ಸೌಹಾರ್ದ ಇಫ್ತಾರ್ ಕೂಟದಲ್ಲಿ ಶಾಂತಿ ಹಾಗೂ ಸಹೋದರತ್ವದ ಸಂದೇಶ
ತಾಳಿಕೋಟೆ: ಪವಿತ್ರ ರಂಜಾನ್ ಮಾಸವು ಶಾಂತಿ, ಪ್ರೀತಿ ಹಾಗೂ ಕರುಣೆಯ ಸಂದೇಶವನ್ನು ಸಾರುವ ಪವಿತ್ರ ಕಾಲವಾಗಿದೆ. ಇಂತಹ ಸಮಯದಲ್ಲೇ ಜಗತ್ತಿನ ಕೆಲ ಭಾಗಗಳಲ್ಲಿ ಯುದ್ಧಗಳು ನಡೆಯುತ್ತಿರುವುದು ನೋವಿನ ಸಂಗತಿಯಾಗಿದೆ.
ಈ ಯುದ್ಧಗಳು ಶೀಘ್ರವೇ ನಿಂತು ಜಗತ್ತಿನಲ್ಲಿ ಶಾಂತಿ ನೆಲೆಸಲಿ ಎಂದು ನಾವೆಲ್ಲರೂ ದೇವರಲ್ಲಿ ಪ್ರಾರ್ಥಿಸಬೇಕಾಗಿದೆ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷರು ಹಾಗೂ ಮುದ್ದೇಬಿಹಾಳ ಕ್ಷೇತ್ರದ ಶಾಸಕ ಸಿ.ಎಸ್. ನಾಡಗೌಡ (ಅಪ್ಪಾಜಿ) ಹೇಳಿದರು.

ಪಟ್ಟಣದ ಹಳೆ ತರಕಾರಿ ಮಾರುಕಟ್ಟೆ ಆವರಣದಲ್ಲಿ ನಾಡಗೌಡ ಅಭಿಮಾನಿ ಬಳಗದ ವತಿಯಿಂದ ಶನಿವಾರ ಆಯೋಜಿಸಿದ್ದ ಸೌಹಾರ್ದ ಇಫ್ತಾರ್ ಕೂಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮಾನವ ಜೀವನ ಕ್ಷಣಿಕವಾಗಿದ್ದು, ನಾವು ಭೂಮಿಯ ಮೇಲೆ ಇರುವವರೆಗೂ ಒಳ್ಳೆಯ ಕಾರ್ಯಗಳನ್ನು ಮಾಡುತ್ತ ಬದುಕಬೇಕು. ಮರಣ ಯಾವಾಗ ಬರುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಮರಣದೊಂದಿಗೆ ನಮ್ಮ ಬದುಕಿನ ಪಯಣ ಮುಗಿಯುತ್ತದೆ. ನಾವು ಈ ಲೋಕದಲ್ಲಿ ಶಾಶ್ವತವಾಗಿ ಉಳಿಯಲು ಬಂದವರಲ್ಲ, ಕೇವಲ ಪ್ರಯಾಣಿಕರಷ್ಟೇ. ಆದ್ದರಿಂದ ಸಮಾಜದಲ್ಲಿ ಪರಸ್ಪರ ಪ್ರೀತಿ, ಸಹಾನುಭೂತಿ ಮತ್ತು ಸಹೋದರತ್ವದ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯ ಎಂದು ಹೇಳಿದರು.
ಎಲ್ಲ ಧರ್ಮಗಳ ಮೂಲ ಸಂದೇಶ ಶಾಂತಿ ಮತ್ತು ಪ್ರೀತಿಯೇ ಆಗಿದ್ದು, ಅದನ್ನು ಅರ್ಥಮಾಡಿಕೊಂಡು ಸಮಾಜದಲ್ಲಿ ಸೌಹಾರ್ದತೆ ಉಳಿಸಿಕೊಳ್ಳಬೇಕೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಸಮಾಜದ ವತಿಯಿಂದ ಶಾಸಕ ನಾಡಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ, ಮುಖಂಡರಾದ ರೋಷನ್ ಡೋಣಿ, ಶಿವರಾಜ ಗುಂಡಕನಾಳ, ಕೆ.ಐ. ಸಗರ, ಇಬ್ರಾಹೀಂ ಮನ್ಸೂರ ಸೇರಿದಂತೆ ಹಲವರು ಮಾತನಾಡಿದರು.ಕಾರ್ಯಕ್ರಮಕ್ಕೆ ಖಾಸ್ಗತೇಶ್ವರ ಮಠದ ವೇ.ಮೂ. ಮುರಗೇಶ ವಿರಕ್ತಮಠ, ಮುಸ್ಲಿಂ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ ಹಾಗೂ ವಿವಿ ಸಂಘದ ಅಧ್ಯಕ್ಷ ವಿ.ಸಿ. ಹಿರೇಮಠ ಸಾನಿಧ್ಯ ವಹಿಸಿದ್ದರು. ಹಲವಾರು ಮುಖಂಡರು ಮತ್ತು ಗಣ್ಯರು ಉಪಸ್ಥಿತರಿದ್ದರು.
