.
ಒಬ್ಬ ವ್ಯಕ್ತಿಯು ಜೀವನದಲ್ಲಿ ಸಾಧಿಸಿದ ಗುರಿಗಳನ್ನು ಅನುಸರಿಸಿ ಅವರನ್ನು ಸಾಧಕರು,ಶ್ರೇಷ್ಠರು ಎಂದು ಗುರುತಿಸಲಾಗುತ್ತದೆ. ಕೆಲವರ ಸಾಧನೆಗಳು ಅಜರಾಮರ ವಾಗಿದ್ದರೆ, ಇನ್ನು ಕೆಲವು ಸಾಧಿಸಬಹುದಾಗಿರುತ್ತವೆ. ಕೆಲವು ಸಾಧನೆಗಳು ಪ್ರಥಮ ಸಾಧನೆಗಳಾಗಿರುತ್ತವೆ ಅಂದರೆ ಇಲ್ಲಿಯವರೆಗೆ ಸಾಧಿಸಲಾಗದೆ ಇರುವ ಮೈಲುಗಲ್ಲುಗಳು ಆಗಿರುತ್ತವೆ. ನಂತರ ಅವುಗಳನ್ನು ಸುಧಾರಿಸುವ ಪ್ರಯತ್ನಗಳು ನಡೆದಿರುತ್ತವೆ. ಶಿಕ್ಷಣ, ಕ್ರೀಡೆ, ಸಂಗೀತ, ಕೌಶಲದಲ್ಲಿ ಸಾಧನೆ, ಪ್ರಶಸ್ತಿಗಳನ್ನು ಗೆಲ್ಲುವುದು,ಹೊಸ ಯೋಜನೆಗಳನ್ನು ಪೂರ್ಣ ಗೊಳಿಸುವುದು. ಸಮಾಜಕ್ಕೆ ನೀಡಿದ ಕೊಡುಗೆಗಳು, ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವುದು, ಸಮಾಜಕ್ಕೆ ಸಹಾಯ ಮಾಡುವುದು, ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡುವುದು. ಇನ್ನು ಅನೇಕ ಅಂಶಗಳು ಸಾಧಕರಲ್ಲಿರುತ್ತವೆ. ಸಾಧನೆಗಳು ಒಬ್ಬ ವ್ಯಕ್ತಿಯ ಶ್ರಮ, ಸಮರ್ಪಣೆ, ಮತ್ತು ಸಾಮರ್ಥ್ಯಗಳನ್ನು ಪ್ರತಿಬಿಂಬಿಸುತ್ತವೆ.

ಯಾರು ಶ್ರೇಷ್ಠರು?:ಯಾವುದೇ ಒಂದು ಕ್ಷೇತ್ರದಲ್ಲಿ ಹಲವು ಜನ ಸಾಧಕರಿರುತ್ತಾರೆ. ಈ ಸಾಧಕರುಗಳಲ್ಲಿ ಶ್ರೇಷ್ಠರು ಎಂದು ಕಂಡುಬರುವ ಕೆಲವು ಸಾಧಕರಲ್ಲಿ ಯಾರು ಶ್ರೇಷ್ಠ? ಎಂದು ಹೊಲಿಕೆಗೆ ಪ್ರಯತ್ನಿಸಲಾಗುತ್ತದೆ. ಸಮಕಾಲೀನ ಸಾಧಕರಾಗಿದ್ದರೆ ಅದು ಬೇರೆ. ವೈವಿಧ್ಯಮಯ ಕಾಲಘಟ್ಟದಲ್ಲಿದ್ದರೆ, ಹೋಲಿಕೆ ಸಮಂಜಸ ಅನ್ನಿಸುವುದಿಲ್ಲ. ಕಾಲ, ಪರಿಸ್ಥಿತಿ, ತಂತ್ರಜ್ಞಾನ, ಅವಕಾಶಗಳು, ಸ್ಪರ್ಧೆಗಳು, ಸೌಲಭ್ಯಗಳು, ಭಿನ್ನ ಭಿನ್ನವಾಗಿರುವದರಿಂದ ಹೋಲಿಕೆ ಸಮಂಜಸ ಅನ್ನಿಸುವದಿಲ್ಲ. ಆದರೂ ಹೋಲಿಕೆ ನಿಂತಿಲ್ಲ. ಇಂತಹ ಹೋಲಿಕೆ ಕಂಡುಬರುತ್ತಿರುವುದು, ಭಾರತದ ಜನಪ್ರಿಯ ಕ್ರೀಡೆಯಾದ ಕ್ರಿಕೇಟ್ ನಲ್ಲಿ. ಭಾರತದ ಶ್ರೇಷ್ಠ ಕ್ರಿಕೆಟರಗಳ ಸಾಲಿನಲ್ಲಿ ಯಾರು ಶ್ರೇಷ್ಠರು ಎಂಬ ಪ್ರಶ್ನೆ ಇತ್ತೀಚೆಗೆ ಪ್ರಚಲಿತವಾಗಿದೆ. ಶ್ರೇಷ್ಠತೆಯನ್ನು ಅವರ ಸಾಧನೆಗಳಿಂದ ಗುರುತಿಸಲಾಗುತ್ತದೆ. ಕ್ರೀಡೆಯಲ್ಲಿ ಸಾಧನೆಗಳು ಎಂದರೆ ಗೆಲ್ಲುವುದು, ದಾಖಲೆಗಳನ್ನು ಸೃಷ್ಟಿಸುವುದು, ಹೋರಾಟ ಪ್ರವೃತ್ತಿ, ಕ್ರೀಡಾ ಸ್ಪೂರ್ತಿ, ದೈಹಿಕ ಕ್ಷಮತೆ, ಪ್ರಶಸ್ತಿಗಳನ್ನು ಗೆಲ್ಲುವುದು. ಇವುಗಳಿಂದ ನಿರ್ಧಾರವಾಗುತ್ತದೆ. ಭಾರತದ ಇಬ್ಬರು ಕ್ರಿಕೇಟ ಆಟಗಾರರಾದ ಸಚಿನ್ ತೆಂಡೂಲ್ಕರ ಮತ್ತು ವಿರಾಟ್ ಕೋಹ್ಲಿ ಸಾಧನೆಗಳನ್ನು ಹೋಲಿಕೆ ಮಾಡಿ ಶ್ರೇಷ್ಠತೆ ಕಂಡುಹಿಡಿಯಲು ಪ್ರಯತ್ನ ನಡೆದಿದೆ. ಇವರಲ್ಲಿ ಶ್ರೇಷ್ಠತೆ ಗುರುತಿಸುವುದು ಕಷ್ಟಸಾಧ್ಯ ಮತ್ತು ಸಾಧು ಕೂಡಾ ಅಲ್ಲ.
ಸಚಿನ್ ಸಾಧನೆ:ಸಚಿನ್ ತೆಂಡೂಲ್ಕರ್ ಅವರ ಸಾಧನೆಗಳು ಕ್ರಿಕೆಟ್ ಜಗತ್ತಿನಲ್ಲಿ ಅವರನ್ನು ಅತ್ಯುತ್ತಮ ಆಟಗಾರರಲ್ಲಿ ಒಬ್ಬರನ್ನಾಗಿ ಮಾಡಿದೆ. ಅವರ ಸಾಧನೆಗಳು ಯುವ ಆಟಗಾರರಿಗೆ ಸ್ಫೂರ್ತಿಯಾಗಿದೆ.ಸಚಿನ್ ತೆಂಡೂಲ್ಕರ್ ಅವರ ಕ್ರಿಕೆಟ್ ವೃತ್ತಿಜೀವನವು 24 ವರ್ಷಗಳ ಕಾಲ ನಡೆಯಿತು, ಮತ್ತು ದಾಖಲೆಗಳನ್ನು ಸೃಷ್ಟಿಸಿದರು. ಅವರು ಕ್ರಿಕೆಟ್ ಜಗತ್ತಿನಲ್ಲಿ ಕೆಲವು ದಾಖಲೆಗಳು ಮುರಿಯುವ ಸಾಧ್ಯತೆ ಕಡಿಮೆ. ಸಚಿನ್ ತೆಂಡೂಲ್ಕರ್ ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕಗಳನ್ನು ಗಳಿಸಿದ ವಿಶ್ವದ ಏಕೈಕ ಆಟಗಾರ. ಟೆಸ್ಟ್ ಕ್ರಿಕೆಟ್ನಲ್ಲಿ 15,921 ರನ್ಗಳು ಮತ್ತು ಏಕದಿನ ಕ್ರಿಕೆಟ್ನಲ್ಲಿ 18,426 ರನ್ಗಳನ್ನು ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ 200 ಟೆಸ್ಟ್ ಪಂದ್ಯಗಳು ಮತ್ತು 463 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಸಚಿನ್ ತೆಂಡೂಲ್ಕರ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿದೆ. ಸಚಿನ್ ತೆಂಡೂಲ್ಕರ್ ಟೆಸ್ಟ್ ಕ್ರಿಕೆಟ್ನಲ್ಲಿ 51 ಶತಕಗಳನ್ನು ಗಳಿಸಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 49 ಶತಕಗಳನ್ನು ಗಳಿಸಿದ್ದಾರೆ.164 ಅರ್ಧಶತಕಗಳನ್ನು ಗಳಿಸಿದ್ದಾರೆ. ಸಚಿನ್ ತೆಂಡೂಲ್ಕರ್ 2011ರ ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತೀಯ ತಂಡದ ಭಾಗವಾಗಿದ್ದರು. ಸಚಿನ್ ತೆಂಡೂಲ್ಕರ್ ಅವರಿಗೆ 1997-98ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಯಿತು. 