ವಿಜಯ ಸಿಂಧೂರ
ತಾಳಿಕೋಟೆ :ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಮರ್ಪಕ ಕಾಳಜಿ ಜೀವನದ ಗುಣಮಟ್ಟ, ದೀರ್ಘಾಯುಷ್ಯ ಮತ್ತು ಯೋಗಕ್ಷೇಮಕ್ಕೆ ಅತ್ಯಗತ್ಯವಾಗಿದೆ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಮತ್ತು ಒತ್ತಡ ನಿರ್ವಹಣೆಯು ದೀರ್ಘಕಾಲದ ಕಾಯಿಲೆಗಳನ್ನು ತಡೆಯಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ ಎಂದು ನಾವದಗಿ ಬ್ರಹನ್ಮಠದ ಷ.ಬ್ರ.ರಾಜ ಗುರು ರಾಜೇಂದ್ರ ಒಡೆಯರ ಶಿವಾಚಾರ್ಯ ಮಹಾಸ್ವಾಮಿಗಳು ಸಲಹೆ ನೀಡಿದರು.

ತಾಳಿಕೋಟೆ ತಾಲೂಕಿನ ನಾವದಗಿ ಗ್ರಾಮ ಬ್ರಹನ್ಮಠದ ಗುರು ಪಟ್ಟಾಧಿಕಾರದ ದ್ವಿತೀಯ ವಾರ್ಷಿಕೋತ್ಸವ ಅಂಗವಾಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡ ಬೃಹತ್ ಉಚಿತ ಆರೋಗ್ಯ ಮತ್ತು ಶಸ್ತ್ರಚಿಕಿತ್ಸಾ ಶಿಬಿರದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಮನುಷ್ಯನ ಬಳಿ ಎಲ್ಲವೂ ಇದ್ದು ಒಳ್ಳೆಯ ಆರೋಗ್ಯ ಇಲ್ಲದೆ ಹೋದಲ್ಲಿ ಅವನು ಏನನ್ನೂ ಮಾಡಲು ಸಾಧ್ಯವಿಲ್ಲ. ಸಕಲ ಸಂಪತ್ತುಗಳಲ್ಲಿ ಆರೋಗ್ಯ ಶ್ರೇಷ್ಠ ಸಂಪತ್ತಾಗಿದೆ ಅದರ ಕುರಿತು ಹೆಚ್ಚು ಕಾಳಜಿ ವಹಿಸಿ ಹಾಗೂ ರೋಗಗಳಿಗೆ ಸಂಬಂಧಿಸಿ ತಜ್ಞ ವೈದ್ಯರು ಆಗಮಿಸಿದ್ದಾರೆ, ಇದರ ಸದುಪಯೋಗವನ್ನು ನೀವು ಮಾಡಿಕೊಳ್ಳಿ ಇಂತಹ ಶಿಬಿರಗಳಿಂದ ಗ್ರಾಮೀಣ ಭಾಗದ ಬಡವರಿಗೆ ಹೆಚ್ಚು ಅನುಕೂಲವಾಗುತ್ತದೆ ಎಂದರು.

ಡಾ. ರುದ್ರಸ್ವಾಮಿ ಹಿರೇಮಠ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಇಂತ ಶಿಬಿರುಗಗಳನ್ನು ಶ್ರೀಗಳು ಹಮ್ಮಿಕೊಳ್ಳುತ್ತಿದ್ದಾರೆ ಅವರ ಎಲ್ಲ ಸೇವಾ ಕಾರ್ಯಗಳಿಗೆ ಭಕ್ತರ ಸಂಪೂರ್ಣ ಸಹಕಾರವಿದೆ ಎಂದರು.
ಇದೇ ಸಂದರ್ಭದಲ್ಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅನುಪಮ ಸೇವೆಯನ್ನು ಸಲ್ಲಿಸುತ್ತಿರುವ ಮುಖ್ಯ ಗುರುಮಾತೆ ಅಂಬಿಕಾ ಗೋಗಿ ಇವರನ್ನು ಶ್ರೀಮಠದಿಂದ ಗೌರವಿಸಲಾಯಿತು. ಸಮಾರಂಭದಲ್ಲಿ ವೈದ್ಯರಾದ ಗುರುಲಿಂಗಯ್ಯ ಹಿರೇಮಠ, ಗುರುಮೂರ್ತಯ್ಯ ಹಿರೇಮಠ,ರುದ್ರಸ್ವಾಮಿ ಹಿರೇಮಠ,ಶ್ರೀದೇವಿ ಹಿರೇಮಠ, ಅನುಗ್ರಹ ಕಣ್ಣಿನ ಆಸ್ಪತ್ರೆಯ ಡಾ.ಕಾರ್ತಿಕ ವಿಜಾಪುರ, ಮಹಾಂತೇಶ ಹುಜರಾತಿ, ಡಾ.ಚಂದ್ರಶೇಖರ ನಾಗಲಿಕರ್ ಲಿಂಗಸೂಗೂರ,ಸಾಹಿತಿ ಬಸವರಾಜ ಗೊರಜಿ,ಡಾ.ಶಿವರಾಜ ಒಡೆಯರ್, ಮುಖ್ಯ ಗುರು ಮಾತೆ ಅಂಬಿಕಾ ಗೋಗಿ, ಸಹ ಶಿಕ್ಷಕ ಸಿ.ಎ.ಯರಲಡ್ಡಿ, ಡಾ.ಆರೀಫ ಮನಿಯಾರ, ಶಾಂತಗೌಡ ಇಬ್ರಾಹಿಂಪೂರ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಸಿಬ್ಬಂದಿಗಳು ಇದ್ದರು. ಶಿಬಿರದಲ್ಲಿ ಹೃದಯ ರೋಗ, ಮಧುಮೇಹ ರೋಗ, ಪಾರ್ಶ್ವ ವಾಯು, ಕಿಡ್ನಿ ಇತ್ಯಾದಿ 200 ರೋಗಿಗಳ ತಪಾಸಣೆ ನಡೆಸಿ ಅಗತ್ಯ ಔಷಧಿಗಳನ್ನು ವಿತರಿಸಲಾಯಿತು ಹಾಗೂ ಕಣ್ಣಿನ ಕಾಯಿಲೆಗೆ ಸಂಬಂಧಿಸಿ 165 ಜನರ ತಪಾಸಣೆ ನಡೆಸಿ ಅದರಲ್ಲಿ 50 ಜನರನ್ನು ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
