ವಿಜಯ ಸಿಂಧೂರ ಬೀದರ್
ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ನಿರಂತರ ಹೋರಾಟ ಅಗತ್ಯವಿದೆ ಬಸವಾದಿ ಶರಣರು 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿದ್ದರು. ಸಾಮಾಜಿಕ ವ್ಯವಸ್ಥೆ ಅಂದು–ಇಂದು ಚಲನೆಯಿಲ್ಲದಂತಾಗಿದೆ. ಚಲನಶೀಲ ಸಮ ಸಮಾಜಕ್ಕೆ ನಾವೆಲ್ಲರೂ ಹೋರಾಟ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಶನಿವಾರ ಬೀದರ್ ನಗರದ ಜೀರಾ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವ ಕಾರ್ಯನಿರತ ಪತ್ರಕರ್ತರ ರಾಜ್ಯ ಮಟ್ಟದ ಸಮಾವೇಶಕ್ಕೆ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಬಸವಣ್ಣ ತಿರಸ್ಕರಿದ್ದ ಕರ್ಮಸಿದ್ಧಾಂತವನ್ನು ಪಾಲಿಸುವವರು ಈಗ ಹೆಚ್ಚಾಗಿದ್ದಾರೆ. ಈ ಮೌಡ್ಯ ಆಚರಿಸುವವರೆಲ್ಲಾ ವಿದ್ಯಾವಂತರೇ ಎನ್ನುವುದು ಬೇಸರದ ಸಂಗತಿ ಎಂದರು.
ಆದ್ದರಿಂದ ವೈಚಾರಿಕತೆ ಇರುವ ವೈಜ್ಞಾನಿಕ ಶಿಕ್ಷಣ ಪದ್ಧತಿ ಅಗತ್ಯ. ಯಾವ ದೇವರೂ ಯಾರನ್ನೂ ಕೂಡ ಅವಿದ್ಯಾವಂತನಾಗು ಅಂತಾಗಲೀ, ಕೆಳ ಜಾತಿಯಲ್ಲೇ ಹುಟ್ಟು ಎಂದು ಬಯಸುವುದಿಲ್ಲ. ಈ ಅರಿವನ್ನು ಜನರಲ್ಲಿ ಹೆಚ್ಚಿಸುವ ಕೆಲಸ ಪತ್ರಕರ್ತರಿಂದ ಆಗಬೇಕು. ಪತ್ರಕರ್ತರು ಕೇವಲ ಮಾಹಿತಿ ಕೊಡುವವರಾಗದೆ, ಸಮಾಜ ಸುಧಾರಣೆಗೂ ಒತ್ತು ನೀಡಬೇಕು ಎಂದರು.

ಅಂಬೇಡ್ಕರ್ ಅವರ ಆಶಯದಂತೆ ಎಲ್ಲರಿಗೂ ಆರ್ಥಿಕ, ಸಾಮಾಜಿಕ ಶಕ್ತಿ ಕೊಡುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ 2013 ರಲ್ಲೂ ಮಾಡಿತ್ತು. ಈಗಲೂ ಮುಂದುವರೆಸಿದ್ದೇವೆ. ನಾವು ಬಡವರ ಪರವಾದ ಯೂನಿವರ್ಸಲ್ ಬೇಸಿಕ್ ಇನ್ ಕಂ ಆರ್ಥಿಕತೆಯನ್ನು ಪಾಲುಸುತ್ತಿದ್ದೇವೆ. ಇದನ್ನು ಪತ್ರಕರ್ತರು ಅರ್ಥ ಮಾಡಿಕೊಳ್ಳಬೇಕು ಎಂದರು.
ಕೆಲವು ಒಳ್ಳೆಯ ಪತ್ರಕರ್ತರೂ ಇದ್ದಾರೆ. ಆದರೆ ಬಹಳಷ್ಟು ಮಾಧ್ಯಮ ಸಂಸ್ಥೆಗಳು ಕಾರ್ಪೋರೇಟ್ ಹಿಡಿತಕ್ಕೆ ಒಳಪಟ್ಟಿವೆ. ಪತ್ರಕರ್ತರು ಸತ್ಯ ಬರೆದರೂ ಕೆಲವೊಮ್ಮೆ ಸಂಪಾದಕರುಗಳು ಮಾಲೀಕರ ಒತ್ತಡಕ್ಕೆ ಮಣಿದು ಬದಲಾಯಿಸಿಬಿಡುತ್ತಾರೆ. ನಾನು ಮಂತ್ರಿಯಾಗಿ 40 ವರ್ಷ ಆಯ್ತು. ನಮ್ಮ ಸರಕಾರದ ಪರವಾಗಿ ಬರೆಯಿರಿ ಎಂದು ಇವತ್ತಿನವರೆಗೂ ನಾನು ಯಾರನ್ನೂ ಕೇಳಿಲ್ಲ ಎಂದರು.ಜನಸಾಮಾನ್ಯರು ಇನ್ನೂ ಪತ್ರಿಕೆಗಳ ಮೇಲೆ ನಂಬಿಕೆ ಇಟ್ಟಿದ್ದಾರೆ. ನಾನೂ ನಂಬಿಕೆ ಇಟ್ಟಿದ್ದೇನೆ ಎಂದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಸೂಫಿ ಸಂತರ ನಾಡು, ಕರ್ನಾಟಕದ ಕಿರೀಟ ಬೀದರ್ ನಲ್ಲಿ 825 ಕೋಟಿ ಅನುದಾನ ನೀಡಿದ್ದಾರೆ. ಬಡವರ ಕಾಳಜಿಯುಳ್ಳ ಸಮಸಮಾಜ ನಿರ್ಮಾಣ ಮಾಡಲು ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಮೂಲಕ ಒಂದು ಕೋಟಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆಸರೆಯಾಗಿದ್ದಾರೆ ಎಂದರು.
