ವಿಜಯ ಸಿಂಧೂರ ರೋಣ
ಟ್ರ್ಯಾಕ್ಟರ್‌ಗಳು ಆಟೋರಿಕ್ಷಾ ಟಮ್ ಟಮ್ ಗಳಲ್ಲಿ ಸಾರ್ವಜನಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಗುವಂತೆ ಡಿಜೆ ಹಾಡುಗಳನ್ನು ಹಚ್ಚುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ನರಗುಂದ ಡಿವೈಎಸ್ಪಿ ಪ್ರಭುಗೌಡ ಕಿರೆದಳ್ಳಿ ಹೇಳಿದರು.
ಅವರು ರೋಣ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬ ಮತ್ತು ರಂಜಾನ್ ಹಬ್ಬದ ಕುರಿತು ಸಾರ್ವಜನಿಕರಿಂದ ಶಾಂತಿ ಸಭೆ ನಡೆಸಿ ಮಾತನಾಡಿ, ರೋಣ ತಾಲೂಕಿನಲ್ಲಿ ಇತ್ತೀಚೆಗೆ ಟ್ರ್ಯಾಕ್ಟರ್ ಗಳಲ್ಲಿ ಡಿಜೆ ಹಾಡುಗಳನ್ನು ಜನರಿಗೆ ಕಿರಿಕಿರಿಯಾಗುವಂತೆ ಹಚ್ಚಲಾಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದ್ದು ಸಭೆಯಲ್ಲಿ ಸಾರ್ವಜನಿಕರು ಸಹ ಈ ಬಗ್ಗೆ ಚರ್ಚಿಸಿದ್ದು ಟ್ರ್ಯಾಕ್ಟರ್‌ಗಳಲ್ಲಿ ಬಳಸಲಾಗುವ ಡೀಜೆ ಸೌಂಡ್ ಬಾಕ್ಸಗಳನ್ನು ಪೊಲೀಸರು ಕಿತ್ತು ಎಸೆಯುವ ಮುನ್ನ ಟ್ರಾಕ್ಟರ್ ಚಾಲಕರು ಮತ್ತು ಮಾಲಕರು ಸಾರ್ವಜನಿಕ
ಸ್ಥಳಗಳಲ್ಲಿ ಹಾಗೂ ಪಟ್ಟಣ ಗ್ರಾಮದ ಒಳಗಡೆ ಹಾಡುಗಳನ್ನು ಹೆಚ್ಚು ಸೌಂಡು ಬಿಟ್ಟು ಹಚ್ಚಬಾರದು. ಇದರಿಂದ ಸಾರ್ವಜನಿಕರಿಗೆ ವೃದ್ಧರಿಗೆ ರೋಗಿಗಳಿಗೆ ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತದೆ. ಅಂಥವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಲಾಗುವುದು, ರೋಣ ತಾಲೂಕು ಹಾಗೂ ರೋಣ ಪಟ್ಟಣ ಶಾಂತಿಯುತ ಹಬ್ಬಗಳನ್ನು ಆಚರಣೆ ಮಾಡಿಕೊಂಡು ಬರುತ್ತಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು ಹಾಗೂ ಕಾನೂನು ಪಾಲನೆ ಮಾಡಬೇಕು ಎಂದರು.
ಪಿಎಸ್‌ಐ ಪ್ರಕಾಶ ಬಣಕಾರ ಮಾತನಾಡಿ, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳು ಹತ್ತಿರವಿದ್ದು ಹಬ್ಬದ ನೆಪದಲ್ಲಿ ವಿದ್ಯಾರ್ಥಿಗಳಿಗೆ, ನೌಕರರಿಗೆ, ಅಧಿಕಾರಿಗಳಿಗೆ ಬಣ್ಣ ಹಚ್ಚಿ ತೊಂದರೆ ಕೊಡಬಾರದು. ವಾರ್ನಿಸ್ ಮತ್ತು ಕೆಮಿಕಲ್ ಸಹಿತ ಬಣ್ಣಗಳನ್ನು ಬಳಸಬಾರದು. ಹೋಳಿ ಹಬ್ಬ ಮತ್ತು ರಂಜಾನ್ ಹಬ್ಬಗಳಲ್ಲಿ ಪೊಲೀಸ್ ಇಲಾಖೆ ವತಿಯಿಂದ ಸಕಲ ರೀತಿಯಲ್ಲಿ ಸಾರ್ವಜನಿಕರಿಗೆ ಸಹಕಾರ ನೀಡಲಾಗುವುದು.ಸಾರ್ವಜನಿಕರು ಸಹ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಬೇಕು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಕೆಟ್ಟ ಸಂದೇಶಗಳಿಗೆ ಕಿವಿಗೋಡಬೇಡಿ, ಪೊಲೀಸರೊಂದಿಗೆ ಸಹಕರಿಸಿ ಶಾಂತಿ ಸುವ್ಯವಸ್ಥೆ ಕಾಪಾಡಿ, ದೊಡ್ಡ ಪ್ರಮಾಣದ ಧ್ವನಿವರ್ಧಕಗಳನ್ನು ಬಳಸುವ ಟ್ರಾಕ್ಟರ್ಗಳು ಆಟೋರಿಕ್ಷಾಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು. ಹೋಳಿ ಹಬ್ಬದಲ್ಲಿ ಒತ್ತಾಯಪೂರ್ವಕವಾಗಿ ಬಣ್ಣ ಹಚ್ಚುವುದು, ಪಟ್ಟಿ ಕೇಳುವುದು ವಾಹನಗಳನ್ನು ತಡೆದು ತೊಂದರೆ ಕೊಡುವುದು ಮಾಡಬಾರದು.
ಕಾಮಣ್ಣನ ಸುಡುವ ನೆಪದಲ್ಲಿ ಕಟ್ಟಿಗೆಗಳನ್ನು ಒತ್ತಾಯಪೂರ್ವಕವಾಗಿ ತೆಗೆದುಕೊಂಡು ಹೋಗುವುದು ಮಾಡಬಾರದು ಎಂದರು.
ಸಭೆಯಲ್ಲಿ ಸಿಪಿಐ ವಿಜಯ ಕುಮಾರ ಸೇರಿದಂತೆ ರೋಣ ಪಟ್ಟಣ ಹಾಗೂ ತಾಲೂಕಿನ ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