2008ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಯಿತು.2014ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು. ಇವರ ಸಾಧನೆಗಳು ಕ್ರಿಕೆಟ್ ಜಗತ್ತಿನ ಅತ್ಯುತ್ತಮ ಆಟಗಾರರಲ್ಲಿ ಒಬ್ಬರನ್ನಾಗಿ ಮಾಡಿದೆ. ಅವರ ಸಾಧನೆಗಳು ಯುವ ಆಟಗಾರರಿಗೆ ಸ್ಫೂರ್ತಿಯಾಗಿದೆ.

ಕ್ರಿಕೇಟ ದೇವರು:ಸಚಿನ್ ತೆಂಡೂಲ್ಕರ್ ಅವರ ಶ್ರೇಷ್ಠತೆಯು, ಸಾಧನೆಗಳು ಮತ್ತು ಆಟದ ಶೈಲಿಯಿಂದ ಬರುತ್ತದೆ. ಅವರು ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದಾರೆ. ತೆಂಡೂಲ್ಕರ್ ಅವರ ಬ್ಯಾಟಿಂಗ್ ತಂತ್ರವು ಅತ್ಯಂತ ಉತ್ತಮವಾಗಿತ್ತು. ಅವರು ವೇಗದ ಬೌಲರ್ಗಳು ಮತ್ತು ಸ್ಪಿನ್ನರ್ಗಳನ್ನು ಸಮಾನವಾಗಿ ಎದುರಿಸಬಲ್ಲರು. ತಮ್ಮ ವೃತ್ತಿಜೀವನದಲ್ಲಿ ಶ್ರೇಷ್ಠ ಬೌಲರ್ಗಳನ್ನು ಎದುರಿಸಿದ್ದಾರೆ. ರಿವರ್ಸ್ ಸ್ವಿಂಗ್ ಗೆ ಹೆಸರುವಾಸಿಯಾದ ಬೌಲರಗಳನ್ನು ಹೊಂದಿದ್ದ ಕಾಲವದು. ಅತಿ ಹೆಚ್ಚು ವಿಕೇಟ ಪಡೆದ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಶೇನ್ ವಾರ್ನ್, ಅವರು ತೆಂಡೂಲ್ಕರ್ ಅವರನ್ನು ಹಲವಾರು ಬಾರಿ ಎದುರಿಸಿದ್ದಾರೆ.ಅತಿ ಹೆಚ್ಚು ವಿಕೆಟ ಪಡೆದ ಎರಡನೆ ಬೌಲರ ಮುತ್ತಯ್ಯ ಮುರಳೀಧರನ್ , ಗ್ಲೆನ್ ಮೆಕ್ಗ್ರಾಥ್, ವಾಸಿಮ್ ಅಕ್ರಮ್, ಕೋರ್ಟ್ನಿ ವಾಲ್ಶ್, ಕೊಟ್ನಿ ಎಂಬ್ರೋಸ್, ಮ್ಯಾಕ್ ಡರ್ಮಟ್, ಚಮಿಂಡಾ ವಾಸ್, ಶೋಯಬ್ ಅಕ್ತರ, ವಕಾರ ಯೂನಸ್ , ಮುಂತಾದ ಬೌಲರ್ಗಳು ತೆಂಡೂಲ್ಕರ್ ಅವರನ್ನು ಎದುರಿಸಿದಾಗ ಅವರಿಗೆ ಸವಾಲುಗಳನ್ನು ಒಡ್ಡಿದರು, ಆದರೆ ತೆಂಡೂಲ್ಕರ್ ಅವರು ತಮ್ಮ ಅಸಾಧಾರಣ ಬ್ಯಾಟಿಂಗ್ ಕೌಶಲ್ಯದಿಂದ ಅವರನ್ನು ಎದುರಿಸಿದರು. ಈ ಸಾಧನೆಗಳಿಂದ ಕ್ರಿಕೇಟ ದೇವರು ಎನ್ನಿಸಿಕೊಂಡರು. ಇವರ ಹಾಗೆ ವಿರಾಟ್ ಕೊಹ್ಲಿ ಸಾಧನೆಗಳೂ ಕಡಿಮೆ ಏನೂ ಅಲ್ಲ.
