33ನೇ ದಿನಕ್ಕೆ ಕಾಲಿಟ್ಟಿದೆ ಪ್ರಜಾ ಸೌಧ ಪ್ರತಿಭಟನೆ


ತಾಳಿಕೋಟೆ: ತಾಲೂಕಿನ ಅಭಿವೃದ್ಧಿ ಮತ್ತು ಸಾರ್ವಜನಿಕರ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಮಾಣವಾಗಬೇಕಿದ್ದ ಪ್ರಜಾಸೌಧ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದ್ದು, ಅದರ ಸ್ಥಳ ಆಯ್ಕೆ ವಿರುದ್ಧ ತಾಳಿಕೋಟೆ ಪಟ್ಟಣದ ಜನರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 33ನೇ ದಿನಕ್ಕೂ ಮುಂದುವರಿದಿದೆ. ದಿನದಿಂದ ದಿನಕ್ಕೆ ಹೋರಾಟ ಉಗ್ರ ಸ್ವರೂಪ ಪಡೆಯುತ್ತಿದ್ದು, ಜನರ ಆಕ್ರೋಶ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಸ್ಪಷ್ಟವಾಗಿ ವ್ಯಕ್ತವಾಗುತ್ತಿದೆ.


ತಾಲೂಕಿನ ಮೇಲೆಶ್ವರ ಗ್ರಾಮದ ಸಮೀಪ ಪ್ರಜಾಸೌಧ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವು ಪಟ್ಟಣದಿಂದ ದೂರವಿರುವುದರಿಂದ ಜನಸಾಮಾನ್ಯರಿಗೆ ಅನಾನುಕೂಲವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಪ್ರತಿಭಟನಾಕಾರರು, ಪ್ರಜಾಸೌಧವನ್ನು ತಾಳಿಕೋಟೆ ಪಟ್ಟಣದಲ್ಲಿಯೇ ನಿರ್ಮಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಈ ಬೇಡಿಕೆಯನ್ನು ಮುಂದಿಟ್ಟುಕೊಂಡು ಬಸವೇಶ್ವರ ವೃತ್ತದ ಬಳಿ ನಡೆಯುತ್ತಿರುವ ಧರಣಿ ಇದೀಗ ಸಾರ್ವಜನಿಕರ ದೊಡ್ಡ ಹೋರಾಟವಾಗಿ ರೂಪುಗೊಂಡಿದೆ.
ಈ ಹೋರಾಟಕ್ಕೆ ಬೆಂಬಲ ಸೂಚಿಸಲು ಕಾಂಗ್ರೆಸ್ ಯುವ ಮುಖಂಡ ಶಾಂತಗೌಡ ಪಾಟೀಲ (ನಡಹಳ್ಳಿ) ಧರಣಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಐಕ್ಯತೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಸರ್ಕಾರವು ಸಾರ್ವಜನಿಕರಿಗೆ ಅನುಕೂಲವಾಗಲೆಂದು ಪ್ರಜಾಸೌಧ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದೆ. ಆದರೆ ಸ್ಥಳ ಆಯ್ಕೆ ಮಾಡುವ ಸಂದರ್ಭದಲ್ಲಿ ಶಾಸಕರು ಪಟ್ಟಣದ ಹಿರಿಯರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಬೇಕಾಗಿತ್ತು. ಯಾವುದೇ ಚರ್ಚೆ ಇಲ್ಲದೆ ಏಕಪಕ್ಷೀಯವಾಗಿ ಸ್ಥಳ ನಿಗದಿ ಮಾಡಿರುವುದು ಈ ಹೋರಾಟಕ್ಕೆ ಕಾರಣವಾಗಿದೆ,” ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.


ಇನ್ನು ಸಮಯ ಕೈಮೀರಿಲ್ಲ ಎಂದು ಹೇಳಿದ ಅವರು, “ಪಟ್ಟಣದಲ್ಲಿಯೇ ಲಭ್ಯವಿರುವ ಸರ್ಕಾರಿ ಜಾಗವನ್ನು ಬಳಸಿಕೊಂಡು ಪ್ರಜಾಸೌಧ ನಿರ್ಮಾಣ ಮಾಡಬೇಕು. ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಶಾಸಕರು ಮತ್ತು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಜಿಲ್ಲಾಧಿಕಾರಿಗಳು ಸ್ವತಃ ಧರಣಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಹರಿಸುವುದು ಅಗತ್ಯ,” ಎಂದು ಆಗ್ರಹಿಸಿದರು.


