ಗಜೇಂದ್ರಗಡ: ಗಜೇಂದ್ರಗಡ ನಗರ ಪುರಸಭೆಯ ವತಿಯಿಂದ ನೂತನವಾಗಿ ನಿರ್ಮಿಸಲಾದ ಪೌರಕಾರ್ಮಿಕರ ವಿಶ್ರಾಂತಿ ಗೃಹ ಹಾಗೂ ಹೊಸ ವಾಹನಗಳ ಉದ್ಘಾಟನಾ ಕಾರ್ಯಕ್ರಮವನ್ನು ಇಂದು ಶಾಸಕ ಜಿ ಎಸ್ ಪಾಟೀಲ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಪೌರಕಾರ್ಮಿಕರು ನಗರ ಸ್ವಚ್ಛತೆ ಹಾಗೂ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಅವರ ಸೌಲಭ್ಯಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ವಿಶ್ರಾಂತಿ ಗೃಹ ನಿರ್ಮಾಣ ಮಾಡಲಾಗಿದೆ ಹಾಗೂ ವಿಶ್ರಾಂತಿ ಗೃಹದಲ್ಲಿ ಕುಡಿಯುವ ನೀರು, ವಿಶ್ರಾಂತಿ ಕೊಠಡಿ, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಇದರಿಂದ ಪೌರಕಾರ್ಮಿಕರಿಗೆ ಕೆಲಸದ ಬಿಡುವಿನ ಸಮಯದಲ್ಲಿ ವಿಶ್ರಾಂತಿ ಪಡೆಯಲು ಅನುಕೂಲವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ನಗರ ಸ್ವಚ್ಛತಾ ಕಾರ್ಯಗಳನ್ನು ಮತ್ತಷ್ಟು ಪರಿಣಾಮಕಾರಿಯಾಗಿ ನಡೆಸಲು ಪುರಸಭೆಗೆ ಸೇರ್ಪಡೆಯಾದ ಹೊಸ ವಾಹನಗಳನ್ನು ಕೂಡ ಉದ್ಘಾಟಿಸಿದರು ಈ ವಾಹನಗಳು ಕಸ ಸಂಗ್ರಹಣೆ ಹಾಗೂ ಸಾಗಣೆ ಕಾರ್ಯವನ್ನು ಸುಗಮಗೊಳಿಸಲಿವೆ ಎಂದು ಶಾಸಕರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸುಭಾಸ್ ಮ್ಯಾಗೇರಿ,ಶಿವರಾಜ ಘೋರ್ಪಡೆ, ಸಿದ್ದಣ್ಣ ಬಂಡಿ,ಮುರ್ತುಜಾ ಡಾಲಾಯತ್, ಮುದಿಯಪ್ಪ ಮುಧೋಳ, ರಾಜು ಸಾಂಗ್ಲಿಕರ್, ಆರ್ ಎಮ್ ರಾಯಬಾಗಿ,ಮಂಜುಳಾ ರೇವಡಿ,ಅಧಿಕಾರಿಗಳು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.