ವಿರಾಟ್ ಕೊಹ್ಲಿ:ವಿರಾಟ್ ಕೊಹ್ಲಿ ಅವರ ಸಾಧನೆಗಳು ಅವರ ಸ್ಥಿರತೆ, ಶಿಸ್ತು ಮತ್ತು ಅಸಾಧಾರಣ ಪ್ರತಿಭೆಯನ್ನು ತೋರಿಸುತ್ತವೆ. ಅವರು ಕ್ರಿಕೆಟ್ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇವರ ಶ್ರೇಷ್ಠತೆಯು ಅವರ ಕ್ರಿಕೆಟ್ ಕೌಶಲ್ಯ, ಸ್ಥಿರತೆ, ಮತ್ತು ನಾಯಕತ್ವದಿಂದ ಬರುತ್ತದೆ. ಅವರು ಕ್ರಿಕೆಟ್ ಜಗತ್ತಿನಲ್ಲಿ ಅತ್ಯುತ್ತಮ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ 27,000 ರನ್ಗಳನ್ನು ಗಳಿಸಿದ ಅತಿ ವೇಗದ ಆಟಗಾರ. ಕೊಹ್ಲಿ ಕೇವಲ 594 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ 10,000 ರನ್ಗಳನ್ನು ಗಳಿಸಿದ ಅತಿ ವೇಗದ ಆಟಗಾರ. ಕೇವಲ 205 ಇನ್ನಿಂಗ್ಸ್ಗಳಲ್ಲಿ ಈ ಮೈಲಿಗಲ್ಲನ್ನು ತಲುಪಿದ್ದಾರೆ. ಕೊಹ್ಲಿ 51 ಏಕದಿನ ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಏಳು ದ್ವಿಶತಕಗಳನ್ನು ಗಳಿಸಿದ ಏಕೈಕ ಭಾರತೀಯ ಆಟಗಾರ. ಐಸಿಸಿ ಏಕದಿನ ಟೀಮ್ (2016–2019) ನಾಯಕರಾಗಿದ್ದರು. ಕೊಹ್ಲಿ ಐಸಿಸಿ ಕ್ರಿಕೆಟಿಗ ಆಫ್ ದಿ ಮಂತ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಕೊಹ್ಲಿ ಅವರ ಬ್ಯಾಟಿಂಗ್ ತಂತ್ರವು ಅತ್ಯಂತ ಉತ್ತಮವಾಗಿದೆ. ಅವರು ವೇಗದ ಬೌಲರ್ಗಳು ಮತ್ತು ಸ್ಪಿನ್ನರ್ಗಳನ್ನು ಸಮಾನವಾಗಿ ಎದುರಿಸಬಲ್ಲರು. ತಮ್ಮ ವೃತ್ತಿಜೀವನದ ಉದ್ದಕ್ಕೂ ಸ್ಥಿರವಾದ ಪ್ರದರ್ಶನವನ್ನು ನೀಡಿದ್ದಾರೆ. ಕೊಹ್ಲಿ, ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅವರ ನಾಯಕತ್ವದಲ್ಲಿ, ಭಾರತ ತಂಡವು ಹಲವಾರು ಯಶಸ್ಸುಗಳನ್ನು