SSLC ವಿದ್ಯಾರ್ಥಿಗೆ ವಂಚಿಸಿದ ಶಿಕ್ಷಕ

ವಿಜಯ ಸಿಂಧೂರ ಧಾರವಾಡ

ವಿದ್ಯಾರ್ಥಿಯ ಮುಖ್ಯ ಘಟ್ಟವೇ ಎಸ್​ಎಸ್​ಎಲ್​ಸಿ. ಅದಾದ ಮೇಲೆ ಆತನ ಬದುಕೇ ಬದಲಾಗಿ ಬಿಡುತ್ತೆ. ಅಂತಹ SSLC ಪರೀಕ್ಷೆಯನ್ನು ಉತ್ತೀರ್ಣ ಮಾಡಿಕೊಡುತ್ತೇನೆ ಅಂತಾ ಹೇಳಿ ಓರ್ವ ಶಿಕ್ಷಕ ವಿದ್ಯಾರ್ಥಿಗೆ ಮೋಸ ಮಾಡಿದ ಘಟನೆಯೊಂದು ಧಾರವಾಡದಲ್ಲಿ ನಡೆದಿದೆ. ವಿದ್ಯಾರ್ಥಿಯಿಂದ ಬಂಗಾರ ಪಡೆದು ಇದೀಗ ವಿದ್ಯಾರ್ಥಿ ಜೀವನವನ್ನೇ ಅತಂತ್ರ ಮಾಡಿದ್ದಾನೆ.

ವಿದ್ಯಾರ್ಥಿಯ ಜೀವನದಲ್ಲಿ ಚೆಲ್ಲಾಟವಾಡಿದ ಶಿಕ್ಷಕ

ಹೀಗೆ ವಿದ್ಯಾರ್ಥಿಗೆ ಚಳ್ಳೆಹಣ್ಣು ತಿನ್ನಿಸಿದ ಧಾರವಾಡದ ವಿದ್ಯಾರಣ್ಯ ಶಾಲೆಯ ಶಿಕ್ಷಕ ರಾಜಶೇಖರ್. 10ನೇ ತರಗತಿಯ ವಿದ್ಯಾರ್ಥಿಗಳಿಗೆ ಶಿಕ್ಷಕನಾಗಿರುವ ಈತ, ಇದೀಗ ವಿದ್ಯಾರ್ಥಿಯ ಜೀವನದಲ್ಲಿ ಚೆಲ್ಲಾಟ ಆಡಿದ್ದಾನೆ. 10ನೇ ತರಗತಿ ವಿದ್ಯಾರ್ಥಿಯಾಗಿರೋ ನಗರದ ಶಿವನಗರ ನಿವಾಸಿ ಅಭಿಷೇಕ್ಗೆ ಈ ಬಾರಿಯ ಪರೀಕ್ಷೆಯಲ್ಲಿ ಪಾಸ್ ಮಾಡಿಸುವುದಾಗಿ ನಂಬಿಸಿದ್ದಾನೆ. ಪ್ರಶ್ನೆ ಪತ್ರಿಕೆಗಳನ್ನ ಲೀಕ್ ಮಾಡಿ ಕೊಡುತ್ತೇನೆ ಅಂತ ನಂಬಿಸಿ ವಿದ್ಯಾರ್ಥಿಗೆ ಹಣದ ಬೇಡಿಕೆ ಇಟ್ಟಿದ್ದಾನೆ.

ಆತ್ಮಹತ್ಯೆಗೆ ಯತ್ನಿಸಿದ ಅಭಿಷೇಕ್

ನನ್ನ ಮಗನ ಕಾಲೇಜಿನ ಫೀಸ್ ಕಟ್ಟಬೇಕು. ನಿಮ್ಮ ಮನೆಯ ಬಂಗಾರವನ್ನು ತಂದು ಕೊಡು ಅಂತ ಹೇಳಿದ್ದಾನೆ. ಅದಕ್ಕೆ ಮೊದಲು ಒಪ್ಪದ ವಿದ್ಯಾರ್ಥಿ ಬಳಿಕ ಆತನ ಮಾತನ್ನು ನಂಬಿದ್ದಾನೆ. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ವಿಡಿಯೋ ಕಾಲ್ ಮೂಲಕ ಚಿನ್ನವನ್ನು ಎಲ್ಲಿ ಇಟ್ಟಿದ್ದಾರೆ ಹುಡುಕು ಎಂದು ಹೇಳಿ ಮನೆಯ ಅಲ್ಮೇರಾದಲ್ಲಿಟ್ಟಿದ್ದ 82 ಗ್ರಾಂ ಬಂಗಾರವನ್ನು ತೆಗೆದುಕೊಂಡು ಹೋಗಿ ಶಿಕ್ಷಕನಿಗೆ ಕೊಟ್ಟಿದ್ದಾನೆ ಅಂತ ವಿದ್ಯಾರ್ಥಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಯಾವಾಗ ಈ ವಿಚಾರ ತಂದೆ-ತಾಯಿಗೆ ಗೊತ್ತಾಯಿತೋ ಆಗ ಹೆದರಿಕೊಂಡ ಅಭಿಷೇಕ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *