ವಿಜಯ ಸಿಂಧೂರ ರೋಣ
ಹಳೆಯ ಐತಿಹಾಸಿಕ ದೇವಾಲಯಗಳ ಜೀರ್ಣೋದ್ದಾರ, ಪ್ರಾಚೀನ ಶಿಲ್ಪಕಲೆ, ವಾಸ್ತುಶಿಲ್ಪ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ಮಹತ್ವದ ಕಾರ್ಯಕ್ಕೆ ಸರಕಾರ ಮುಂದಾಗಿದೆ. ಹೊಯ್ಸಳ, ಚಾಲುಕ್ಯರ ಕಾಲದಲ್ಲಿನ ಶಿಥಿಲಗೊಂಡ ದೇವಸ್ಥಾನಗಳನ್ನು, ಮೂಲ ವಿನ್ಯಾಸಕ್ಕೆ ಧಕ್ಕೆ ಬಾರದಂತೆ, ಸಾಂಪ್ರದಾಯಿಕ ಕಲ್ಲು ಮತ್ತು ಸುಣ್ಣದ ಗಾರೆ ಬಳಸಿ, ತಜ್ಞರ ಮಾರ್ಗದರ್ಶನದಲ್ಲಿ ಪುನರ್ನಿರ್ಮಿಸಲಾಗುತ್ತಿದೆ ಎಂದು ರಾಜ್ಯ ಖನಿಜ ಅಭಿವೃದ್ದಿ ನಿಗಮದ ಅಧ್ಯಕ್ಷ,ಶಾಸಕ ಜಿ.ಎಸ್.ಪಾಟೀಲ ಹೇಳಿದರು

ಅವರು ಸೋಮವಾರ ಪಟ್ಟಣದಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ ಗದಗ ಪ್ರವಾಸೋದ್ಯಮ ಇಲಾಖೆಗಳು ಮತ್ತು ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಸಹಯೋಗದಲ್ಲಿ ರೂ.೪.೫೦ ಕೋಟಿ ವೆಚ್ಚದಲ್ಲಿ ರಾಮಲಿಂಗೇಶ್ವರ ದೇವಾಲಯ,ಅನಂತಶಯನ ದೇವಾಲಯ ಹಾಗೂ ಗೌಡರ ಓಣಿಯ ಬಾವಿಗಳನ್ನು ಅಭಿವೃದ್ದಿಪಡಿಸುವ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಹೊಸದಾಗಿ ದೇವಸ್ಥಾನಗಳನ್ನು ನಿರ್ಮಾಣ ಮಾಡುವುದರ ಬದಲು ಹಳೆಯ ದೇಗುಲಗಳನ್ನೇ ಜೀರ್ಣೋದ್ದಾರ ಮಾಡಿದರೆ ಹೆಚ್ಚಿನ ಪುಣ್ಯ ಲಭಿಸಲಿದ್ದು,ರಾಜ್ಯ ಸರಕಾರ ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಎಚ್.ಕೆ.ಪಾಟೀಲರ ಮುತುವರ್ಜಿಯಿಂದ ಇಂತಹ ಮಹತ್ವದ ಕಾರ್ಯಕ್ಕೆ ಮುಂದಾಗಿದ್ದು, ಇವುಗಳ ಮಹತ್ವ ಮನಗಂಡು ಹಳೆಯ ದೇಗುಲಗಳ ಪುನರುಜ್ಜೀವನ ಕಾರ್ಯಕ್ಕೆ ಮನಸ್ಸು ಮಾಡಿದೆ.ಇದಕ್ಕೆ ಸಾರ್ವಜನಿಕರ ಸಹಕಾರವು ಅವಶ್ಯವಾಗಿದೆ ಎಂದರು.