ಸಾಧಿಸಿದೆ. ಕೊಹ್ಲಿ, ತಮ್ಮ ಫಿಟ್ನೆಸ್ ಮತ್ತು ಶಿಸ್ತಿಗೆ ಹೆಸರುವಾಸಿಯಾಗಿದ್ದಾರೆ. ಅವರು ತಮ್ಮ ಆಹಾರ ಮತ್ತು ವ್ಯಾಯಾಮದ ಬಗ್ಗೆ ಬಹಳ ಜಾಗರೂಕರಾಗಿದ್ದಾರೆ. ವಿರಾಟ್ ಕೊಹ್ಲಿ ಅವರ ಶ್ರೇಷ್ಠತೆಯು ಅವರ ಸಾಧನೆಗಳು, ಅವರ ಆಟದ ಶೈಲಿ, ಮತ್ತು ಅವರ ಕ್ರಿಕೇಟ್ಗೆ ನೀಡಿದ ಕೊಡುಗೆಗಳಿಂದ ತಿಳಿದು ಬರುತ್ತದೆ. ಅವರು ಕ್ರಿಕೆಟ್ ಜಗತ್ತಿನಲ್ಲಿ ಒಂದು ದಂತಕಥೆಯಾಗಿದ್ದಾರೆ.ಕಿಂಗ್ ಕೊಹ್ಲಿ:ವಿರಾಟ್ ಕೊಹ್ಲಿ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಅನೇಕ ಸವಾಲಿನ ಬೌಲರ್ಗಳನ್ನು ಎದುರಿಸಿದ್ದಾರೆ. ಅವರು ಎದುರಿಸಿದ ಅತ್ಯಂತ ಕಠಿಣ ಬೌಲರ್ಗಳಲ್ಲಿ ಶ್ರೀಲಂಕಾದ ಮಾಜಿ ವೇಗಿ ಲಸಿತ್ ಮಾಲಿಂಗ ಅವರ ಬೌಲಿಂಗ್ನಲ್ಲಿ ಕೊಹ್ಲಿ 218 ಎಸೆತಗಳಲ್ಲಿ 112.5 ಸರಾಸರಿ ಮತ್ತು 103.2 ಸ್ಟ್ರೈಕ್ ರೇಟ್ನೊಂದಿಗೆ 225 ರನ್ ಗಳಿಸಿದರು, ಆದರೆ ಅವರ ಬೌಲಿಂಗ್ ಎದುರಿಸುವುದು ಕಷ್ಟಕರವಾಗಿತ್ತು. ಇಂಗ್ಲೆಂಡ್ನ ವೇಗಿ ಜೇಮ್ಸ್ ಆಂಡರ್ಸನ್, ವೆಸ್ಟ್ ಇಂಡೀಸ್ನ ಮಾಜಿ ನಿಗೂಢ ಸ್ಪಿನ್ನರ್ ಸುನಿಲ್ ನರೈನ್’, ಇಂಗ್ಲೆಂಡ್ನ ಲೆಗ್-ಸ್ಪಿನ್ನರ್ ಆದಿಲ್ ರಶೀದ್, ವಿಷಲ್ ಸ್ಟಾರ್ಕ್, ಫ್ಯಾಟ್ ಕಮಿನ್ಸ್, ಮುಂತಾದ ವಿಶ್ವ ಶ್ರೇಷ್ಠ ಬೌಲರಗಳನ್ನು ಎದುರಿಸಿ ಸಾಧನೆ ಮಾಡಿದ್ದು ಕಡಿಮೆ ಏನಲ್ಲ. ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ಕೌಶಲ್ಯವು ಅನೇಕ ಬೌಲರ್ಗಳಿಗೆ ಸವಾಲಾಗಿತ್ತು, ಆದರೆ ಈ ಬೌಲರ್ಗಳು ಅವರನ್ನು ಎದುರಿಸಲು ಸವಾಲಾಗಿತ್ತು. ಆದ್ದರಿಂದಲೇ ಇವರನ್ನು ಕಿಂಗ್ ಕೊಹ್ಲಿ ಎನ್ನುವರು. ಸಚಿನ್ ಮತ್ತು ಕೊಹ್ಲಿ ನಡುವೆ ಸಾಮ್ಯತೆಗಳು ಮತ್ತು ವೈಶಮ್ಯಗಳೂ ಇವೆ.
