ಶಿಕ್ಷಕ ಜ್ಞಾನದ ಕಣಜವಾಗಬೇಕು – ಶ್ರೀಕಾಂತ ಪತ್ತಾರ್

ಶಿಕ್ಷಕ ವೃತ್ತಿ ಪವಿತ್ರ ವೃತ್ತಿ ಗುರುವಿನ ಸ್ಥಾನ ಪಡೆಯಲು ಪೂರ್ವಜನ್ಮದ ಪುಣ್ಯದಿಂದ ಸಾಧ್ಯ. ಭವಿಷ್ಯದ ಸಮಾಜವನ್ನು ನಿರ್ಮಾಣ ಮಾಡುವ ಶಿಕ್ಷಕರು ಜ್ಞಾನದ ಕಣಜವಾಗಬೇಕು ಎಂದು ಜೆ.ಎಸ್.ಜಿ. ಪಿ.ಯು. ಕಾಲೇಜಿನ ಕಾರ್ಯದರ್ಶಿ ಶ್ರೀಕಾಂತ ಪತ್ತಾರ್ ಹೇಳಿದರು.

ಅವರು ಮಂಗಳವಾರ ತಾಳಿಕೋಟೆ ಪಟ್ಟಣದ ಮಿಣಜಗಿ ಕ್ರಾಸ್ ನಲ್ಲಿರುವ ಶ್ರೀ ಘನಮಠೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ಬಿ.ಇಡಿ. ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಘನಶ್ರೀ ಬೆಳಕು ಪತ್ರಿಕೆ ಬಿಡುಗಡೆ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಇತ್ತಿಚಿನ ತಲೆಮಾರಿನ ಯುವಕರು ಕೇವಲ ಶೈಕ್ಷಣಿಕ ಪ್ರಮಾಣ ಪತ್ರಕ್ಕಾಗಿ ವಿವಿಧ ಪದವಿಗಳನ್ನು ಪಡೆಯುತ್ತಿರುವದು ಖೇದಕರ ಸಂಗತಿಯಾಗಿದ್ದು ಬೇರೆ ಯಾವುದೇ ಪದವಿಗಳಲ್ಲಿ ಏನಾದರೂ ಆಗಲಿ ಶಿಕ್ಷಕರಾಗಲು ಬಯಸಿ ಬಂದಂತಹ ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ನಿರಂತರ ಅಧ್ಯಯನದಿಂದ ಜ್ಞಾನವನ್ನು ವೃದ್ಧಿಗೊಳಿಸಿಕೊಂಡು ಸುಸಂಸ್ಕೃತ ಸಮಾಜ ನಿರ್ಮಿಸುವ ಜವಬ್ದಾರಿ ನಿಮ್ಮ ಮೇಲಿದೆ. ಇಂತಹ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿರುವ ನೀವು ಭಾಗ್ಯಶಾಲಿಗಳು, ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲಿ ನಿರಂತರ ಅಧ್ಯಯನಕ್ಕೆ ಇಂದಿನಿಂದಲೇ ಪಣತೊಡಬೇಕು ಎಂದರು.

ಮುಖ್ಯ ಅತಿಥಿ ಬಿ.ಸಾಲವಡಗಿ ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಸುಮಂಗಲ ಕೋಳೂರು ಮಾತನಾಡಿ, ಕಾಶಿ ವಿಶ್ವವಿದ್ಯಾಲಯ ಸ್ಥಾಪಿಸಲು ಮದನ್ ಮೋಹನ್ ಮಾಳವೀಯ ಯಾವರೀತಿಯಾಗಿ ಪರಿಶ್ರಮ ಪಟ್ಟರು ಅದೇ ರೀತಿಯಾಗಿ ಶ್ರೀ ಘನಮಠೇಶ್ವರ ಶಿಕ್ಷಣ ಸಂಸ್ಥೆ ಕಟ್ಟುವಲ್ಲಿ ಡಾ.ಎಸ್.ಎಮ್.ಸಜ್ಜನ ದಂಪತಿಗಳ ನಿರಂತರ ಶ್ರಮವಿದೆ. ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಅಧ್ಯಯನ ಮಾಡುತ್ತಿರುವ ತಾವುಗಳು ಉತ್ತಮ ತರಬೇತಿ ಪಡೆದು ಮಕ್ಕಳೊಂದಿಗೆ ಪ್ರೀತಿ,‌ ಸ್ನೇಹ, ಸಹಕಾರದಿಂದ ವರ್ತಿಸಿ ಮಕ್ಕಳ ನೆನಪಿನಲ್ಲಿ ಉಳಿಯುವಂತಹ ಶಿಕ್ಷಕರಾಗಿ ಬೇಕು ಎಂದು ಹೇಳಿದರು

