ತಾಳಿಕೋಟೆ: ತಾಲೂಕಿನ ಮೈಲೇಶ್ವರ ಗ್ರಾಮದ ಸಮೀಪ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ, ಪ್ರಜಾಸೌಧವನ್ನು ತಾಳಿಕೋಟೆ ಪಟ್ಟಣದಲ್ಲಿಯೇ ನಿರ್ಮಿಸಬೇಕು ಎಂದು ಆಗ್ರಹಿಸಿ ತಾಳಿಕೋಟೆ ತಾಲ್ಲೂಕು ಹೋರಾಟ ಸಮಿತಿಯವರು ನಡೆಸುತ್ತಿರುವ ಅನಿರ್ದಿಷ್ಟಾವಧಿಯ ಧರಣಿ ಸತ್ಯಾಗ್ರಹವು ಶನಿವಾರ 19ನೇ ದಿನಕ್ಕೂ ಮುಂದುವರಿಯಿತು.

ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಯುತ್ತಿರುವ ಈ ಹೋರಾಟಕ್ಕೆ ತಾಳಿಕೋಟೆ ಪಟ್ಟಣದ ವಿವಿಧ ಸಮಾಜಗಳ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ದಿನದಿಂದ ದಿನಕ್ಕೆ ಹೋರಾಟಕ್ಕೆ ಜನಬೆಂಬಲ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣದ ಹಿರಿಯರಾದ ಸಿರಸಕುಮಾರ ಹಜೇರಿ ಅವರು, ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಈಗ ಗುರುತಿಸಲಾದ ಸ್ಥಳವು ತಾಳಿಕೋಟೆ ಪಟ್ಟಣದಿಂದ ಸುಮಾರು ನಾಲ್ಕು ರಿಂದ ಐದು ಕಿಲೋಮೀಟರ್ ದೂರದಲ್ಲಿದೆ. ಇದರಿಂದ ವೃದ್ಧರು, ಮಹಿಳೆಯರು, ವಿದ್ಯಾರ್ಥಿಗಳು, ಅಂಗವಿಕಲರು ಹಾಗೂ ರೈತಾಪಿ ಜನರಿಗೆ ಸರ್ಕಾರಿ ಕಚೇರಿಗಳಿಗೆ ತೆರಳಲು ಸಾಕಷ್ಟು ತೊಂದರೆ ಉಂಟಾಗಲಿದೆ ಎಂದು ಹೇಳಿದರು. ಸಾರ್ವಜನಿಕರಿಗೆ ಸುಲಭವಾಗಿ ಸಂಪರ್ಕಿಸಬಹುದಾದ ಸ್ಥಳದಲ್ಲಿಯೇ ಸರ್ಕಾರಿ ಕಚೇರಿಗಳು ಇರಬೇಕು ಎಂಬುದು ಜನರ ಅಭಿಪ್ರಾಯವಾಗಿದ್ದು, ಅದಕ್ಕಾಗಿ ಪ್ರಜಾಸೌಧವನ್ನು ಪಟ್ಟಣದಲ್ಲಿಯೇ ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.
ಇದಲ್ಲದೆ ತಾಳಿಕೋಟೆ ಪಟ್ಟಣದಲ್ಲಿಯೇ ಸಾಕಷ್ಟು ಸರ್ಕಾರಿ ಜಾಗ ಲಭ್ಯವಿದ್ದು, ಅದರಲ್ಲಿ ಸೂಕ್ತ ಸ್ಥಳವನ್ನು ಆಯ್ಕೆ ಮಾಡಿ ಪ್ರಜಾಸೌಧ ಕಟ್ಟಡ ನಿರ್ಮಾಣ ಮಾಡಬೇಕು. ಈಗಾಗಲೇ ಮೇಲೆಶ್ವರ ಗ್ರಾಮದ ಸಮೀಪ ಗುರುತಿಸಲಾದ ಸ್ಥಳದ ನಿರ್ಧಾರವನ್ನು ಕೂಡಲೇ ರದ್ದುಪಡಿಸಬೇಕು ಎಂದು ಹೋರಾಟಗಾರರು ಆಗ್ರಹಿಸಿದರು. ಪ್ರಜಾಸೌಧವನ್ನು ಪಟ್ಟಣದಲ್ಲಿಯೇ ನಿರ್ಮಿಸುವವರೆಗೆ ಹೋರಾಟವನ್ನು ಹಿಂಪಡೆಯುವುದಿಲ್ಲ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ, ಮುತ್ತಪ್ಪ ಚಮಲಾಪುರ, ಮೆಹೆಬೂಬ ಚೋರಗಸ್ತಿ, ಕಾಶಿನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ದತ್ತು ಹೆಬಸೂರ, ಪರಶುರಾಮ ತಂಗಡಗಿ, ವಿಜಯಸಿಂಗ್ ಹಜೇರಿ, ಕಳಕೂಸಾ ರಂಗರೇಜ್, ಬಸವರಾಜ ಕಶೆಟ್ಟಿ, ಸಿದ್ದನಗೌಡ ಪಾಟೀಲ, ಮಯೂರ ಪಾಟೀಲ, ನಾಗೇಶ ಕಟ್ಟಿಮನಿ, ರಮೇಶ್ ಹಜೇರಿ, ರಾಘು ಮಾನೆ, ನೀಲಕಂಠ ಕೊಣ್ಣೂರ, ಸುಭಾಷ್ ಕಟ್ಟಿಮನಿ, ದಸ್ತಗೀರಸಾಬ್ ಕೆಂಭಾವಿ, ಮುದಕಪ್ಪ ಬಡಿಗೇರ, ಅಮಿತ್ ಮನಗೂಳಿ, ಅಶೋಕ ಚಿನಗುಡಿ, ನಿಂಗನಗೌಡ ದೇಸಾಯಿ, ಸಿದ್ದು ಕಟ್ಟಿಮನಿ, ಶಂಕರ ಪಡಸಾಲಿ, ಮಹೇಶ್ ಚಲವಾದಿ, ರವಿ ಕಟ್ಟಿಮನಿ, ಮಂಜುನಾಥ್ ಶೆಟ್ಟಿ, ಸುರೇಶ್ ಹಜೇರಿ, ರಾಮಣ್ಣ ಕಟ್ಟಿಮನಿ, ಸಂಜು ಬರದೆನಾಳ, ಸದ್ದಾಮ್ ಹುಸೇನ್ ಬೀಳಗಿ, ರಾಜು ಹಜೇರಿ, ನಿತಿನ್ ವಿಜಾಪುರ ಸೇರಿದಂತೆ ಪಟ್ಟಣದ ವಿವಿಧ ಸಮಾಜಗಳ ಮುಖಂಡರು ಹಾಗೂ ನಾಗರಿಕರು ಉಪಸ್ಥಿತರಿದ್ದರು.