ಸಾಮ್ಯತೆಗಳು:ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಹುಟ್ಟು ಹೋರಾಟಗಾರರು, ಕ್ರಿಕೇಟ್ ಗಾಗಿ ಸಮರ್ಪಿಸಿಕೊಂಡರು. ಏಕದಿನ ವಿಶ್ವಕಪ್ ಪಂದ್ಯಾವಳಿ ನಡೆಯುವಾಗ ಸಚಿನ್ ತಂದೆ ನಿಧನರಾದಾಗ, ಅಂತ್ಯಕ್ರಿಯೆ ಮುಗಿಸಿ ತಕ್ಷಣವೆ ವಿಶ್ವ ಕಪ್ ಆಡಲು ತೆರಳಿದವರು. ಅದೇ ರೀತಿ ವಿರಾಟ ಕರ್ನಾಟಕದ ವಿರುದ್ಧ ದೇಹಲಿಯಲ್ಲಿ ರಣಜಿ ಪಂದ್ಯ ನಡೆಯುವಾಗ ತಂಡ ಸಂಕಷ್ಟದಲ್ಲಿತ್ತು. ಆ ದಿನ ಔಟಾಗದೆ ಇರುವಾಗ ರಾತ್ರಿ ಅವರ ತಂದೆ ನಿಧನದ ಸುದ್ದಿ ತಿಳಿಯುತ್ತಿದೆ. ರಾತ್ರಿ ತಂದೆಯ ಪಾರ್ಥಿವ ಶರಿರದ ಬಿಳಿ ಇದ್ದು, ನಿದ್ದೆ ಇಲ್ಲದೆ ಇದ್ದರೂ, ತಂದೆ ಶರೀರ ಮನೆಯಲ್ಲಿದ್ದರೂ ದೇಹಲಿ ತಂಡದ ಪರ ಆಡಿ ತಂಡವನ್ನು ಪಾರು ಮಾಡಿದರು. ಇಬ್ಬರೂ ಭಾರತೀಯ ಕ್ರಿಕೆಟ್ನ ಶ್ರೇಷ್ಠ ಆಟಗಾರರು. ಅಸಾಧಾರಣ ಬ್ಯಾಟಿಂಗ್ ಕೌಶಲ್ಯವನ್ನು ಹೊಂದಿದ್ದಾರೆ. ಇವರು ವೇಗದ ಬೌಲರ್ಗಳು ಮತ್ತು ಸ್ಪಿನ್ನರ್ಗಳನ್ನು ಸಮಾನವಾಗಿ ಎದುರಿಸಬಲ್ಲರು. ತಮ್ಮ ವೃತ್ತಿಜೀವನದ ಉದ್ದಕ್ಕೂ ಸ್ಥಿರವಾದ ಪ್ರದರ್ಶನವನ್ನು ನೀಡಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ಗಳನ್ನು ಗಳಿಸಿದ್ದಾರೆ. ವೈವಿಧ್ಯಮಯ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಅವರ ನಾಯಕತ್ವದಲ್ಲಿ, ಭಾರತ ತಂಡವು ಯಶಸ್ಸುಗಳನ್ನು ಸಾಧಿಸಿದೆ. ತಮ್ಮ ಫಿಟ್ನೆಸ್ ಮತ್ತು ಶಿಸ್ತಿಗೆ ಹೆಸರುವಾಸಿಯಾಗಿದ್ದಾರೆ. ತಮ್ಮ ಆಹಾರ ಮತ್ತು ವ್ಯಾಯಾಮದ ಬಗ್ಗೆ ಬಹಳ ಜಾಗರೂಕರಾಗಿದ್ದಾರೆ. ಕ್ರಿಕೆಟ್ಗೆ ತಮ್ಮ ಜೀವನವನ್ನು ಸಮರ್ಪಿಸಿದ್ದಾರೆ. ಕ್ರಿಕೆಟ್ನಲ್ಲಿ ತಮ್ಮ ಸಂಪೂರ್ಣ ಶಕ್ತಿಯನ್ನು ಹಾಕಿದ್ದಾರೆ.
