ಬಡವರೊಟ್ಟಿಗೆ ರಂಜಾನ್ ಆಚರಿಸುವುದೇ ನಿಜವಾದ ಹಬ್ಬ: ಅಯ್ಯುಬ ಮನಿಯಾರ್


ತಾಳಿಕೋಟಿಯಲ್ಲಿ 100ಕ್ಕೂ ಹೆಚ್ಚು ಕುಟುಂಬಗಳಿಗೆ ಈದ್ ಕಿಟ್ ವಿತರಣೆ | 28 ವರ್ಷಗಳಿಂದ ನಿರಂತರ ಸಮಾಜ ಸೇವೆ
ತಾಳಿಕೋಟೆ: ಹಬ್ಬಗಳು ಕೇವಲ ಸ್ಥಿತಿವಂತರಿಗೆ ಸೀಮಿತವಾಗಿರದೆ ಸಮಾಜದ ಬಡವರು ಹಾಗೂ ಅಗತ್ಯವಿರುವವರೊಟ್ಟಿಗೆ ಹಂಚಿಕೊಂಡಾಗಲೇ ಅದರ ನಿಜವಾದ ಅರ್ಥ ಸಾರ್ಥಕವಾಗುತ್ತದೆ ಎಂದು ಮುದ್ದೇಬಿಹಾಳದ ಖ್ಯಾತ ಉದ್ಯಮಿದಾರ ಹಾಗೂ ಸಮಾಜಸೇವಕರಾದ ಅಯ್ಯುಬ ಮನಿಯಾರ್ ಹೇಳಿದರು.


ತಾವು ಹುಟ್ಟಿದ ನಾಲತವಾಡ ಪಟ್ಟಣದ ಜಾಮಿಯಾ ಮಸೀದಿ ಹಾಗೂ ತಾಳಿಕೋಟೆ ಪಟ್ಟಣದ ಮಸ್ಜಿದ್-ಆಲಾ ಸಭಾಂಗಣದಲ್ಲಿ ನಡೆದ ಈದ್ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಮ್ಮ ಅಗಲಿದ ತಂದೆ ಮದನಸಾಬ ಮತ್ತು ತಾಯಿ ಅಮೀನಬಿ ಅವರ ಸ್ಮರಣಾರ್ಥವಾಗಿ ಪ್ರತಿ ವರ್ಷ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಸೇವೆಯನ್ನು ಮಾಡುತ್ತೇನೆ ಎಂದರು.


“ಈ ಕಿಟ್ ನೀಡುವುದಕ್ಕಿಂತ ಹೆಚ್ಚಾಗಿ ನಿಮ್ಮನ್ನೆಲ್ಲಾ ಭೇಟಿ ಮಾಡುವುದು ನನ್ನ ಮುಖ್ಯ ಉದ್ದೇಶವಾಗಿದೆ. ಒಬ್ಬ ಅಣ್ಣ ತನ್ನ ತಂಗಿಯನ್ನು, ಒಬ್ಬ ಮಗ ತನ್ನ ತಾಯಿಯನ್ನು ನೋಡಲು ಬರುವಂತೆ ನಾನು ಪ್ರತಿ ವರ್ಷ ನಿಮ್ಮನ್ನು ನೋಡಲು ಬರುತ್ತೇನೆ. ಈ ಕಿಟ್‌ನ ಬೆಲೆ ನಿಮ್ಮ ಪ್ರೀತಿ ಮತ್ತು ಆತ್ಮೀಯತೆಗೆ ಸಮನಾಗುವುದಿಲ್ಲ. ನನ್ನ ಪೋಷಕರಿಗೆ ಸ್ವರ್ಗಪ್ರಾಪ್ತಿ ಆಗಲೆಂದು ನೀವು ಪ್ರಾರ್ಥಿಸಬೇಕು,” ಎಂದು ಅವರು ಭಾವುಕರಾಗಿ ಹೇಳಿದರು.


ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕರಾದ ಮೊಹಮ್ಮದ್ ಖಾಸಿಂ ನಮಾಜಕಟ್ಟಿ, ಅಯ್ಯುಬ ಮನಿಯಾರ್ ಅವರು ಕಳೆದ 28 ವರ್ಷಗಳಿಂದ ನಿರಂತರವಾಗಿ ಈದ್ ಕಿಟ್ ವಿತರಣಾ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು. 1998ರಲ್ಲಿ ಕೇವಲ 14 ಕಿಟ್‌ಗಳಿಂದ ಆರಂಭವಾದ ಈ ಸೇವೆ ಇಂದು ಸುಮಾರು 800ಕ್ಕೂ ಹೆಚ್ಚು ಕುಟುಂಬಗಳಿಗೆ ತಲುಪಿದೆ. ತಾಳಿಕೋಟೆ, ನಾಲತವಾಡ, ಮುದ್ದೇಬಿಹಾಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಬಡ ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಅಗತ್ಯ ಆಹಾರ ಸಾಮಗ್ರಿಗಳನ್ನೊಳಗೊಂಡ ಈದ್ ಕಿಟ್‌ಗಳನ್ನು ವಿತರಿಸುವ ಮೂಲಕ ಅವರು ಮಾನವೀಯ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಇದಲ್ಲದೆ ಜಾತಿ–ಮತಭೇದವಿಲ್ಲದೆ ಉಚಿತ ಕಣ್ಣಿನ ತಪಾಸಣೆ ಹಾಗೂ ಶಸ್ತ್ರಚಿಕಿತ್ಸೆ, ವಿಧವೆಯರಿಗೆ ಮಾಸಿಕ ಪಿಂಚಣಿ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಅವರು ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಇಂಜಿನಿಯರ್ ಮುರ್ತುಜಾ ಮ್ಹೇತ್ರಿ, ಇಬ್ರಾಹಿಮ್ ಸಾಬ ಆರ್ಬೋಳ, ಹಬೀಬಸಾಬ ಮಾನ್ವಿ, ಖುತ್ಬುದ್ದಿನ್ ಮೋಮಿನ್, ಮಹಿಬೂಬ ಯಕೀನ, ಪತ್ರಕರ್ತ ರಾಜೇಶ್ ಇನಾಮದಾರ, ಎಲ್.ಎಚ್. ಮಮದಾಪೂರ, ಆಫ್ತಾಬ ಮನಿಯಾರ್, ಬಾಬಾ ಯಕೀನ ಸೇರಿದಂತೆ ಜಮಾತೆ ಇಸ್ಲಾಮಿ ಹಿಂದ್ ತಾಳಿಕೋಟಿ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.
ಶಿಕ್ಷಕರಾದ ಇರ್ಫಾನ್ ಕಾಜಿ ಕುರ್‌ಆನ್ ಪಠಿಸಿದರು. ಇಲಿಯಾಸ್ ಚೌದ್ರಿ ಕಾರ್ಯಕ್ರಮ ನಿರೂಪಿಸಿದರು. ಮುಜಾಹಿದ್ ನಮಾಜಕಟ್ಟಿ ವಂದಿಸಿದರು.

Leave a Reply

Your email address will not be published. Required fields are marked *