ತಾಳಿಕೋಟೆ: ಸ್ಥಳೀಯ ಕನ್ನಡ ಸಂಘದ ವತಿಯಿಂದ ಮಾಸಿಕ ಕಾರ್ಯಕ್ರಮದ ಅಂಗವಾಗಿ ಭಾನುವಾರ ಸಂಜೆ ಪಟ್ಟಣದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ತಾಯಿ ದೇವಸ್ಥಾನದಲ್ಲಿ ಭಾವಪೂರ್ಣ ಸಂಗೀತ ರಸಸಂಜೆ ಜರುಗಿತು.

ಎರಡು ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಸಂಗೀತ ಶಿಕ್ಷಕಿ ಹಾಗೂ ದೂರದರ್ಶನ ಕಲಾವಿದೆ ವಿಶಾಲಾಕ್ಷಿ ಬಡಿಗೇರ ಅವರು ತಮ್ಮ ಸುಮಧುರ ಕಂಠದಿಂದ ವೈವಿಧ್ಯಮಯ ಹಾಡುಗಳನ್ನು ಹಾಡಿ ಶ್ರೋತೃಗಳ ಮನಸೂರೆಗೊಂಡರು.
“ಎನ್ನಂತರಂಗವೇ ಬಸವಣ್ಣ…”, “ತೊರೆದು ಹೋಗದಿರು ಜೋಗಿ”, “ಯಾಕ ಚಿಂತಿ ಮಾಡತೀದಿ ಎಲೆ ಮನವೆ”, “ಹಡೆದ ತಾಯಿಯ ಮಹಿಮೆ”, “ಕಲ್ಲು ಬಂಡಿಯ ಹಾಗೆ…” ಸೇರಿದಂತೆ ಹಲವು ವಚನ, ಕೀರ್ತನೆ ಹಾಗೂ ಜಾನಪದ ಹಾಡುಗಳನ್ನು ಪ್ರಸ್ತುತಪಡಿಸಿ ಗಮನ ಸೆಳೆದರು. ಹಿರಿಯರಾದ ಈಶ್ವರ ಬಡಿಗೇರ (ಬಿ.ಸಾಲವಾಡಗಿ) ತಬಲ ಸಾಥ್ ನೀಡಿ ಕಾರ್ಯಕ್ರಮಕ್ಕೆ ಮತ್ತಷ್ಟು ರಂಗ ತುಂಬಿದರು.
ಕಾರ್ಯಕ್ರಮದ ಆರಂಭದಲ್ಲಿ ಖ್ಯಾತ ಗಾಯಕಿ ಆಶಾ ಭೋಸ್ಲೆ ಹಾಗೂ ಲೇಖಕ ಶಿವಣ್ಣ ನೀರಲಗಿ ಅವರಿಗೆ ಕನ್ನಡ ಸಂಘದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕನ್ನಡ ಸಂಘದ ಅಧ್ಯಕ್ಷರಾದ ಹಿರಿಯ ವೈದ್ಯ ಡಾ. ವಿಜಯಕುಮಾರ ಕಾರ್ಚಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಎಸ್.ಕೆ. ಕಾಲೇಜಿನ ನಿವೃತ್ತ ಪ್ರಾಚಾರ್ಯ ಜಿ.ಎಂ. ಘಿವಾರಿ, ಶಿವಶರಣೆ ಶಾಂತಮ್ಮತಾಯಿ ಕೋಳೂರ, ಸಂಘದ ಕಾರ್ಯದರ್ಶಿ ಶ್ರೀಕಾಂತ ಪತ್ತಾರ, ಸಾಹೇಬಗೌಡ ಬಿರಾದಾರ, ಉಪಾಧ್ಯಕ್ಷೆ ಸುಮಂಗಲಾ ಕೋಳೂರ, ಉಪಾಧ್ಯಕ್ಷ ಆರ್.ಬಿ. ದಮ್ಮೂರಮಠ, ದಿನಕರ ಜೋಶಿ, ಗುಂಡುರಾವ ಧನಪಾಲ, ಬಿ.ಎಸ್. ದ್ಯಾಪೂರ, ಉಮಾ ಘಿವಾರಿ, ಎಸ್.ಎಸ್. ಗಡೇದ, ಸಿ. ಲಿಂಗಪ್ಪ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.
ಸಂಘದ ಸಹಕಾರ್ಯದರ್ಶಿ ಅಪ್ಪಾಸಾಹೇಬ ಮೂಲಿಮನಿ ಮಾತನಾಡಿ, “ಸಂಗೀತ ದೇಶದ ಸಂಸ್ಕೃತಿಯಾಗಿದೆ. ಅದು ನಾಡನುಡಿಯ ಕಹಳೆಯಾಗಿ, ಮಕ್ಕಳಿಗೆ ತಾಯಿಯ ಲಾಲಿಯಾಗಿ, ಸಂಗೀತ ಪ್ರೇಮಿಗಳಿಗೆ ಶೃಂಗಾರರಸವಾಗಿ, ವೃದ್ಧರಿಗೆ ಸಂಧ್ಯಾರಾಗವಾಗಿ ಜೀವನದ ಅವಿಭಾಜ್ಯ ಅಂಗವಾಗಿದೆ” ಎಂದು ಅಭಿಪ್ರಾಯಪಟ್ಟರು.
ಎಸ್.ಕೆ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಶೇಷಾಚಲ ಹವಾಲ್ದಾರ (ಚೇಚಿ) ಕಾರ್ಯಕ್ರಮವನ್ನು ನಿರ್ವಹಿಸಿದರು. ಸಾಹೇಬಗೌಡ ಬಿರಾದಾರ ವಂದಿಸಿದರು.
