ವಿಜಯ ಸಿಂಧೂರ ಜಕ್ಕಲಿ
ಆಧುನಿಕ ಜಗತ್ತಿಗೆ ಮರುಳಾಗಿ ಮಾನವ ದಿನವಿಡೀ ಒತ್ತಡದ ನಡುವೆ ಬದುಕುತ್ತಿದ್ದಾನೆ. ಒತ್ತಡಗಳಿಂದ ಹೊರ ಬಂದು ನೆಮ್ಮದಿಯಿಂದ ಜೀವನ ನಡೆಸಲು ಪುರಾಣ ಪ್ರವಚನಗಳನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಲಿಸುತ್ತಿರಬೇಕು ಎಂದು ಶಾಖಾ ಶಿವಯೋಗಮಂದಿರ ನಿಡಗುಂದಿ ಕೊಪ್ಪದ ಅಭಿನವ ಚನ್ನಬಸವ ಸ್ವಾಮಿಗಳು ಹೇಳಿದರು.

ಅವರು ಗುರುವಾರ ಸಮೀಪದ ನಿಡಗುಂದಿ ಕೊಪ್ಪದ ಧರ್ಮರ ಮಠದಲ್ಲಿ ಯುಗಾದಿ ಪಾಡ್ಯದಿಂದ ಬಸವ ಜಯಂತಿವರೆಗೆ ನಡೆಯುವ ಇಟಗಿ ಭೀಮಾಂಬಿಕೆ ದೇವಿಯ ಪುರಾಣ ಪ್ರಾರಂಭೋತ್ಸವದ ದಿವ್ಯ ಸಾನಿಧ್ಯತೆ ವಹಿಸಿ ಮಾತನಾಡಿದರು
ಭೀಮಾಂಬಿಕಾದೇವಿ ಸರ್ವ ಜನಾಂಗದ ವರ ಬದುಕಿಗೆ ಬೆಳಕಾದವರು. ದೀಪ ತನ್ನ ಮೈ ಸುಟ್ಟುಕೊಂಡು ಪರರಿಗೆ ಬೆಳಕು ನೀಡುವಂತೆ ನಿಸ್ವಾರ್ಥ ಸೇವೆಗೈದು ಜನರ ಮನಸ್ಸಿನಲ್ಲಿ ಅಜರಾಮರವಾಗಿದ್ದಾರೆ. ಇಂತಹ ಶಿವಶರಣ-ಶರಣೆಯರ ಪುರಾಣ/ಪುಣ್ಯಕಥೆಗಳನ್ನು ಕೇಳುವುದರಿಂದ ಸಜ್ಜನರ ಸಹವಾಸದ ಮಹತ್ವ ತಿಳಿಯುತ್ತದೆ ಎಂದು ಆಶೀರ್ವಚನದಲ್ಲಿ ನುಡಿದರು.
ಧರ್ಮರಮಠದ ವಂಶಸ್ಥ ನಾಗಲಿಂಗಪ್ಪಜ್ಜ ಧರ್ಮರ ಸಮ್ಮುಖದಲ್ಲಿ ಸೇವಾ ಸಮಿತಿಯ ಗುರು-ಹಿರಿಯರು ಉಪಸ್ಥಿತರಿದ್ದರು.
ಶೇಖರಯ್ಯ ಹಿರೇಮಠ ಪುರಾಣ ಪ್ರವಚನ ಗೈದರು. ಕಳಕಪ್ಪ ಕಮ್ಮಾರ ಹಾರ್ಮೋನಿಯಂಗೆ ಪರಶುರಾಮ ಸುಣಗಾರ ಹಾಡಿದರು. ಮಲ್ಲಿಕಾರ್ಜುನ ಸರ್ವಿ ತಬಲಾ ಸಾಥ್ ನೀಡಿದರು. ಶಿಕ್ಷಕ ಆರ್.ವಿ. ಬೆಲ್ಲದ ಸ್ವಾಗತಿಸಿ, ವಂದಿಸಿದರು.
