ಪ್ರಜಾಸೌಧ ಸ್ಥಳ ವಿರೋಧಿಸಿ ಧರಣಿ 16ನೇ ದಿನಕ್ಕೆ: ಸ್ಥಳಕ್ಕೆ ಉಪವಿಭಾಗಾಧಿಕಾರಿ ಭೇಟಿ – ಅಮರಣಾಂತ ಉಪವಾಸದ ಎಚ್ಚರಿಕೆ

ವಿಜಯ ಸಿಂಧೂರ, ತಾಳಿಕೋಟೆ

ತಾಲ್ಲೂಕಿನ ಮೈಲೇಶ್ವರ ಗ್ರಾಮದ ಸಮೀಪ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕಾಗಿ ಗುರುತಿಸಲಾದ ಸ್ಥಳವನ್ನು ವಿರೋಧಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹ ಗುರುವಾರ 16ನೇ ದಿನಕ್ಕೆ ಕಾಲಿಟ್ಟಿದೆ. ತಾಳಿಕೋಟೆ ಪಟ್ಟಣದಲ್ಲಿಯೇ ಪ್ರಜಾಸೌಧ ಕಟ್ಟಡ ನಿರ್ಮಿಸಬೇಕು ಎಂಬ ಆಗ್ರಹದೊಂದಿಗೆ ಸ್ಥಳೀಯರು ನಿರಂತರವಾಗಿ ಪ್ರತಿಭಟನೆ ಮುಂದುವರಿಸಿದ್ದಾರೆ.


ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ ಅವರು ಗುರುವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರು. ಆದರೆ ಮಾತುಕತೆ ಯಾವುದೇ ನಿರ್ಣಾಯಕ ಫಲಿತಾಂಶಕ್ಕೆ ತಲುಪದೇ ವಿಫಲವಾಯಿತು.
ಪ್ರತಿಭಟನಾಕಾರರು ಅಧಿಕಾರಿಗಳ ಮುಂದೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ, ಮೈಲೇಶ್ವರ ಬಳಿಯ ಗುರುತಿಸಲಾದ ಪ್ರಜಾಸೌಧ ಸ್ಥಳ ನಿರ್ಜನ ಪ್ರದೇಶದಲ್ಲಿದ್ದು ಸಾರ್ವಜನಿಕರಿಗೆ ಸುಲಭವಾಗಿ ತಲುಪಲು ಸಾಧ್ಯವಿಲ್ಲ ಎಂದು ತಿಳಿಸಿದರು. ಅಲ್ಲದೆ, ಮಹಿಳೆಯರು ಹಾಗೂ ಸಾಮಾನ್ಯ ನಾಗರಿಕರ ಸುರಕ್ಷತೆ ದೃಷ್ಟಿಯಿಂದಲೂ ಆ ಸ್ಥಳ ಅನುಕೂಲಕರವಾಗಿಲ್ಲ ಎಂದು ಅಭಿಪ್ರಾಯಪಟ್ಟರು. ಸರ್ಕಾರಿ ಕಚೇರಿಗಳು ಸಾರ್ವಜನಿಕರಿಗೆ ಸುಲಭವಾಗಿ ತಲುಪುವಂತಹ ಕೇಂದ್ರಿಯ ಸ್ಥಳದಲ್ಲಿರಬೇಕು ಎಂಬುದನ್ನು ಅವರು ಒತ್ತಿ ಹೇಳಿದರು.
ಆದ್ದರಿಂದ ಮೈಲೇಶ್ವರ ಸಮೀಪದ ಸ್ಥಳದ ಆಯ್ಕೆಯನ್ನು ತಕ್ಷಣವೇ ರದ್ದುಪಡಿಸಿ ತಾಳಿಕೋಟೆ ಪಟ್ಟಣದಲ್ಲಿರುವ ಸರ್ಕಾರಿ ಜಾಗದಲ್ಲಿ ಪ್ರಜಾಸೌಧ ಕಟ್ಟಡ ನಿರ್ಮಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು. ನಮ್ಮ ಬೇಡಿಕೆ ಈಡೇರುವವರೆಗೆ ಧರಣಿ ಸತ್ಯಾಗ್ರಹ ಮುಂದುವರಿಯುತ್ತದೆ, ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮಾತುಕತೆ ಬಳಿಕ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ ಅವರು ವಿಷಯವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಒಂದು ವೇಳೆ ಸಮಸ್ಯೆಗೆ ಶೀಘ್ರ ಪರಿಹಾರ ದೊರೆಯದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಹೋರಾಟಗಾರರು ಎಚ್ಚರಿಕೆ ನೀಡಿದರು.
ಧರಣಿ ಸ್ಥಳದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ದಶರಥಸಿಂಗ ಮನಗೂಳಿ ಮಾತನಾಡಿ, ಪ್ರಜಾಸೌಧ ಕಟ್ಟಡ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಕೇಂದ್ರಿಯ ಸ್ಥಳದಲ್ಲಿರಬೇಕು. ನಿರ್ಜನ ಪ್ರದೇಶದಲ್ಲಿ ನಿರ್ಮಾಣ ಮಾಡಿದರೆ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಪದಾಧಿಕಾರಿಗಳಾದ ಎಸ್.ಬಿ. ಕಟ್ಟಿಮನಿ, ಮುತ್ತಪ್ಪ ಚಮಲಾಪುರ, ಮಾಸೂಮಸಾ ಕೆಂಭಾವಿ, ಕಾಶಿನಾಥ ಮುರಾಳ, ವಿಜಯಸಿಂಗ ಹಜೇರಿ, ಪರಶುರಾಮ ತಂಗಡಗಿ, ಗಂಗಾಧರ ಕಸ್ತೂರಿ, ಮೈಬೂಬ ಚೋರಗಸ್ತಿ, ನಾಗೇಶ ಕಟ್ಟಿಮನಿ, ದೇವೇಂದ್ರ ಹಾದಿಮನಿ, ಪ್ರಕಾಶ ಹಜೇರಿ, ಸುರೇಶ ಹಜೇರಿ, ಮಹೇಶ ಚಲವಾದಿ, ರವಿ ಕಟ್ಟಿಮನಿ, ಅಮಿತಸಿಂಗ ಮನಗೂಳಿ, ರತನ ಹಜೇರಿ, ಸಿರಸಕುಮಾರ ಹಜೇರಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಈ ವೇಳೆ ಡಿ.ವೈ.ಎಸ್.ಪಿ ನಂದಗಾವಿ, ತಹಶೀಲ್ದಾರ್ ಡಾ. ವಿನಯಾ ಹೂಗಾರ, ಪಿಎಸ್ಐ ಹಾಗೂ ಪೊಲೀಸ್ ಸಿಬ್ಬಂದಿ ಸಹ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *