ತಂಬಾಕು ನಿಯಂತ್ರಣ ತನಿಖಾ ತಂಡದಿಂದ ದಾಳಿ: 8 ಪ್ರಕರಣ ದಾಖಲು

ರೋಣ: ಪಟ್ಟಣದ ತಂಬಾಕು ಉತ್ಪನ್ನಗಳ ನಿಯಮಬಾಹಿರ ಮಾರಾಟದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಭಾಗವಾಗಿ ಪಟ್ಟಣದಲ್ಲಿ ಹಲವಾರು ತಂಬಾಕು ಅಂಗಡಿಗಳ ಮೇಲೆ ದಾಳಿ ನಡೆಸಿದರು.

ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ, ಪೋಲಿಸ್, ಕಾರ್ಮಿಕ ಇಲಾಖೆ, ಪುರಸಭೆ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಸಹಯೋಗದಲ್ಲಿ ತಂಬಾಕು ನಿಯಂತ್ರಣ ತನಿಖಾ ತಂಡದ ಅಧಿಕಾರಿಗಳಿಂದ ಶುಕ್ರವಾರ ಜಂಟಿ ಕಾರ್ಯಾಚರಣೆ ನಡೆಯಿತು.

ಪ್ರಮುಖ ಪ್ರದೇಶಗಳಾದ ಸೂಡಿ ವೃತ್ತ, ಮುಲಾನಭಾವಿ ಮತ್ತು ಬಸ್ ನಿಲ್ದಾಣದ ನಗರ ಭಾಗಗಳಲ್ಲಿ ತಪಾಸಣೆ ನಡೆಸಿದ ಅಧಿಕಾರಿಗಳು, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಅವಕಾಶ ಮಾಡಿಕೊಡುವುದು ಹಾಗೂ ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿದರು.

ಈ ವೇಳೆ ನಿಯಮ ಉಲ್ಲಂಘನೆ ಮಾಡಿದ ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಲಾಗಿದ್ದು, ಕೆಲ ಅಂಗಡಿಗಳಿಗೆ ತಾತ್ಕಾಲಿಕ ನೋಟಿಸ್ ನೀಡಲಾಗಿದೆ.

ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಗೋಪಾಲ್ ಸುರಪುರ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಈ ಕಾರ್ಯಾಚರಣೆಯಲ್ಲಿ ಸಾರ್ವಜನಿಕ ಪ್ರದೇಶಗಳನ್ನು ‘ಧೂಮಪಾನ ಮುಕ್ತ ನಗರ’ ಗಳೆಂದು ಘೋಷಿಸುವ ಸಲುವಾಗಿ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ತಂಬಾಕು ನಿಯಂತ್ರಣ ತನಿಖಾ ತಂಡದಿಂದ ಕೈಗೊಂಡ ಕಾರ್ಯಾಚರಣೆಯಲ್ಲಿ ಸೆಕ್ಷನ್ 4 ಮತ್ತು 6ಎ ನಾಮಫಲಕ ಅಳವಡಿಸದ ಪ್ರಮುಖ ಸಾರ್ವಜನಿಕ ಸ್ಥಳಗಳ ಮೇಲೆ ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಅಧಿನಿಯಮ-2003ರ ಸೆಕ್ಷನ್ 4, 6ಎ ಮತ್ತು 6ಬಿ ರ ಅಡಿಯಲ್ಲಿ ಪ್ರಕರಣ ದಾಖಲಿಸಿ ದಂಡ ವಿಧಿಸಲಾಯಿತು.ಕಾರ್ಯಚರಣೆಗೆ ಸಂಬಂಧಿಸಿದಂತೆ ಮಾತನಾಡಿದ ಅವರು ಕಾನೂನಿನ ನಿಯಮಗಳನ್ನು ಉಲ್ಲಂಘಿಸದೆ ಕೂಡಲೇ ಅಗತ್ಯ ಕ್ರಮ ಕೈಗೊಂಡು ಸಂಬಂಧಪಟ್ಟ ಮಾಲೀಕರು ನಾಮಫಲಕ ಅಳವಡಿಸಿ ಹಾಗೂ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು,ಗದಗ ಜಿಲ್ಲೆಯನ್ನು ಧೂಮಪಾನ ಮುಕ್ತ ನಗರವನ್ನಾಗಿ ಮಾಡಲು ಸಹಕರಿಸಿ ಎಂದು ಕರೆ ನೀಡಿದರು.

“ಶಾಲೆ-ಕಾಲೇಜುಗಳ ಸುತ್ತಮುತ್ತ ತಂಬಾಕು ಮಾರಾಟ ಮಾಡುವುದು ಕಾನೂನುಬಾಹಿರ. ಇಂತಹ ಪ್ರಕರಣಗಳು ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ,” ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಕೆ ಎ ಹಾದಿಮನಿ ಹೇಳಿದರು.

ಸ್ಥಳೀಯರು ಈ ಕ್ರಮವನ್ನು ಸ್ವಾಗತಿಸಿದ್ದು, ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ದಾಳಿಗಳನ್ನು ನಿಯಮಿತವಾಗಿ ಮುಂದುವರಿಸಲು ಆಗ್ರಹಿಸಿದ್ದರು.

ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಕೆ ಎ ಹಾದಿಮನಿ,ಮಹಿಳಾ ಮತ್ತು ಮಕ್ಕಳ ಅಧಿಕಾರಿಮಂಜುನಾಥ ಕುರಿ,ಬಿ, ಆರ್ ಪಾಟೀಲ್, ಬಸಮ್ಮ ಚಕ್ರಸಾಲಿ, ಮುಸ್ಕಾನ್ ಖರ್ನಾಚಿ, ಗಾಯತ್ರಿ ಜಕ್ಕನಗೌಡ್ರ,ಹಾಗೂ ಪೊಲೀಸ್ ಸಿಬ್ಬಂದಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!