ವಿಜಯ ಸಿಂಧೂರ,ಗದಗ
ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದ ಹೊರವಲಯದ ಜಮೀನಿನಲ್ಲಿ ಕುರಿಗಾಹಿ ತಮ್ಮ ಸ್ವಂತ ಅಣ್ಣನಿಂದಲೇ ಕೊಲೆಯಾದ ಘಟನೆ ಸೋಮವಾರ ತಡ ರಾತ್ರಿ ನಡೆದಿದೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಿಕ್ಕಮುಲಂಗಿ ಗ್ರಾಮದ ನಿವಾಸಿ ಫಕೀರಪ್ಪ ಈರಪ್ಪ ಕುರುವಿನಕೊಪ್ಪ (19) ಕೊಲೆಯಾದ ಯುವಕ. ತಮ್ಮನನ್ನೇ ಕೊಲೆ ಮಾಡಿರುವ ಆರೋಪಿ ಅಶೋಕನನ್ನು ಪೋಲೀಸರು ಮಂಗಳವಾರ ವಶಕ್ಕೆ ಪಡೆದಿದ್ದಾರೆ.
ಘಟನೆ ವಿವರ:
ರಾಮದುರ್ಗ ತಾಲ್ಲೂಕಿನ ಚಿಕ್ಕಮುಲಂಗಿ ಗ್ರಾಮದವರಾದ ಫಕ್ಕೀರಪ್ಪ ಕುರುವಿನಕೊಪ್ಪ ಮತ್ತು ಅಶೋಕ ಕುರುವಿನಕೊಪ್ಪ ನಡುವೆ ದ್ವೇಷ ಬೆಳೆಯಲು ಹುಡುಗಿ ವಿಚಾರ ಕಾರಣ ಎನ್ನಲಾಗಿದೆ. ತಮ್ಮ ಫಕ್ಕೀರಪ್ಪನಿಗೆ ಮನೆಯವರು ಹುಡುಗಿ ಗೊತ್ತು ಮಾಡಿದ್ದರು. ಅಣ್ಣ ಅಶೋಕನಿಗೆ ಆ ಹುಡುಗಿ ಮೇಲೆ ಮನಸ್ಸಾಗಿತ್ತು. ಇದರಿಂದ ಅಣ್ಣ ತಮ್ಮಂದಿರ ನಡುವೆ ಮನಸ್ತಾಪ ಬೆಳೆಯಲು ಕಾರಣವಾಯಿತು.
ಇದೇ ವೇಳೆ ಅಶೋಕನಿಗೂ ಮನೆಯವರು ಹುಡುಗಿ ನೋಡಿದ್ದರು. ಆದರೆ, ಆ ಹುಡುಗಿ ಬಗ್ಗೆ ಅಸಮಾಧಾನ ಹೊಂದಿದ್ದ ಕಾರಣ ಅಶೋಕನಿಗೆ ತಮ್ಮನ ಮೇಲೆ ದ್ವೇಷ ಮತ್ತಷ್ಟು ಹೆಚ್ಚಾಗಿತ್ತು.
ಇದೇ ವಿಷಯವಾಗಿ ಸೋಮವಾರ ರಾತ್ರಿ ಅಶೋಕ ತನ್ನ ತಮ್ಮ ಫಕ್ಕೀರಪ್ಪನ ಮೇಲೆ 25 ಕೆ.ಜಿ. ತೂಕದ ಕಲ್ಲು ಎತ್ತಿ ಹಾಕಿ ಕ್ರೂರವಾಗಿ ಹತ್ಯೆ ಮಾಡಿದ್ದಾನೆ. ಬಳಿಕ ತಮ್ಮನನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ನರಗುಂದ ಪೊಲೀಸರು ತಿಳಿಸಿದ್ದಾರೆ
