ವಿಜಯ ಸಿಂಧೂರ
ರೋಣ:ದೀನ ,ದಲಿತ ,ರೈತ , ಶೋಷಿತ ಸಮಾಜದ ಪರ ಹೋರಾಟಗಾರರಾಗಿ, ದಶಕಗಳ ಕಾಲ ರೈತರ ಹಿತರಕ್ಷಣೆಗಾಗಿ ಹೋರಾಡಿದ್ದ ರೋಣ ತಾಲ್ಲೂಕಿನ ಇಟಗಿ ಗ್ರಾಮದ ಹಿರಿಯ ರೈತ ಮುಖಂಡ ಕಿತ್ತೂರು ಚೆನ್ನಮ್ಮನ ವಂಶಸ್ಥರಾದ ವಿಜಯಕುಮಾರಸರ್ಜ ದೇಸಾಯಿ (78) ಅವರು ರವಿವಾರ ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ, ವಿಜಯಕುಮಾರಸರ್ಜ ಅವರ ಪಾರ್ಥಿವ ಶರೀರವನ್ನು ಅವರ ಕುಟುಂಬಸ್ಥರು ಕಿಮ್ಸ್ ಆಸ್ಪತ್ರೆಗೆ ದಾನ ಮಾಡುವ ಮೂಲಕ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.ವೈದ್ಯಕೀಯ ಸಂಶೋಧನೆ ಮತ್ತು ಮತ್ತೊಬ್ಬರ ಬಾಳಿಗೆ ಬೆಳಕಾಗುವ ದೃಷ್ಟಿಯಿಂದ ಈ ಮಹದಾನ ಮಾಡಲಾಗಿದೆ, ಇಂದು ಅವರ ಪಾರ್ಥಿವ ಶರೀರವನ್ನು ವೈದ್ಯಕೀಯ ವಿದ್ಯಾರ್ಥಿಗಳ ವ್ಯಾಸಂಗಕ್ಕಾಗಿ ಕಿಮ್ಸ್ ಗೆ ಹಸ್ತಾಂತರಿಸಲಾಯಿತು.

ರೈತರ ನೀರಾವರಿ ಪಂಪಸೆಟ್ ವಿದ್ಯುತ್ ಬಿಲ್ ಬಾಕಿ ಮನ್ನಾ, ಗ್ರಾಮೀಣ ಭಾಗದಲ್ಲಿ ಸರಕಾರಿ ಆಸ್ಪತ್ರೆ , ಪಶು ಆಸ್ಪತ್ರೆಗಳ ಸ್ಥಾಪನೆಗಾಗಿ ಹಾಗೂ ಚುನಾವಣೆಯಲ್ಲಿರುವ ಲೋಪ ದೋಷಗಳನ್ನು ಸರಿಪಡಿಸುವುದು, ಅಂಚೆ ಕಚೇರಿಯಲ್ಲಿ ವಿತರಿಸಲಾಗುತ್ತಿದ್ದ ಒಂದು ರೂಪಾಯಿ ರೆವಿನ್ಯೂ ಸ್ಟಾಂಪ್ ಬಂದ ಮಾಡಿರುವುದನ್ನು ವಿರೋಧಿಸಿ ಪತ್ರ ಚಳುವಳಿ ಹೋರಾಟ ಸೇರಿದಂತೆ ಅನೇಕ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿಜಯಕುಮಾರ ಸರ್ಜ ಅವರ ನಿಧನ ಗ್ರಾಮೀಣ ಭಾಗದ ಬಡ ರೈತಾಪಿ ವರ್ಗಕ್ಕೆ ತುಂಬಲಾರದ ನಷ್ಟವಾಗಿದೆ.
ವಿಜಯಕುಮಾರಸರ್ಜ ದೇಸಾಯಿ ಅವರ ಆಶೆಯಂತೆ ಅವರ ಪತ್ನಿ, ಇಬ್ಬರು ಪುತ್ರರರು, ಓರ್ವ ಪುತ್ರಿ ಅವರು ಅಗಲಿರುವ ಇವರ ಅಂತ್ಯಕ್ರಿಯೆಯ ಬದಲು ದೇಹದಾನ ಮಾಡಿರುವ ನಿರ್ಧಾರವು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