ರೋಣ ಮತ್ತು ಈ ಭಾಗದಲ್ಲಿ ಚಾಲುಕ್ಯರ ಕಾಲದ ಅದ್ಭುತ ಶಿಲ್ಪಕಲಾ ಕೆತ್ತನೆಗಳಿಂದ ಕೂಡಿರುವ ಪುರಾತನ ಕಾಲದ ಅದೆಷ್ಟೋ ದೇಗುಲಗಳು ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿವೆ. ಐತಿಹಾಸಿಕ ಹಿನ್ನೆಲೆಯುಳ್ಳ ಇಂತಹ ಸಾಕಷ್ಟು ದೇವಸ್ಥಾನಗಳಲ್ಲಿ ಕನಿಷ್ಠ ಪೂಜೆ ವ್ಯವಸ್ಥೆ ಇಲ್ಲವಾಗಿದೆ. ಹಾಗಾಗಿ ಹಳೆಯ ದೇವಸ್ಥಾನಗಳನ್ನು ಗುರುತಿಸಿ ಜೀರ್ಣೋದ್ಧಾರ ಕಾರ್ಯ ಮಾಡುವುದೇ ನಾವು ನಿಜವಾಗಿ ಸಲ್ಲಿಸುವ ಮಹಾ ಸತ್ಕಾರ್ಯ ಎಂದರು.

ಮನುಕುಲದ ಜೀವ ಜಗತ್ತಿನಲ್ಲಿ ಗುರು- ಹಿರಿಯರೊಂದಿಗೆ ವಿನಯತೆಯಿಂದ ವರ್ತಿಸಬೇಕು ಎಂಬುದನ್ನು ಮೊದಲು ತೋರಿಸಿಕೊಟ್ಟವ ಶ್ರೀ ರಾಮಲಿಂಗೇಶ್ವರ ಹಾಗೂ ಅನಂತಶಯನರ ಮಾನವೀಯ ಸದ್ಗುಣಗಳನ್ನು ಮೈಗೂಡಿಸಿಕೊಂಡವರಿಗೆ ದೈವತ್ವದ ಅನುಗ್ರಹ ಪ್ರಾಪ್ತಿಯಾಗುತ್ತದೆ. ಯಾವುದೇ ಮಂದಿರಗಳು ಸುಖಾಸುಮ್ಮನೆ ನಿರ್ಮಾಣಗೊಂಡಿಲ್ಲ. ಅಲ್ಲಿನ ಜಾಗಕ್ಕೆ ಶಕ್ತಿಯಿದೆ, ಪೌರಾಣಿಕ ಐತಿಹ್ಯವಿದೆ, ತಪಸ್ಸು ಆಚರಿಸಿದ ತೇಜಸ್ಸಿದೆ. ಅಲ್ಲದೆ, ದೇವರೇ ನಡೆದಾಡಿದ ಜಾಗಗಳಿವೆ, ಋಷಿಗಳು ನೆಲೆಸಿದ ತಾಣಗಳಿವೆ. ಅವಧೂತರು, ಸಂತ-ಮಹAತರು, ಸಾಧು-ಸಂನ್ಯಾಸಿಗಳು, ಧರ್ಮಾಚಾರ್ಯರು, ಮಠಾಪತಿಗಳು ಈ ಸಮಾಜವನ್ನು ಎಚ್ಚರಿಸಿದ, ಸುಪಥಕ್ಕೆ ತಂದ ನೆನಪುಗಳಿವೆ ಎಂದರು.
ಹಳೆಯ ಐತಿಹಾಸಿಕ ದೇವಾಲಯಗಳ ಸಂಸ್ಕೃತಿ ಪುನರ್ ಪ್ರತಿಷ್ಠಾಪನೆ ನಿಟ್ಟಿನಲ್ಲಿ ಸರಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಆದರೆ, ನಮ್ಮಲ್ಲಿ ಪ್ರಾಚೀನ ಕಾಲದಲ್ಲಿ ನಿರ್ಮಾಣವಾದ, ಸಾಂಸ್ಕೃತಿಕ, ಆಧ್ಯಾತ್ಮಿಕ ಪ್ರಜ್ಞೆಗೆ ಸಾಕ್ಷಿಯಾಗಿದ್ದ ಅಸಂಖ್ಯ ದೇವಸ್ಥಾನಗಳು ಶಿಥಿಲಾವಸ್ಥೆ ತಲುಪಿವೆ. ಮಂದಿರ ಶಿಥಿಲಾವಸ್ಥೆ ತಲುಪುವುದು ಎಂದರೆ ಕೇವಲ ಒಂದು ಕಟ್ಟಡ ಪಾಳುಬಿದ್ದಂತಲ್ಲ ಅಲ್ಲಿನ ಸಂಸ್ಕೃತಿಯ ಪ್ರವಾಹ, ಆಧ್ಯಾತ್ಮಿಕ ಚೈತನ್ಯವೇ ನಶಿಸಿದಂತೆ. ನೂರಾರು ವರ್ಷಗಳ ಸಾತ್ವಿಕ ಪ್ರಭಾವಳಿಯೊಂದು ನಿಂತುಹೋದರೆ ಅದರಿಂದ ಇಡೀ ಸಮಾಜಕ್ಕೆ ನಷ್ಟ. ಹಾಗಾಗಿ, ಇಂಥ ದೇವಸ್ಥಾನಗಳ ಜೀರ್ಣೋದ್ಧಾರದ ಅಗತ್ಯವನ್ನು ಮನಗಂಡು, ಪ್ರವಾಸೋದ್ಯಮ ಇಲಾಖೆ ಸಚಿವರು ಅದಕ್ಕಾಗಿ ಶ್ರಮಿಸುತ್ತ ಭಕ್ತಿಲೋಕವನ್ನು ವಿಶಾಲಗೊಳಿಸುತ್ತಿರುವದು ಶ್ಲಾಘನೀಯ ಎಂದು ಹೇಳಿದರು
ಕಾಂಗ್ರೇಸ್ ಪಕ್ಷದ ಮುಖಂಡ ವೀರಯ್ಯ ಸೋಮನಕಟ್ಟಿಮಠ ಮಾತನಾಡಿ, ನೂರು ದೇವಾಲಯಗಳನ್ನು ಕಟ್ಟುವ ಬದಲು ಹಳೆಯ ದೇವಾಲಯ ಜೀರ್ಣೋದ್ಧಾರ ಗೊಳಿಸುವುದು ಪುಣ್ಯದ ಕೆಲಸ. ರೋಣ ಇತಿಹಾಸದಲ್ಲಿ ಇಂದು ಐತಿಹಾಸಿಕ ದಿನ. ನೆಮ್ಮದಿ ಕೇಂದ್ರ ಸ್ಥಾನಗಳು ದೇವಾಲಯಗಳಾಗಿವೆ. ನಕ್ಷೆಯಿಂದ ಕಕ್ಷೆಗೆ ರಾಕೆಟ್ ಉಡಾವಣೆ ಸಂದರ್ಭದಲ್ಲಿಯೂ ವಿಜ್ಞಾನಿಗಳು ನಮ್ಮ ಶ್ರಮವನ್ನು ಸಾರ್ಥಕಗೊಳಿಸುವ ದೇವರೆ ಎಂದು ಪ್ರಾರ್ಥಿಸುತ್ತಾರೆ. ದೇವರ ಇರುವಿಕೆ ಶ್ರದ್ಧೆ ಮತ್ತು ಭಕ್ತಿಯ ಪ್ರತೀಕವಾಗಿದೆ. ಧರ್ಮದಲ್ಲಿ ದೇವರಿಗೆ ವಿಶೇಷವಾದ ಸ್ಥಾನಮಾನವಿದೆ. ನಮ್ಮ ಪಾಲಿನ ಕೆಲಸವನ್ನು ಶ್ರದ್ಧೆ ಮತ್ತು ಪ್ರಾಮಾಣಿ ಕತೆಯಿಂದ ನಿರ್ವಹಿಸಿದರೆ ದೇವರೇ ಫಲನೀಡುತ್ತಾನೆ ಎಂದು ತಿಳಿಸಿದರು.
ಈ ಸಮಯದಲ್ಲಿ ಕೆ.ಸಿ.ಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್.ಪಾಟೀಲ, ಗ್ಯಾರಂಟಿ ಸಮೀತಿ ಅಧ್ಯಕ್ಷ ಮಿಥುನ್ ಪಾಟೀಲ, ಸುವರ್ಣಾ ಕ್ಷೀರಸಾಗರ, ಇಂಜನೀಯರ್ ಶ್ರೀನಿವಾಸಗೌಡ ಪಾಟೀಲ, ಗುತ್ತಿಗೆದಾರ ಎಸ್.ವಿ.ಹಿರೇಮಠ, ಬಸವರಾಜ ನವಲಗುಂದ, ಯೂಸೂಫ್ ಇಟಗಿ, ಸೇರಿದಂತೆ ಅನೇಕರು ಇದ್ದರು
