ಗದಗ: ಸುಟ್ಟ ಸ್ಥಿತಿಯಲ್ಲಿ ಯುವಕನೊರ್ವನ ಶವ ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಪತ್ತೆಯಾಗಿದೆ. ಮೃತ ಯುವಕನನ್ನು ಚಂದ್ರು ಕುರಿ (27) ಎಂದು ಗುರುತಿಸಲಾಗಿದ್ದು, ಮಂಗಳವಾರ ರಾತ್ರಿ ಮನೆಯಿಂದ ಹೊರ ಹೋದ ಚಂದ್ರು ಮೃತದೇಹ ಸೇತುವೆಯೊಂದರ ಕೆಳಭಾಗ ಕಂಡುಬಂದಿದೆ.

ಕೊಲೆ ಅನುಮಾನ ವ್ಯಕ್ತವಾಗಿದ್ದು, ಮಗನನ್ನು ಸಾಯಿಸಿ ಬಳಿಕ ದೇಹವನ್ನು ಸುಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮನೆಯ ಹೆಣ್ಣು ಮಕ್ಕಳನ್ನು ನೋಡ್ತಾನೆ ಎಂದು ಆರೋಪಿಸಿ ಎದುರಿನ ಮನೆ ಕುಟುಂಬಸ್ಥರು ಹಲವು ಬಾರಿ ಜಗಳ ತೆಗೆದಿದ್ದರು. ಮೈ ಮೇಲೆ ಬೈಕ್ ಹತ್ತಿಸಲೂ ಬಂದಿದ್ದರು. ಹೀಗಾಗಿ ಅವರೇ ಕೃತ್ಯ ಎಸಗಿರಬಹುದೆಂದು ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ.

ತಂದೆಯ ಪ್ರತಿಜ್ಞೆಇನ್ನು ಮಗ ಚಂದ್ರುವಿನ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ತಂದೆ ಬಸವರಾಜ್ ಪ್ರತಿಜ್ಞೆಯೊಂದನ್ನು ಮಾಡಿದ್ದಾರೆ. ಮಾಧ್ಯಮ ಜೊತೆ ಮಾತನಾಡಿರುವ ಅವರು, ತನಗೆ ಮೂರು ಎಕರೆ ಹೊಲ ಇದೆ. ಅದನ್ನು ಕಳೆದುಕೊಂಡರೂ ಚಿಂತೆ ಇಲ್ಲ. ಸಾಲ ಮಾಡಿಯಾದರೂ ಹಣ ತರ್ತೀನಿ. ಆದರೆ ಮಗನನ್ನು ಕೊಂದ ಆರೋಪಿಗಳನ್ನು ಮಾತ್ರ ಯಾವುದೇ ಕಾರಣಕ್ಕೂ ಸುಮ್ಮೆನ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ ಚಂದ್ರು ಬಹಳ ಒಳ್ಳೆಯ ಹುಡುಗ, ಯಾರ ಜೊತೆ ತಂಟೆ-ತಕರಾರು ಮಾಡಿದವನಲ್ಲ. ತಾನಾಯ್ತು, ತನ್ನ ಕೆಲಸವಾಯ್ತು ಎಂಬಂತಿದ್ದ. ನಿತ್ಯ ಕೆಲಸಕ್ಕೆ ಹೋಗುವಾಗ 100 ರೂಪಾಯಿ ನನ್ನ ಕೇಳಿ ಪಡೆಯುತ್ತಿದ್ದ ಎಂದು ಭಾವುಕರಾಗಿದ್ದಾರೆ.ಹಿರಿಯ ಪುತ್ರನಾಗಿದ್ದ ಚಂದ್ರು ಸೇರಿ ಎರಡನೇ ಮಗ ಸುರೇಶ್ ಮದುವೆಗೆ ತಂದೆ ಬಸವರಾಜ್ ತಯಾರಿ ನಡೆಸಿದ್ದರು. ಬೀರಲಿಂಗೇಶ್ವರ ಜಾತ್ರೆಯ ಬಳಿಕ ಹುಡುಗಿ ನೋಡಬೇಕೆಂದು ನಿರ್ಧರಿಸಿದ್ದರು. ಆದರೆ ಅಷ್ಟರೊಳಗಾಗಲೇ ಮಗನ ಪ್ರಾಣಪಕ್ಷಿ ಹಾರಿಹೋಗಿದೆ. ಮಗನ ಮದುವೆ ಕಣ್ತುಂಬಿಕೊಳ್ಳಬೇಕೆಂದಿದ್ದ ಪೋಷಕರು, ಕರುಳ ಕುಡಿಯ ಅಂತ್ಯ ಸಂಸ್ಕಾರವನ್ನು ತಾವೇ ಮುಂದೆ ನಿಂತು ನೆರವೇರಿಸಬೇಕಾದ ಸ್ಥಿತಿ ಬಂದಿದೆ. ಹೀಗಾಗಿ ಮಗನ ಸಾವಿಗೆ ಸೇಡು ತೀರಿಸಿಕೊಳ್ಳೋದಾಗಿ ಬಸವರಾಜ್ ಅವರು ಹೇಳಿದ್ದಾರೆ.

ಅಷ್ಟಕ್ಕೂ ಚಂದ್ರುಗೆ ಆಗಿದ್ದೇನು? ಕುಟುಂಬಸ್ಥರು ಹೇಳುವಂತೆ ಇದು ನಿಜಕ್ಕೂ ಕೊಲೆಯಾ? ಅಥವಾ ಘಟನೆ ಹಿಂದೆ ಬೇರೆ ಏನಾದರೂ ಕಾರಣಗಳಿವೆಯಾ? ಎಂಬುದು ಪೊಲೀಸರ ತನಿಖೆ ಬಳಿಕವಷ್ಟೇ ಬಯಲಾಗಬೇಕಿದೆ.