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಡಾ. ಎಸ್.ಎಮ್.ಸಜ್ಜನ ಮಾತನಾಡಿ, ಬಿ.ಇಡಿ. ಪ್ರಶಿಕ್ಷಣಾರ್ಥಿಗಳು ತಾವು ಆಯ್ಕೆ ಮಾಡಿಕೊಂಡ ವೃತ್ತಿಯನ್ನು ಯಶಸ್ವಿಯಾಗಿ ನಿರ್ವಹಿಸಲು ಛಲಗಾರಿಕೆ ಇರಬೇಕು ಮತ್ತು ಯಾವತ್ತು ಧನಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು. ಧನಾತ್ಮಕ ಚಿಂತನೆಗಳು ಮನುಷ್ಯನನ್ನು ಸರಿಯಾದ ಮಾರ್ಗದಲ್ಲಿ ಕೊಂಡುಯ್ಯುವುದರಿಂದ ನಕರಾತ್ಮಕ ಭಾವನೆ ನಿಮ್ಮಲ್ಲಿ ಸುಳಿಯದಂತಿರಲು ದಿನಾಲು ಯೋಗ ಮತ್ತು ಧ್ಯಾನವನ್ನು ಮಾಡಬೇಕು ಎಂದ ಅವರು ಶಿಕ್ಷಕ ಪ್ರತಿದಿನ ಹೊಸದನ್ನು ಹುಡುಕುವ ನಾವಿನ್ಯತೆ ಬೆಳೆಸಿಕೊಳ್ಳಬೇಕು ಆ ನಿಟ್ಟಿನಲ್ಲಿ ನಿಮ್ಮ ಓದುಗಾರಿಕೆಗೆ ಮತ್ತು ಬರವಣಿಗೆ ಕೌಶಲ್ಯಕ್ಕೆ ಕೆಲಸ ನೀಡಿ ನಿಮ್ಮಲ್ಲಿನ ಶೈಕ್ಷಣಿಕ ವಿಚಾರಧಾರೆಗಳನ್ನು ಹೊರತಂದು ಘನಶ್ರೀ ಬೆಳಕು ಪತ್ರಿಕೆ ತಯಾರಿಸಿರುವದು ಸಂತೋಷದ ವಿಷಯವಾಗಿದೆ ಇದಕ್ಕಾಗಿ ಪ್ರಾಚಾರ್ಯರು ಮತ್ತು ಬೋಧಕ ಸಿಬ್ಬಂದಿಯವರಿಗೆ ಅಭಿನಂದಿಸುತ್ತೇನೆ ಎಂದರು.

ಕಾರ್ಯಕ್ರಮದ ಕುರಿತು ಪ್ರಾಚಾರ್ಯ ಡಾ. ಟಿ.ವಿ.ಶೆಟ್ಟಿ ಮತ್ತು ಶ್ರೀಮತಿ ಅನಿತಾ ಸಜ್ಜನ್ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ವಿ.ಎಸ್.ಸಜ್ಜನ್, ಘನಮಠೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ದೇಸಾಯಿ, ಸಿ.ಬಿ.ಎಸ್.ಇ. ಶಾಲೆಯ ಮುಖ್ಯೋಪಾಧ್ಯಾಯ ಜಯಚಂದ್ರನ್ ಮತ್ತು ಬೆಸ್ಟ್ ಟಿ.ಯು.ಕಾಲೇಜಿನ ಪ್ರಾಚಾರ್ಯ ಮಾರಯ್ಯ ಉಪಸ್ಥಿತರಿದ್ದರು. ಈ ಸಮಯದಲ್ಲಿ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪ್ರಥಮ ಮತ್ತು ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು ಸಿದ್ದಮ್ಮ ನಿರೂಪಿಸಿದರು, ಕಾವೇರಿ ಸಜ್ಜನ್ ಸಂಗಡಿಗರು ಪ್ರಾರ್ಥಿಸಿದರು, ಸುನಿಲ್ ಗುರವ್ ಸ್ವಾಗತಿಸಿದರು ಮತ್ತು ಶರಣಗೌಡ ಸಂಕನಾಳ ವಂದಿಸಿದರು.

ವರದಿ ರಾಜೇಶ್ ಇನಾಮದಾರ, ತಾಳಿಕೋಟೆ

Leave a Reply

Your email address will not be published. Required fields are marked *