿಯು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ರಾಷ್ಟೀಯ ಕಾರ್ಯಕ್ರಮವಾಗಿದ್ದು, ಇದನ್ನು ರಾಜ್ಯ ಸರ್ಕಾರದ ಅಧಿಕಾರಿಗಳು ಜಾರಿಗೊಳಿಸುತ್ತಿದ್ದಾರೆ. ಜನಗಣತಿ ಕಾರ್ಯಾಚರಣೆ ನಿರ್ದೇಶನಾಲಯದ ರಂಜಿತ್ ಕುಮಾರ್ ಅವರು ಈ ಕಾರ್ಯಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಜನಗಣತಿಯು ‘ಸೆನ್ಸಸ್ ಕಾಯ್ದೆ’ಯಡಿ ಬರುವುದರಿಂದ, ಈ ಕರ್ತವ್ಯದಲ್ಲಿ 1948 ಸೆನ್ಸಸ್ ಕಾಯ್ದೆ’ಯಡಿ ಕರ್ತವ್ಯ ಲೋಪವಾದರೆ ಕಠಿಣ ಕ್ರಮ ಜರುಗಿಸುವುದು ಯಾವುದೇ ಲೋಪವೆಸಗಿದರೂ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ” ಎಂದು ಅಧಿಕಾರಿಗಳಿಗೆ ಮುಖ್ಯ ಯೋಜನಾಧಿಕಾರಿ ಎ ಎ ಕಂಬಾಳಿಮಠ ಅವರು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಗಂಗಪ್ಪ ಎಂ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರು, ನಗರಸಭೆ ಪೌರಯುಕ್ತ ರಾಜರಾಮ ಪವಾರ, ಡಿಎಸ್ ಅಧಿಕಾರಿ ಬಸವರಾಜ ಪಾಟೀಲ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್. ಎಸ್ ಬುರಡಿ, ಸ್ಟೇಟ್ ಅಧಿಕಾರಿ ರಂಜೀತ ಕುಮಾರ, ಎಸ್. ಎಮ್. ಕಲ್ಲೂರು,ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಬಿ. ಜಿ. ಗಿರಿತಿಮ್ಮಣ್ಣವರ ನಿರೂಪಿಸಿದರು.

Leave a Reply

Your email address will not be published. Required fields are marked *