ಬೆಂಗಳೂರು : ಬಿಜೆಪಿ ಶಾಸಕರಾದ ಮುನಿರತ್ನ ಮತ್ತು ಮುನಿರಾಜು ಅವರು ಮಂಗಳವಾರ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ.

ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುನಿರತ್ನ, ನಮ್ಮ ಕ್ಷೇತ್ರಗಳಲ್ಲಿ ಸಾಕಷ್ಟು ಕಾಮಗಾರಿಗಳು ನಿಂತಿವೆ. ಸೇತುವೆಗಳು, ಆಸ್ಪತ್ರೆಗಳು ಸೇರಿದಂತೆ ಸಾಕಷ್ಟು ಕೆಲಸಗಳು ಬಾಕಿಯಿವೆ. ಕಳೆದ 3 ವರ್ಷಗಳಿಂದ ನಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿಲ್ಲ.
ಹೀಗಾಗಿ ವಿಶೇಷ ಅಧಿವೇಶನದಲ್ಲಿ ಸಮಯ ಕೊಡುವಂತೆ ಡಿಸಿಎಂ ಅವರನ್ನು ಕೇಳಿದ್ದೆವು. ಅದರಂತೆ ಇವತ್ತು ಭೇಟಿಯಾಗಿ ಮನವಿ ಪತ್ರ ಕೊಟ್ಟಿದ್ದೇನೆ. ಮನವಿಗೆ ಸ್ಪಂದಿಸಿದ ಡಿ.ಕೆ.ಶಿವಕುಮಾರ್, ಕಾಮಗಾರಿ ಪ್ರಾರಂಭಿಸಲು ಹೇಳುವುದಾಗಿ ತಿಳಿಸಿದ್ದಾರೆ. ಅವರ ಭರವಸೆಗಾಗಿ ನಾನು ಕಾಯುತ್ತೇನೆ. ಆದಷ್ಟು ಬೇಗ ನಮ್ಮ ಕ್ಷೇತ್ರದಲ್ಲಿ ನಿಂತಿರುವ ಕಾಮಗಾರಿ ಪೂರ್ಣವಾಗಬೇಕು. ಎಷ್ಟು ಸಮಯದೊಳಗೆ ಆಗಲಿದೆ ಎಂದು ಹೇಳಿಲ್ಲ ಎಂದರು.