ವೈಷಮ್ಯ:ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ನ ಶ್ರೇಷ್ಠ ಆಟಗಾರರಾಗಿದ್ದರೂ,ನಡುವೆ ಕೆಲವು ವೈಶಮ್ಯಗಳಿವೆ. ಸಚಿನ್ ತೆಂಡೂಲ್ಕರ್ ತಮ್ಮ ಸಾಂಪ್ರದಾಯಿಕ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದರೆ, ವಿರಾಟ್ ಕೊಹ್ಲಿ ತಮ್ಮ ಆಕ್ರಮಣಕಾರಿ ಮತ್ತು ಆಧುನಿಕ ಬ್ಯಾಟಿಂಗ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಸಚಿನ್ ತೆಂಡೂಲ್ಕರ್ ನಾಯಕತ್ವದಲ್ಲಿ ಭಾರತ ತಂಡವು ಮಿಶ್ರ ಫಲಿತಾಂಶಗಳನ್ನು ಕಂಡಿತು, ಆದರೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡವು ಯಶಸ್ಸುಗಳನ್ನು ಸಾಧಿಸಿದೆ. ವಿರಾಟ್ ಕೊಹ್ಲಿ ತಮ್ಮ ಫಿಟ್ನೆಸ್ಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾರೆ, ಸಚಿನ್ ತೆಂಡೂಲ್ಕರ್ ಅವರ ಕಾಲದಲ್ಲಿ ಫಿಟ್ನೆಸ್ಗೆ ಅಷ್ಟು ಪ್ರಾಮುಖ್ಯತೆ ಇರಲಿಲ್ಲ. ಸಚಿನ್ ತೆಂಡೂಲ್ಕರ್ ತಮ್ಮ ಕಾಲದಲ್ಲಿ ತಂತ್ರಜ್ಞಾನದ ಬಳಕೆಯನ್ನು ಕಡಿಮೆ ಮಾಡಿದ್ದರು, ವಿರಾಟ್ ಕೊಹ್ಲಿ ತಂತ್ರಜ್ಞಾನವನ್ನು ತಮ್ಮ ಆಟದಲ್ಲಿ ಅಳವಡಿಸಿಕೊಂಡಿದ್ದಾರೆ. ಸಚಿನ್ ತೆಂಡೂಲ್ಕರ್ ತಮ್ಮ ಶಾಂತ ಮತ್ತು ಸಂಯಮದ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದರೆ, ವಿರಾಟ್ ಕೊಹ್ಲಿ ತಮ್ಮ ಆಕ್ರಮಣಕಾರಿ ಮತ್ತು ಉತ್ಸಾಹಿ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದಾರೆ.
ಸಚಿನ್ ತೆಂಡೂಲ್ಕರ್ ತಮ್ಮ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದರೆ, ವಿರಾಟ್ ಕೊಹ್ಲಿ ತಮ್ಮ ಬ್ಯಾಟಿಂಗ್ ಜೊತೆಗೆ ನಾಯಕತ್ವ ಮತ್ತು ಫೀಲ್ಡಿಂಗ್ಗೆ ಹೆಸರುವಾಸಿಯಾಗಿದ್ದಾರೆ. ಇವರಿಬ್ಬರ ಸಾಮ್ಯಾತೆ ಮತ್ತು ವೈಶಮ್ಯಗಳ ನಡುವೆ ಸಾಧನೆ ಮಾಡಿದವರು ಹಲವರಿದ್ದಾರೆ.