ಚುಟುಕು ಸಾಹಿತ್ಯ ಬದುಕಿನ ಅಭಿವ್ಯಕ್ತಿ : ವೀರಯ್ಯ ಸೋಮನಕಟ್ಟಿಮಠ

ವಿಜಯ ಸಿಂಧೂರ ರೋಣ

ಕನ್ನಡ ಭಾಷೆಯಲ್ಲಿ ಚುಟುಕು ಸಾಹಿತ್ಯ ಬೆಳೆಯಬೇಕು.ಹಾಸ್ಯ, ವಿಡಂಬನೆ, ಸಮಸ್ಯೆಗಳ ಅನಾವರಣ ಹಾಗೂ ಬದುಕಿನ ವಿವಿಧ ಮಗ್ಗುಲುಗಳನ್ನು ಚುಟುಕಾಗಿ ಹೇಳುವುದೇ ಚುಟುಕು ಸಾಹಿತ್ಯದ ವೈಶಿಷ್ಟವಾಗಿದೆ ಎಂದು ಗದಗ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ವೀರಯ್ಯ ಸೋಮನಕಟ್ಟಿಮಠ ಹೇಳಿದರು.
ಅವರು ಶನಿವಾರ ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ ಘಟಕ ಆಯೋಜಿಸಿದ್ದ ರೋಣ ತಾಲೂಕು ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು


ಮೂರ್ನಾಲ್ಕು ಸಾಲುಗಳನ್ನು ಕಾವ್ಯಾತ್ಮಕವಾಗಿ ಹೇಳುವ ಗುಟುಕುಗಳ ಸಾಲಿನಲ್ಲಿ ಚುಟುಕಿನ ಅರ್ಥ ಅಡಗಿದೆ. ಜನಪದವನ್ನು ಉಸಿರಾಗಿಸಿಕೊಂಡಿದ್ದ ನಮ್ಮ ಪೂರ್ವಜರು ನಮಗೆ ಅದನ್ನು ಬಿಟ್ಟು ಹೋಗಿದ್ದಾರೆ. ಕಚಗುಳಿ ಇಡುವ, ನಕ್ಕು ನಗಿಸುವ, ಗಂಭೀರ ಚಿಂತನಗೆ ಹಚ್ಚುವ ಶಕ್ತಿ ಚುಟುಕುಗಳಲ್ಲಿ ಅಡಗಿದೆ. ಇದು ಬದುಕಿನ ಅಭಿವ್ಯಕ್ತಿಯೂ ಹೌದು.ಯಾವುದೇ ಪರಿಷತ್‌ಗೆ ನಮ್ಮ ಸಂಸ್ಥೆ ಪರ್ಯಾಯವಲ್ಲ. ಎಲ್ಲರೂ ಸೇರಿ ಕನ್ನಡ ತಾಯಿ ಹಾಗೂ ಸಾಹಿತ್ಯದ ಸೇವೆ ಮಾಡುವುದು ನಮ್ಮೇಲ್ಲರ ಆದ್ಯ ಕರ್ತವ್ಯ ಎಂದರು

ಭಾವಕೇಂದ್ರಿತ ವೈಚಾರಿಕತೆ ಚುಟುಕು ಸಾಹಿತ್ಯದಲ್ಲಿ ಅಡಕವಾಗಿದ್ದು, ಉತ್ತಮ ಚುಟುಕು ರಚಿಸಲು ಮಾಗಿದ ಅನುಭವ ಅಗತ್ಯ. ಒಂದು ಭಾಷೆ ನಿರ್ನಾಮಗೊಂಡಲ್ಲಿ ಒಂದು ಸಂಸ್ಕೃತಿ ನಾಶಗೊಳ್ಳಲು ಸಾಧ್ಯ. ಕೆಲವು ಭಾಗದಲ್ಲಿ ಕನ್ನಡ ಭಾಷೆಯನ್ನು ಕ್ರಮೇಣ ಚಿವುಟಿ ಹಾಕುವ ಹುನ್ನಾರ ಅನ್ಯರ ಕಡೆಯಿಂದ ನಡೆಯುತ್ತಿದ್ದು, ಇದರ ವಿರುದ್ಧ ಹೋರಾಟ ಅನಿವಾರ್ಯ.ಕನ್ನಡ ಭಾಷೆ,ಸಾಹಿತ್ಯ,ಚುಟುಕು ಸಾಹಿತ್ಯ ಗತ ವೈಭವ ಸಾರಲು ಮೇರು ಸಾಹಿತಿಗಳಿಂದ ಇಲ್ಲಿನ ಸಾಹಿತ್ಯ ಉನ್ನತಿಗೇರಲು ಸಾಧ್ಯವಾಗಿದೆ ಎಂದು ಹೇಳಿದರು

ತಾಲೂಕಾ ಅಧ್ಯಕ್ಷೆ ನಿರುಪಮಾ ಹಿರೇಮಠ ಮಾತನಾಡಿ,ಚುಟುಕು ಸಾಹಿತ್ಯ ರಚಿಸುವವರು ಸಮಾಜದ ಅಂಕು ಡೊಂಕುಗಳನ್ನು ಕುಟುಕುವ ರೀತಿಯಲ್ಲಿರಬೇಕು.ಕವನಗಳನ್ನು ರಚಿಸಬಹುದು ಆದರೆ ಚುಟುಕುಗಳನ್ನು ರಚಿಸುವುದು ಬಹಳ ಕಷ್ಟ ಇದಕ್ಕಾಗಿ ಸಾಕಷ್ಟು ಸಾಹಿತ್ಯ ಕೃಷಿಯನ್ನು ಮಾಡಬೇಕಾಗುತ್ತದೆ.ಆ ನಿಟ್ಟಿನಲ್ಲಿ ರೋಣ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ ಘಟಕದಿಂದ ವಿನೂತನ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು,ಈ ನಿಟ್ಟಿನಲ್ಲಿನಲ್ಲಿ ಕವಿಗಳ,ಸಾಹಿತಿಗಳ,ಸಾರ್ವಜನಿಕರ,ಘಟಕದ ಸದಸ್ಯರ ಸಭೆಯನ್ನು ಇದೇ ಬುಧವಾರ ಆಯೋಜಿಸಲಾಗಿದೆ.ಚುಟುಕು ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು

ಈ ಸಮಯದಲ್ಲಿ ಸರಕಾರಿ ನೌಕರರ ತಾಲೂಕಾಧ್ಯಕ್ಷ ಎಸ್.ಜಿ.ದಾನಪ್ಪಗೌಡ್ರ, ಸರಕಾರಿ ಪ್ರಾಥಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ವಾಯ್.ಡಿ.ಗಾಣಿಗೇರ ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!