ಹೋರಾಟದ ತೀವ್ರತೆ ಹೆಚ್ಚುತ್ತಿದ್ದು, ಕಳೆದ 32 ದಿನಗಳಿಂದ ಅಧಿಕಾರಿಗಳು ಧರಣಿ ಸ್ಥಳಕ್ಕೆ ಭೇಟಿ ನೀಡದೇ ಇರುವುದೇ ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಇದರಿಂದಾಗಿ ಪ್ರತಿಭಟನಾಕಾರರು ಸರ್ಕಾರ ಮತ್ತು ಆಡಳಿತದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಶನಿವಾರ ನಡೆದ ಸತ್ಯಾಗ್ರಹದಲ್ಲಿ ಪಟ್ಟಣದ ಮಡಿವಾಳ ಮಾಚಿದೇವ ಸಮಾಜದ ಹಿರಿಯರು, ಯುವಕರು ಹಾಗೂ ವಿವಿಧ ಸಮುದಾಯದ ಜನರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ಹೋರಾಟಕ್ಕೆ ಗ್ರಾಮ ಮಟ್ಟದಲ್ಲಿಯೂ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಇದು ಕೇವಲ ಒಂದು ಪ್ರದೇಶದ ಸಮಸ್ಯೆಯಾಗಿರದೆ, ಇಡೀ ತಾಲೂಕಿನ ಜನರ ಹಕ್ಕಿನ ಹೋರಾಟವಾಗಿ ರೂಪುಗೊಂಡಿದೆ.
ಧರಣಿ ನಿರತರು ತಮ್ಮ ಆತಂಕವನ್ನು ವ್ಯಕ್ತಪಡಿಸಿ, “ಪ್ರಜಾಸೌಧಕ್ಕೆ ಆಯ್ಕೆ ಮಾಡಿರುವ ಸ್ಥಳವು ನಿರ್ಜನ ಪ್ರದೇಶದಲ್ಲಿದ್ದು, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರ ಸುರಕ್ಷತೆಗೆ ಅಪಾಯಕಾರಿಯಾಗಿದೆ. ಅಲ್ಲದೆ, ಸಾರ್ವಜನಿಕರಿಗೆ ಸುಲಭವಾಗಿ ತಲುಪಲು ಸಾಧ್ಯವಿಲ್ಲ. ಆದ್ದರಿಂದ ಜನರಿಗೆ ಸುಲಭವಾಗುವಂತೆ ಪಟ್ಟಣದೊಳಗಿನ ಸರ್ಕಾರಿ ಜಾಗದಲ್ಲಿಯೇ ಕಟ್ಟಡ ನಿರ್ಮಿಸಬೇಕು,” ಎಂದು ಒತ್ತಾಯಿಸಿದರು.


ಹೋರಾಟಗಾರರು ಎಚ್ಚರಿಕೆ ನೀಡಿ, “ಇದು ಕೇವಲ ಒಂದು ಗ್ರಾಮದ ಹೋರಾಟವಲ್ಲ, ಇಡೀ ತಾಲೂಕಿನ ಹಕ್ಕಿನ ಪ್ರಶ್ನೆ. ನಮ್ಮ ಬೇಡಿಕೆ ಈಡೇರಿಸುವವರೆಗೆ ಹೋರಾಟವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ,” ಎಂದು ಘೋಷಿಸಿದರು.


ಈ ಸಂದರ್ಭದಲ್ಲಿ ಮಡಿವಾಳ ಮಾಚಿದೇವ ಸಮಾಜದ ಹಿರಿಯರಾದ ಬಸವರಾಜ ಮಡಿವಾಳರ, ನಾಗಪ್ಪ ಮಡಿವಾಳರ, ಸುಭಾಸ್ ಅಗಸರ, ಶರಣಪ್ಪ ಅಗಸರ, ಸಂತೋಷ ಮಡಿವಾಳರ, ದೇವೇಂದ್ರ ಮಡಿವಾಳರ, ನಿಂಗಪ್ಪ ಮಡಿವಾಳರ ಸೇರಿದಂತೆ ಅನೇಕರು ಭಾಗವಹಿಸಿದ್ದರು. ಹೋರಾಟ ಸಮಿತಿಯ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ, ಮುತ್ತಪ್ಪ ಚಮಲಾಪುರ, ಕಾಶೀನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ದತ್ತು ಹೆಬಸೂರ, ಪರಶುರಾಮ ತಂಗಡಗಿ, ವಿಜಯಸಿಂಗ್ ಹಜೇರಿ, ಮಹೇಶ ಛಲವಾದಿ, ಪ್ರಕಾಶ್ ಹಜೇರಿ, ಮುದಕಪ್ಪ ಬಡಿಗೇರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!