ಪತ್ರಕರ್ತರು ಸಮಾಜದ ಅವಿಭಾಜ್ಯ ಅಂಗ ಜಿ ಎಸ್ ಪಾಟೀಲ್

ರೋಣ :ಪತ್ರಕರ್ತರು ಸಮಾಜದ ಅವಿಭಾಜ್ಯ ಅಂಗ ಉತ್ತಮ ಸಮಾಜ ಕಟ್ಟುವಲ್ಲಿ ಪತ್ರಕರ್ತರ ಪಾತ್ರವೂ ಪ್ರಮುಖವಾಗಿದೆ ಪತ್ರಕರ್ತರು ಸಮಾಜದ ಅಂಕು ಡೊಂಕು ತಿದ್ದಲು ಹಿಂಜರಿಯಬಾರದು, ಪತ್ರಿಕಾ ಮಿತ್ರರ ವೃತ್ತಿಗೆ ಅವಶ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ ಎಸ್ ಪಾಟೀಲ್ ಭರವಸೆ ನೀಡಿದರು.

ಅವರು ಭಾನುವಾರ ರೋಣ ತಮ್ಮ ನಿವಾಸದಲ್ಲಿ ಗಜೇಂದ್ರಗಡ ತಾಲೂಕು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಈ ಹಿಂದೆ ಹಲವು ಪತ್ರಕರ್ತರು ವಿಶೇಷ ಲೇಖನ ಬರೆದು ಉತ್ತಮ ಗೌರವ ಪಡೆಯುತ್ತಿದ್ದರು ಆದರೆ ಇಂದು ಓದುವವರು ಮತ್ತು ಲೇಖನ ಬರೆಯುವವರ ಸಂಖ್ಯೆ ಕಡಿಮೆಯಾಗಿದೆ. ಆ ಪರಂಪರೆ ಮುಂದುವರಿಸಿ ಹಾಗೂ ಪತ್ರಕರ್ತರು ಸತ್ಯವನ್ನು ಜನರಿಗೆ ತಲುಪಿಸುವ ಮಹತ್ತರ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿದ್ದಾರೆ. ಉತ್ತಮ ಪತ್ರಕರ್ತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಪ್ರಶಸ್ತಿಗೆ ನಿಧಿ ನೀಡಿರುವುದಾಗಿ ತಿಳಿಸಿದರು. ಮುಂದೆಯೂ ಪತ್ರಕರ್ತರ ಹಿತಾಸಕ್ತಿಗೆ ಅಗತ್ಯವಾದ ಸಹಕಾರ ನೀಡುವುದಾಗಿ ಅವರು ಭರವಸೆ ನೀಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಜೇಂದ್ರಗಡ ತಾಲ್ಲೂಕು ಘಟಕದ ವತಿಯಿಂದ ಉತ್ತಮ ಪತ್ರಕರ್ತರನ್ನು ಗೌರವಿಸಲು ವಾರ್ಷಿಕ ಪ್ರಶಸ್ತಿ ಸ್ಥಾಪನೆಗೆ ₹1 ಲಕ್ಷ ರೂ. ಠೇವಣಿ ಇಡುವುದಾಗಿ ಘೋಷಿಸಿದ ಎಂ.ಎಸ್.ಐ.ಎಲ್ ನಿಗಮದ ಅಧ್ಯಕ್ಷರು ಹಾಗೂ ರೋಣ ಮತಕ್ಷೇತ್ರದ ಶಾಸಕರಾದ ಜಿ.ಎಸ್. ಪಾಟೀಲ ಅವರಿಗೆ ರೋಣ ನಗರದಲ್ಲಿರುವ ಅವರ ನಿವಾಸದಲ್ಲಿ ಭಾನುವಾರ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.

ಸನ್ಮಾನ ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳು ಶಾಸಕರಿಗೆ ಹಾರ ಹಾಕಿ, ಶಾಲು ಹೊದಿಸಿ, ಫಲಕ ನೀಡಿ ಗೌರವಿಸಿದರು.ಈ ವೇಳೆ ಕಾನಿಪ ತಾಲ್ಲೂಕು ಅಧ್ಯಕ್ಷ ಮಂಜುನಾಥ ರಾಠೋಡ, ಜಿಲ್ಲಾ ಕಾರ್ಯಕಾರಣಿ ಸದಸ್ಯ ಯಲ್ಲಪ್ಪ ತಳವಾರ ಮಾತನಾಡಿ, ಪತ್ರಕರ್ತರ ವೃತ್ತಿಪರತೆಗೆ ಉತ್ತೇಜನ ನೀಡುವ ಉದ್ದೇಶದಿಂದ ಉತ್ತಮ ಪತ್ರಕರ್ತರ ವಾರ್ಷಿಕ ಪ್ರಶಸ್ತಿಗೆ ವೈಯಕ್ತಿಕವಾಗಿ ₹1 ಲಕ್ಷ ರೂ. ನಿಧಿ ಘೋಷಿಸಿರುವುದು ಮಾಧ್ಯಮ ಕ್ಷೇತ್ರದ ಮೇಲಿನ ಅವರ ಕಾಳಜಿ ಹಾಗೂ ಪತ್ರಕರ್ತರ ಸೇವೆಯ ಮೇಲಿನ ಗೌರವವನ್ನು ತೋರಿಸುತ್ತದೆ ಎಂದರು.

ಕಾನಿಪ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಸೈಯ್ಯದ ಹಾಗೂ ಕಾನಿಪ ಜಿಲ್ಲಾ ಕಾರ್ಯಕಾರಣಿ ಸದಸ್ಯರಾದ ನಿಂಗಪ್ಪ ಬೇವಿನಕಟ್ಟಿ, ಶಿವು ಶಶಿಮಠ ಮಾತನಾಡಿ, ಸಮಾಜದ ಅಭಿವೃದ್ಧಿ, ಜನಸಾಮಾನ್ಯರ ಸಮಸ್ಯೆಗಳ ಬೆಳಕು ಚೆಲ್ಲುವ ಕಾರ್ಯದಲ್ಲಿ ಪತ್ರಕರ್ತರು ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಅಂತಹ ಸೇವೆಯನ್ನು ಗುರುತಿಸಿ ಗೌರವಿಸುವುದು ಅತ್ಯಂತ ಮಹತ್ವದ ಕಾರ್ಯವಾಗಿದ್ದು, ಈ ದಿಶೆಯಲ್ಲಿ ಶಾಸಕರಾದ ಜಿ.ಎಸ್. ಪಾಟೀಲ ಕೈಗೊಂಡಿರುವ ಮುಂದಾಳತ್ವ ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು

ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಗಜೇಂದ್ರಗಡ ತಾಲ್ಲೂಕು ಘಟಕದ ಪದಾಧಿಕಾರಿಗಳಾದ ಮಲ್ಲಯ್ಯ ಗುಂಡಗೋಪುರಮಠ, ಸಂಗಮೇಶ ಮೆಣಸಗಿ, ಈಶ್ವರ ಬೇಟಗೇರಿ, ಪ್ರಾಣೇಶ ಕೊಡಗಾನೂರ, ಸೀತಲ್ ಓಲೇಕಾರ ಸೇರಿದಂತೆ ಇತರರು ಇದ್ದರು.

Leave a Reply

Your email address will not be published. Required fields are marked *