ವಿಜಯ ಸಿಂಧೂರ
ಗಜೇಂದ್ರಗಡ :ಜಾಗತೀಕರಣದ ಪ್ರಭಾವದಿಂದ ಎಲ್ಲ ಕ್ಷೇತ್ರಗಳಲ್ಲಿ ಖಾಸಗಿ ಕಂಪನಿಗಳು ಲಗ್ಗೆ ಇಟ್ಟಿದ್ದು, ಇಲ್ಲಿ ವಿದ್ಯಾರ್ಥಿಗಳು ಕೆಲಸ ಗಿಟ್ಟಿಸಿಕೋಳ್ಳಬೇಕಾದರೆ. ಅವರಲ್ಲಿ ಶಿಸ್ತು, ಕೆಲಸದ ಬದ್ಧತೆ, ಕಠಿಣ ಪರಿಶ್ರಮ, ಉದ್ಯೋಗ ಮೇಲೆ ನಿಷ್ಠೆ ಮತ್ತು ಪ್ರಾಮಾಣಿಕತೆ ಅತೀ ಅವಶ್ಯಕವಾಗಿದೆ. ಅಂತಹ ಗುಣಗಳನ್ನು ಬೆಳೆಸಿಕೂಂಡಾಗ ಭವಿಷ್ಯದಲ್ಲಿ ಉತ್ತಮ ಅವಕಾಶಗಳು ಒದಗಿ ಬರುತ್ತವೆ ಎಂದು ರಾಜ್ಯ ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್.ಪಾಟೀಲ ಹೇಳಿದರು.

ಅವರು ಶನಿವಾರ ಗಜೇಂದ್ರಗಡ ಪಟ್ಟಣದ ಬಿ.ಎಸ್.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಉದ್ಯೋಗ ಭರವಸೆ ಕೋಶ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶ, ಎಂ.ಎನ್.ಸಿ ಕಂಪನಿಗಳ ಸಹಯೋಗದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.ಗ್ರಾಮೀಣ ಮತ್ತು ಪಟ್ಟಣ ಪ್ರದೇಶದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಮೇಳಗಳು ಹೆಚ್ಚು ಅನುಕೂಲಕರವಾಗಿವೆ .ಸಮಾಜದಲ್ಲಿ ಶೇ 60ರಷ್ಟು ಮಂದಿ ಉದ್ಯೋಗ ಅರಸಿ ಬರುತ್ತಿದ್ದು, ಆಧುನಿಕ ಪರಿಸ್ಥಿತಿಯಲ್ಲಿ ಸಾಕಷ್ಟು ವಿಪುಲ ಉದ್ಯೋಗಾವಕಾಶ ಕಲ್ಪಿಸಬೇಕಾಗಿದೆ. ಸ್ಪರ್ಧಾತ್ಮಕ ಯುಗದಲ್ಲಿ ಸಂಬಳದ ಬಗ್ಗೆ ಚಿಂತಿಸದೆ ಉದ್ಯೋಗ ಪಡೆದು ಅನುಭವ ಹೆಚ್ಚಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದರು.

ಗಜೇಂದ್ರಗಡ ತೀವ್ರವಾಗಿ ಬೆಳೆಯುತ್ತಿರುವ ನಗರ ಎಂದು ಗುರುತಿಸಲಾಗುತ್ತಿದ್ದು, ಇಲ್ಲಿ ಗ್ರಾಮೀಣ ಪ್ರದೇಶದ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಬರುತ್ತಿದ್ದಾರೆ. ಅಂತವರಿಗೆ ಈ ಉದ್ಯೋಗ ಮೇಳಗಳು ಹೆಚ್ಚು ಸಹಕಾರಿಯಾಗಲಿವೆ ಎಂದು ಹೇಳಿದರು.
ಮುಖಂಡ ಅಶೋಕ ಭಾಗಮಾರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಉದ್ಯೋಗ ಮೇಳವನ್ನು ಆಯೋಜಿಸುವ ಮೂಲಕ ಯುವಜನರ ಉಜ್ವಲ ಭವಿಷ್ಯಕ್ಕೆ ಹಾದಿ ಮಾಡಿಕೊಟ್ಟಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ಗಜೇಂದ್ರಗಡ ಶಹರದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಶಿವರಾಜ ಘೋರ್ಪಡೆ, ಅಶೋಕ ಬಾಗಮಾರ, ವಿ.ಬಿ.ಸೋಮನಕಟ್ಟಿಮಠ, ಎಚ್.ಎಸ್. ಸೊಂಪೂರ, ಬಸವರಾಜ ನವಲಗುಂದ ಸೇರಿದಂತೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.ಉದ್ಯೋಗ ಮೇಳದಲ್ಲಿ ವಿವಿಧ ಕಂಪನಿಗಳು ಪಾಲ್ಗೂಂಡಿದ್ದವು