ಸಾಧಕರು ಹಲವು:ಸಚಿನ್ ಮತ್ತು ಕೊಹ್ಲಿಇವರಲ್ಲದೆ ಕ್ರಿಕೇಟನಲ್ಲಿ ಸಾಧನೆ ಮಾಡಿದ ಹಲವು ಭಾರತೀಯರಿದ್ದಾರೆ. ಒಂದೆ ಇನ್ನಿಂಗ್ಸ್ ನಲ್ಲಿ ಹತ್ತು ವಿಕೇಟ ಪಡೆದ ಅನೀಲ ಕುಂಬ್ಳೆ, ಟೆಸ್ಟ್ ಕ್ರಿಕೆಟನಲ್ಲಿ 300 ರನ್ ಭಾರಿಸಿದ ಪ್ರಥಮ ಭಾರತೀಯ ವೀರೇಂದ್ರ ಸೇಹವಾಗ, 12 ಎಸೆತಗಳಲ್ಲಿ 50 ರನ್ ಭಾರಿಸಿದ ಯುವರಾಜ ಸಿಂಗ್, ಪ್ರಥಮ ವಿಶ್ವಕಪ್ ವಿಜೆತ ಕಪಿಲ್ ದೇವ್, T20 ವಿಶ್ವಕಪ್ ವಿಜೇತ ಮಹೇಂದ್ರ ಸಿಂಗ್ ಧೋನಿ, ಪ್ರಥಮವಾಗಿ ಹತ್ತುಸಾವಿರ ಟೆಸ್ಟ್ ರನ್ ಬಾರಿಸಿದ ಸುನೀಲ ಗವಾಸ್ಕರ, ಒಂಡೆ ಪಂದ್ಯದಲ್ಲಿ ಮೂರು ದ್ವಿಶತಕ ಭಾರಿಸಿದ ರೋಹಿತ್ ಶರ್ಮ ಇವರುಗಳೆಲ್ಲ ದಾಖಲೆ ಬಾರಿಸಿದ ಭಾರತೀಯರೆ, ಸಚಿನ್ ಮತ್ತು ವಿರಾಟ್ ಹೊಲಿಕೆ ಮಾಡುವಾಗ ಇವರು ಮತ್ತು ಇತರರ ಸಾಧನೆಗಳನ್ನು ಗಮನಿಸಲೇಬೇಕಾಗುತ್ತದೆ.ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಭಾರತೀಯ ಕ್ರಿಕೆಟ್ನ ಶ್ರೇಷ್ಠ ಆಟಗಾರರ ಸಾಲಿನಲ್ಲಿರುವವರು. ಇವರಲ್ಲಿ ಯಾರು ಶ್ರೇಷ್ಠ ಎಂಬುದು ಚರ್ಚಾಸ್ಪದ ವಿಷಯ. ಸಚಿನ್ ತೆಂಡೂಲ್ಕರ್ ಅವರನ್ನು “ಕ್ರಿಕೆಟ್ನ ದೇವರು” ಎಂದು ಕರೆಯಲಾಗುತ್ತದೆ, ವಿರಾಟ್ ಕೊಹ್ಲಿ ಅವರನ್ನು “ಆಧುನಿಕ ಕ್ರಿಕೆಟ್ನ ರಾಜ” ಎಂದು ಕರೆಯಲಾಗುತ್ತದೆ.ಯಾರು ಶ್ರೇಷ್ಠ ಎಂಬುದು ಪ್ರತಿಯೊಬ್ಬ ವ್ಯಕ್ತಿಯ ಅಭಿಪ್ರಾಯದಂತೆ ಬದಲಾಗುತ್ತಿರುತ್ತದೆ ಇದು ಕಾಲ, ಸಮಯ, ಪರಸ್ಥಿತಿ, ಅವಕಾಶ, ನೈಪುಣ್ಯತೆ ಇವುಗಳನ್ನು ಅವಲಂಬಿಸಿ ಬದಲಾಗುತ್ತಿರುತ್ತದೆ.ಸಾಧನೆಗಳು ಶಾಶ್ವತವೇ ಅಲ್ಲ, ಅವು ನೆನಪುಗಳು. ಆ ಸಾಧನೆಗಳನ್ನು ಮುಂದಿನ ಪೀಳಿಗೆಯ ಆಟಗಾರು ಮೀರಬಹುದು. ಸಾಧನೆಗಳು ಆಟಗಾರರಿಗೆ ಮತ್ತು ತಂಡಕ್ಕೆ ಹೆಮ್ಮೆಯನ್ನು ತರುತ್ತವೆ, ಕೆಲವು ಸಾಧನೆಗಳು ನಸಿಸಬಹುದು. ಕ್ರಿಕೇಟ್ನಲ್ಲಿ, ದಾಖಲೆಗಳು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತವೆ. ಅವೆ ಶಾಸ್ವತವಲ್ಲ. ಶ್ರೇಷ್ಠತೆ ಎಂಬುದು ಪೂರ್ಣ ವಿರಾಮವಲ್ಲ. ಹರಿಯುವ ಜಲಧಾರೆ. ಇವರಿಬ್ಬರಲ್ಲಿ ಶ್ರೇಷ್ಠತೆಯನ್ನು ಹೋಲಿಸಬಹುದು. ನಿರ್ಧರಿಸಲಾಗದು.ಅಲ್ಲವೆ?
ವರದಿ:ಬಸವರಾಜ ಪಲ್ಲೇದ ,ಉಪನ್ಯಾಸಕರು, ಅಬ್ಬಿಗೇರಿ,