ಸಮಾಜ ತಿದ್ದುವಲ್ಲಿ ಮಾಧ್ಯಮಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಜನರ ಸಮಸ್ಯೆಗಳು, ಅನ್ಯಾಯಗಳು ಮತ್ತು ಅಸಮಾನತೆಗಳನ್ನು ಹೊರತರುವಲ್ಲಿ ಮಾಧ್ಯಮಗಳು ಪ್ರಮುಖ ಸೇತುವೆಯಾಗಿ ಕಾರ್ಯನಿರ್ವಹಿಸುತ್ತವೆ. ಸತ್ಯವನ್ನು ಬಹಿರಂಗಪಡಿಸುವ ಮೂಲಕ, ಸಮಾಜದಲ್ಲಿ ಜಾಗೃತಿ ಮೂಡಿಸುವ ಶಕ್ತಿಯನ್ನು ಮಾಧ್ಯಮಗಳು ಹೊಂದಿವೆ.
ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿದ್ದು, ಜನರ ಧ್ವನಿಯನ್ನು ಸರ್ಕಾರದವರೆಗೆ ತಲುಪಿಸುವ ಜವಾಬ್ದಾರಿ ಹೊಂದಿವೆ” ಎಂದು ಹೇಳಿದ್ದಾರೆ. ಅವರ ಪ್ರಕಾರ, ಸಮಾಜದ ದುರ್ಬಲ ವರ್ಗಗಳ ಸಮಸ್ಯೆಗಳನ್ನು ಬೆಳಕಿಗೆ ತರುವುದು ಮತ್ತು ಸರ್ಕಾರದ ಗಮನ ಸೆಳೆಯುವುದು ಮಾಧ್ಯಮಗಳ ಪ್ರಮುಖ ಕರ್ತವ್ಯವಾಗಿದೆ.ಮಾಧ್ಯಮಗಳು ನಿಷ್ಪಕ್ಷಪಾತವಾಗಿ ವರದಿ ಮಾಡಿದಾಗ, ಜನರಲ್ಲಿ ವಿಶ್ವಾಸ ಹೆಚ್ಚುತ್ತದೆ ಮತ್ತು ಸತ್ಯದ ಮೇಲೆ ನಂಬಿಕೆ ಬಲಗೊಳ್ಳುತ್ತದೆ. ಆದರೆ, ತಪ್ಪು ಮಾಹಿತಿ ಅಥವಾ ಅಸತ್ಯ ವರದಿಗಳು ಸಮಾಜದಲ್ಲಿ ಗೊಂದಲವನ್ನುಂಟು ಮಾಡಬಹುದು. ಆದ್ದರಿಂದ, ಜವಾಬ್ದಾರಿಯುತ ಪತ್ರಿಕೋದ್ಯಮ ಅತ್ಯಗತ್ಯವಾಗಿದೆ ಎಂದರು.
ಕಾನಿಪ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಮಾತನಾಡಿ, ಗ್ರಾಮೀಣ ಭಾಗದ ಪತ್ರಕರ್ತರಿಗೆ ಸರಕಾರ ಮಂಜೂರ ಮಾಡಿರುವ ಉಚಿತ ಬಸ್ ಪಾಸ್ ಯೋಜನೆ ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ.ಸಂಜೀವಿನಿ ಆರೋಗ್ಯ ಯೋಜನೆಗೆ ವರದಿಗಾರರನ್ನು ಸಾಕಷ್ಟು ಸತಾಯಿಸುತ್ತಿದ್ದಾರೆ ಮುಖ್ಯಮಂತ್ರಿಗಳು ವಾರ್ತಾ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವ ಮೂಲಕ ಯೋಜನೆ ನೇರವಾಗಿ ವರದಿಗಾರರನ್ನು ತಲುಪುವಂತೆ ಮಾಡಬೇಕು ಎಂದರು
ಗಡಿ ಭಾಗದ ಪತ್ರಿಕೆಗಳು ಈ ಭಾಗದಲ್ಲಿ ಕನ್ನಡ ಭಾಷೆ ಉಳಿಸಲು ಸಾಕಷ್ಟು ಶ್ರಮವಹಿಸುತ್ತಿವೆ. ಇವುಗಳ ಜಾಹಿರಾತು ಕಡಿತಗೊಳಿಸಲಾಗಿದೆ ಅದರಿಂದ ಗಡಿನಾಡಿನ ಕನ್ನಡ ಪತ್ರಿಕೆಗಳು ತೊಂದರೆ ಅನುಭವಿಸುವಂತಾಗಿದೆ. ಅಲ್ಲದೇ, ಹೊಸ ಜಾಹಿರಾತು ನೀತಿಯನ್ನು ಮರು ಪರಿಶೀಲಿಸುವಂತೆ ಒತ್ತಾಯಿಸಿದರು.
ಬಸವಲಿಂಗ ಶ್ರೀ, ಸಂಸದ ಸಾಗರ್ ಖಂಡ್ರೆ,ರಹೀಮ್ ಖಾನ್, ಶರಣು ಸಲಗರ, ಚಂದ್ರಶೇಖರ ಪಾಟೀಲ, ಭೀಮರಾಯ ಪಾಟೀಲ, ವಿಶ್ವೇಶ್ವರ ಭಟ್, ಶಿವಾನಂದ ತಗಡೂರ, ಕೆ.ವಿ. ಪ್ರಭಾಕರ, ಗೌಸುದ್ದಿನ, ಜಿಲ್ಲಾ ಅಧ್ಯಕ್ಷ ಆನಂದ ಸೇರಿದಂತೆ ಅನೇಕರು ಇದ್ದರು
