TLK-2 ತಾಳಿಕೋಟಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ ಇದರ ಆಡಳಿತ ಮಂಡಳಿಯ ಹಿಂದುಳಿದ ವರ್ಗ “ಅ” ಒಂದು ಸ್ಥಾನಕ್ಕೆ ರವಿವಾರ ದಂದು ನಡೆದ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಗ್ರಾಮದ ಸಿದ್ದಪ್ಪ ಬಸಪ್ಪ ಕಟ್ಟಿಮನಿ ಇವರು ಆಯ್ಕೆಯಾದರು.

ಸಂಘದ ಒಟ್ಟು 12 ಸ್ಥಾನಗಳ ಪೈಕಿ ಈ ಮೊದಲು 11 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಎಲ್ಲಾ ಸ್ಥಾನಗಳ ಅವಿರೋಧ ಆಯ್ಕೆಗೆ ಗಣ್ಯರೆಲ್ಲರೂ ಸೇರಿ ಸಾಕಷ್ಟ ಕಸರತ್ತು ಮಾಡಿದ್ದರೂ 11 ಸ್ಥಾನಗಳ ಅವಿರೋಧ ಆಯ್ಕೆ ನಡೆದಿತ್ತು ಈ ಒಂದು ಸ್ಥಾನಕ್ಕೆ ಚುನಾವಣೆ ನಡೆಸುವುದು ಅನಿವಾರ್ಯವಾಗಿತ್ತು ಅದರಂತೆ ಫೆಬ್ರವರಿ 22ರಂದು ಅಂದರೆ ನಿನ್ನೆ ಈ ಒಂದು ಸ್ಥಾನಕ್ಕೆ ಚುನಾವಣೆಯನ್ನು ನಡೆಸಲಾಯಿತು. ಸದರಿ ಚುನಾವಣೆಯಲ್ಲಿ ಒಟ್ಟು 243 ಮತಗಳು ಚಲಾವಣೆ ಗೊಂಡಿದ್ದು 3 ಮತಗಳು ತಿರಸ್ಕೃತಗೊಂಡವು. ಇನ್ನುಳಿದ 240 ಮತಗಳಲ್ಲಿ ವಿಜೇತ ಅಭ್ಯರ್ಥಿ ಸಿದ್ದಪ್ಪ ಬಸಪ್ಪ ಕಟ್ಟಿಮನಿ ಇವರಿಗೆ 145 ಮತಗಳು ಹಾಗೂ ಅವರ ಪ್ರತಿಸ್ಪರ್ಧಿ ಖ್ಯಾತನಾಳ ಗ್ರಾಮದ ಮಾಳಪ್ಪ ಸಿದ್ದಪ್ಪ ಕಾಳಗಿ ಇವರಿಗೆ 95 ಮತಗಳ ಬಂದವು. ಸಿದ್ದಪ್ಪ ಕಟ್ಟಿಮನಿಯವರು 50 ಮತಗಳ ಅಂತರದಿಂದ ಗೆಲುವು ಸಾಧಿಸಿ ಆಯ್ಕೆಯಾದರು. ಸಹಕಾರಿ ಅಭಿವೃದ್ಧಿ ಅಧಿಕಾರಿ ವಿಜಯಕುಮಾರ್ ಉತ್ನಾಳ ಅವರು ರಿಟರ್ನಿಂಗ್ ಆಫೀಸರ್ ಆಗಿ ಕಾರ್ಯನಿರ್ವಹಿಸಿ ಫಲಿತಾಂಶ ಘೋಷಿಸಿದರು. ಸಂಘದ ಮುಖ್ಯ ಮುಖ್ಯ ಕಾರ್ಯನಿರ್ವಾಹಕ ಎಸ್.ಬಿ. ಬಿರಾದಾರ ಹಾಗೂ ಸಿಬ್ಬಂದಿಗಳು ಚುನಾವಣಾ ಪ್ರಕ್ರಿಯೆಗೆ ಸಹಕರಿಸಿದರು.
ವಿಜಯೋತ್ಸವ: ಮುಖಂಡ ಮಡುಸೌಕಾರ ಬಿರಾದಾರ ಇವರ ನೇತೃತ್ವದಲ್ಲಿ ನಡೆದ ವಿಜಯೋತ್ಸವದಲ್ಲಿ ಕಟ್ಟಿಮನಿ ಅವರ ಬೆಂಬಲಿಗರು ಅಭಿಮಾನಿಗಳು ಪಟಾಕಿ ಸಿಡಿಸಿ ಗುಲಾಲು ಎರಚಿ ಸಿಹಿ ವಿತರಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಮಡುಸೌಕಾರ ಬಿರಾದಾರ ಅವರು ಮತದಾರ ಬಾಂಧವರ ಸಹಕಾರದಿಂದ ಇಂದು ನಮಗೆ ವಿಜಯ ಲಭಿಸಿದೆ ನಾನು ಅವರನ್ನು ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಒಂದಾಗಿ ಸಂಘದ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಹಲವಾರು ಮುಖಂಡರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.
