ವಿಜಯ ಸಿಂಧೂರ, ಗಜೇಂದ್ರಗಡ
ಭೌತಿಕ ಬದುಕಿನಲ್ಲಿ ಬಳಲಿ ಬಂದ ಜೀವಾತ್ಮರಿಗೆ ದೇವಾಲಯಗಳು ಶಾಂತಿ ನೆಮ್ಮದಿ ನೀಡುವ ಕೇಂದ್ರಗಳಾಗಿವೆ ಎಂದು ಬಾಳೆಹೊನ್ನೂರು ಶ್ರೀರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಿಸಿದ್ದಾರೆ.

ಗಜೇಂದ್ರಗಡ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ದೇವಸ್ಥಾನ ನಿರ್ಮಾಣ ಭೂಮಿ ಪೂಜೆ,ಶಿಲಾನ್ಯಾಸ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಮನುಷ್ಯ ಯಾವಾಗಲೂ ಸುಖವನ್ನೇ ಬಯಸುತ್ತಾನೆ. ಸುಖದ ಮೂಲ ಧರ್ಮಾಚರಣೆಯಲ್ಲಿದೆ. ದೇವರು ಕೊಟ್ಟ ಕೊಡುಗೆ ಬೇರೆ ಯಾರೂ ಕೊಡಲು ಸಾಧ್ಯವಿಲ್ಲ. ನಿಂತ ನೆಲ, ಕುಡಿಯುವ ನೀರು, ತಿನ್ನುವ ಅನ್ನ ಬೀಸುವ ಗಾಳಿ ಇವೆಲ್ಲವೂ ಭಗವಂತ ಕೊಟ್ಟ ಕೊಡುಗೆಗಳಾಗಿವೆ. ಶಿಥಿಲಗೊಂಡ ದೇವಸ್ಥಾನವನ್ನು ತೆಗೆದು ಶಿಲಾಮಯ ಭವ್ಯ ದೇವಾಲಯ ನಿರ್ಮಾಣ ಮಾಡಲು ಮುಂದಾದ ನಿಡಗುಂದಿ ಗ್ರಾಮದ ಭಕ್ತರ ಭಕ್ತಿ ಶ್ರದ್ಧೆಗೆ ಸಾಕ್ಷಿಯಾಗಿದೆ. ನಿಡಗುಂದಿ ಗ್ರಾಮದಲ್ಲಿ ಶ್ರೀ ವೀರಭದ್ರೇಶ್ವರ ಭವ್ಯ ದೇವಾಲಯ ನಿರ್ಮಾಣವಾಗಿ ಈ ಭಾಗದ ಭಕ್ತರ ಭಕ್ತಿ,ಶ್ರದ್ದಾ ಕೇಂದ್ರವಾಗಲಿ,ಇದಕ್ಕೆ ಶ್ರಮಿಸುವ ಸರ್ವರಿಗೂ, ಮುಂದಾಳತ್ವ ವಹಿಸಿದವರಿಗೆ, ಸಮಿತಿಯ ಎಲ್ಲ ಸದಸ್ಯರಿಗೆ ಜಗದ್ಗುರುಗಳು ಶುಭ ಹಾರೈಸಿದರು.
ಭೂಮಿ ಪೂಜೆ ನೆರವೇರಿಸಿದ ಗ್ಯಾರಂಟಿ ಸಮಿತಿ ಅಧ್ಯಕ್ಷ ಮಿಥುನ್ ಪಾಟೀಲ ಮಾತನಾಡಿ,ಭಾರತ ಪುಣ್ಯ ಭೂಮಿಯಲ್ಲಿ ಇರುವಷ್ಟು ದೇವಸ್ಥಾನ, ಮಠ ಮಂದಿರಗಳು ಬೇರೆಲ್ಲಿಯೂ ಇಲ್ಲ. ಆಧ್ಯಾತ್ಮದ ಅರಿವು ಶಾಂತಿ ನೆಮ್ಮದಿಯ ಬದುಕಿಗೆ ಕಾರಣ. ದೇವಾಲಯಗಳು ಮನಸ್ಸಿಗೆ ಸಮಾಧಾನ ಶಾಂತಿ ಉಂಟು ಮಾಡುತ್ತವೆ ಎಂದರು.

ದೇವರು ಸೃಷ್ಟಿಸಿದ ಪ್ರಕೃತಿಯಿಂದ ಎಲ್ಲವನ್ನೂ ಬಳಸಿಕೊಳ್ಳುವ ಮನುಷ್ಯರು ದೈವ ಮತ್ತು ಪ್ರಕೃತಿಯ ಮೇಲೆ ಕೃತಜ್ಞತಾ ಭಾವ ಉಳಿಸಿಕೊಂಡು ಬಾಳಿದರೆ ಜೀವನ ಸುಖಮಯವಾಗಲಿದೆ ಎಂದು ಹೇಳಿದರು
ರೋಣ ಬೂದಿಶ್ವರಮಠದ ಪೂಜ್ಯರು ಮಾತನಾಡಿ, ನೆಮ್ಮದಿಯ ಬದುಕಿಗೆ ಧರ್ಮಾಚರಣೆ ಮುಖ್ಯ.
ಮಾನವ ಜನ್ಮ ಶ್ರೇಷ್ಠವಾಗಿರುವುದರಿಂದ ಹುಟ್ಟಿದ ಮೇಲೆ ಶಿವಜ್ಞಾನ ಪ್ರಾಪ್ತಿ ಮತ್ತು ಗುರುಕಾರುಣ್ಯಕ್ಕಾಗಿ ಪ್ರಯತ್ನಿಸಬೇಕು. ಅರಿತು ಆಚರಿಸಿ ಬದುಕಿದರೆ ಜೀವನ ಶ್ರೇಯಸ್ಕರವಾಗುತ್ತದೆ, ಮರೆತು ಮಲಗಿದರೆ ಬದುಕು ದುರ್ಭರಗೊಳ್ಳುತ್ತದೆ. ಸಕಲ ಜೀವಾತ್ಮರಿಗೂ ಒಳಿತನ್ನೇ ಬಯಸಿದ ವೀರಶೈವ ಧರ್ಮ ಕಾಲ ಕಾಲದಲ್ಲಿ ಸಮಾಜಕ್ಕೆ ಅಗತ್ಯ ಮಾರ್ಗದರ್ಶನ ನೀಡಿದೆ ಎಂದು ಹೇಳಿದರು.
ಸಮಾರಂಭಕ್ಕೂ ಮುನ್ನ ಗ್ರಾಮದ ಪ್ರಮುಖ ಬೀದಿಗಳಲ್ಲಿ ರಂಭಾಪುರಿ ಜಗದ್ಗುರುಗಳ ಭವ್ಯ ಮೆರವಣಿಗೆ ಸಂಭ್ರಮದಿಂದ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದು, ಆಗಮಿಸಿದ ಎಲ್ಲಾ ಭಕ್ತರಿಗೆ ಅನ್ನ ದಾಸೋಹ ಜರುಗಿತು.
ಈ ಸಮಯದಲ್ಲಿ ಗ್ರಾಮದ ಪ್ರಮುಖರು, ವಿವಿಧ ಪಕ್ಷಗಳ ಮುಖಂಡರು,ಮಠದ ಭಕ್ತರು ಮತ್ತಿತರರು ಉಪಸ್ಥಿತರಿದ್ದರು.
