ಮಾ.22ರಂದು ಗದಗದಲ್ಲಿ ಕರ್ನಾಟಕ ಕಾರ್ಯನಿರತ ದಿನಪತ್ರಿಕೆ ಸಂಪಾದಕರ ಸಂಘದ ರಾಜ್ಯ ಕಾರ್ಯಕಾರಣಿ ಸಭೆ
ವಿಜಯ ಸಿಂಧೂರ ಗದಗ
ರಾಜ್ಯದ ಪತ್ರಿಕಾ ವಲಯದ ಪ್ರಮುಖ ಸಂಘಟನೆಗಳಲ್ಲೊಂದಾದ ಕರ್ನಾಟಕ ಕಾರ್ಯನಿರತ ದಿನಪತ್ರಿಕೆ ಸಂಪಾದಕರ ಸಂಘದ ರಾಜ್ಯ ಕಾರ್ಯಕಾರಣಿ ಸಭೆಯನ್ನು ಇದೇ ತಿಂಗಳ ಮಾರ್ಚ್ 22ರಂದು ಗದಗ ನಗರದಲ್ಲಿ ಆಯೋಜಿಸಲು ತೀರ್ಮಾನಿಸಲಾಗಿದೆ.

ಗದಗ ನಗರದ ಕಿತ್ತೂರು ಕರ್ನಾಟಕ ಪತ್ರಿಕೆಯ ಕಾರ್ಯಾಲಯದಲ್ಲಿ ಶನಿವಾರ ಸಂಜೆ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಸಭೆಗೆ ಸಂಘದ ಗದಗ ಜಿಲ್ಲಾಧ್ಯಕ್ಷ ಜಗದೀಶ ಪೂಜಾರ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯಾಧ್ಯಕ್ಷ ತಿಪ್ಪೇಸ್ವಾಮಿ ಹಾಗೂ ರಾಜ್ಯ ಉಪಾಧ್ಯಕ್ಷ ಮಂಜುನಾಥ ಬಸಪ್ಪ ಅಬ್ಬಿಗೇರಿ ಅವರ ಮೌಖಿಕ ಸೂಚನೆಯ ಮೇರೆಗೆ ರಾಜ್ಯ ಕಾರ್ಯಕಾರಣಿ ಸಭೆಯನ್ನು ಗದಗದಲ್ಲಿ ನಡೆಸಲು ಏಕಮತದಿಂದ ನಿರ್ಣಯಿಸಲಾಯಿತು.

ಸಭೆಯಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ “ನೂತನ ಜಾಹೀರಾತು ನೀತಿ–2026” ಕುರಿತು ಸಂಪಾದಕರು ಗಂಭೀರ ಚರ್ಚೆ ನಡೆಸಿದರು. ಈ ನೀತಿಯಲ್ಲಿ ದಿನಪತ್ರಿಕೆಗಳಿಗೆ ಪ್ರತಿಕೂಲವಾಗುವ ಸಾಧ್ಯತೆ ಇರುವ ಅಂಶಗಳ ಬಗ್ಗೆ ಸದಸ್ಯರು ತಮ್ಮ ಆತಂಕಗಳನ್ನು ವ್ಯಕ್ತಪಡಿಸಿದರು. ವಿಶೇಷವಾಗಿ ಪ್ರಾದೇಶಿಕ ಹಾಗೂ ಸಣ್ಣ ದಿನಪತ್ರಿಕೆಗಳ ಆರ್ಥಿಕ ಸ್ಥಿತಿ, ಜಾಹೀರಾತು ಹಂಚಿಕೆ ವಿಧಾನ, ಮತ್ತು ಪತ್ರಿಕಾ ಕ್ಷೇತ್ರದ ಭವಿಷ್ಯಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಸಭೆಯಲ್ಲಿ ವಿಶ್ಲೇಷಣಾತ್ಮಕ ಚರ್ಚೆ ನಡೆಯಿತು.
ಈ ಸಂಬಂಧ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಿ ಮುಂದಿನ ಹಂತದ ಹೋರಾಟ ಮತ್ತು ಸಂಘದ ನಿಲುವು ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಪತ್ರಿಕಾ ವಲಯದ ಹಿತಾಸಕ್ತಿಗಳನ್ನು ರಕ್ಷಿಸುವ ದಿಸೆಯಲ್ಲಿ ಸಂಘವು ಸಂಘಟಿತವಾಗಿ ಕಾರ್ಯನಿರ್ವಹಿಸಬೇಕೆಂಬ ಅಭಿಪ್ರಾಯವನ್ನು ಸದಸ್ಯರು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಂಘದ ವತಿಯಿಂದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಅಬ್ಬಿಗೇರಿ, ಕಾನಿಪ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ, ಹಾಗೂ ಗಜೇಂದ್ರಗಡ ತಾಲ್ಲೂಕು ಕಾನಿಪ ಅಧ್ಯಕ್ಷ ಮಂಜುನಾಥ ರಾಠೋಡ ಅವರನ್ನು ಗೌರವಪೂರ್ವಕವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಸಭೆಯಲ್ಲಿ ಸಂಪಾದಕರಾದ ಹೆಚ್.ಎಂ. ಶರೀಪನವರ, ರವಿಕಾಂತ ಅಂಗಡಿ, ಅಜೆತ್ ಹೊಬಾಂಳೆ , ಟಿ.ಎನ್. ಭಾಂಡಗೆ,ದೇವಪ್ಪ ಲಿಂಗದಾಳ, ರಮೇಶ ಭಜೆಂತ್ರಿ ಸೇರಿದಂತೆ ಅನೇಕರು ಭಾಗವಹಿಸಿ ಸಂಘದ ಚಟುವಟಿಕೆಗಳು ಹಾಗೂ ಪತ್ರಿಕಾ ವಲಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ರಾಜ್ಯ ಮಟ್ಟದ ಕಾರ್ಯಕಾರಣಿ ಸಭೆಯನ್ನು ಗದಗದಲ್ಲಿ ಆಯೋಜಿಸುವುದರಿಂದ ಜಿಲ್ಲೆಯ ಪತ್ರಿಕಾ ವಲಯಕ್ಕೆ ಹೊಸ ಉತ್ಸಾಹ ದೊರೆಯುವ ಜೊತೆಗೆ ಪತ್ರಕರ್ತರ ಸಮಸ್ಯೆಗಳ ಕುರಿತು ರಾಜ್ಯ ಮಟ್ಟದಲ್ಲಿ ಗಂಭೀರ ಚರ್ಚೆಗೆ ವೇದಿಕೆ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
