ವಿಜಯ ಸಿಂಧೂರ, ತಾಳಿಕೋಟೆ:
ತಾಲೂಕಿನ ಮೇಲೆಶ್ವರ ಗ್ರಾಮದ ಸಮೀಪ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳವನ್ನು ವಿರೋಧಿಸಿ ನಡೆಯುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಮತ್ತೊಂದು ರಾಜಕೀಯ ಬಲ ದೊರೆತಿದೆ.
ನಿಕಟಪೂರ್ವ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರಿಗೆ ಬೆಂಬಲ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಪ್ರಜಾಸೌಧ ಎನ್ನುವುದು ಪ್ರಜೆಗಳಿಗೆ ಹತ್ತಿರವಾಗಿರಬೇಕು. ಆದರೆ ನಿರ್ಜನ ಪ್ರದೇಶದಲ್ಲಿ ಕಟ್ಟುವುದು ಸರಿಯೇ?” ಎಂದು ಪ್ರಶ್ನಿಸಿದರು. “ಇದು ಪ್ರಜಾಪ್ರಭುತ್ವದ ದೇಶ; ಇಲ್ಲಿ ಪ್ರಜೆಗಳೇ ಸುಪ್ರೀಂ. ತಮ್ಮದೇ ಪಟ್ಟಣದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಬೇಕು ಎಂದು ಜನರು ಹೋರಾಟ ಮಾಡುತ್ತಿರುವುದು ರಾಜ್ಯದಲ್ಲೇ ಅಪರೂಪ” ಎಂದರು.
ಹೋರಾಟದ ಬಗ್ಗೆ ಯಾವುದೇ ರಾಜಕೀಯ ದುರುದ್ದೇಶ ಇಲ್ಲದೆ ನಡೆಯುತ್ತಿದೆ ಎಂದು ಅವರು ಸ್ಪಷ್ಟಪಡಿಸಿ, “ಈ ಹೋರಾಟದಲ್ಲಿ ಆಡಳಿತ ಪಕ್ಷದವರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ” ಎಂದರು.
ಶಾಸಕರ ನಿರ್ಧಾರವನ್ನು ಪ್ರಶ್ನಿಸಿದ ಅವರು, “ಏಳು ಕಿಲೋಮೀಟರ್ ದೂರದಲ್ಲೇ ಯಾಕೆ ಪ್ರಜಾಸೌಧ ನಿರ್ಮಾಣ? ಇದರ ಹಿಂದೆ ಏನು ಉದ್ದೇಶ?” ಎಂದು ಪ್ರಶ್ನಿಸಿ, “ತಾಳಿಕೋಟಿ ಜನರು ಏಳು ಬಾರಿ ಆಯ್ಕೆ ಮಾಡಿದವರಿಗೆ ಪ್ರತಿಯಾಗಿ ಜನರನ್ನು ದೂರ ನಡೆಯಲು ಬಿಡುವ ನಿರ್ಧಾರವೇ ಇದು?” ಎಂದು ವ್ಯಂಗ್ಯವಾಡಿದರು. ಜೊತೆಗೆ ಆ ಸ್ಥಳದ ಆಯ್ಕೆಯ ಹಿಂದೆ ವೈಯಕ್ತಿಕ ಸ್ವಾರ್ಥದ ಅನುಮಾನವನ್ನೂ ವ್ಯಕ್ತಪಡಿಸಿದರು.

“ನಾನು ಇಷ್ಟು ದಿನ ಹೋರಾಟದ ಸ್ಥಳಕ್ಕೆ ಬಂದಿರಲಿಲ್ಲ. ಶಾಸಕರು ಸಮಸ್ಯೆ ಬಗೆಹರಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ ಇಲ್ಲಿ ನಡೆಯುತ್ತಿರುವುದು ಬೇರೆದೇ ಆಗಿದೆ,” ಎಂದು ಹೇಳಿದರು. “ಇದು ಯಾವುದೇ ಪಕ್ಷದ ಹೋರಾಟವಲ್ಲ; ತಾಳಿಕೋಟಿ ಪಟ್ಟಣದ ಸ್ವಾಭಿಮಾನದ ಹೋರಾಟ” ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ 22ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕ (ಪ್ರವೀಣ್ ಶೆಟ್ಟಿ ಬಣ) ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದರು. ಹೋರಾಟ ಸಮಿತಿ ಅಧ್ಯಕ್ಷ ದಶರಥ್ ಸಿಂಗ್ ಮನಗೂಳಿ ಸೇರಿದಂತೆ ಎಸ್.ಬಿ. ಕಟ್ಟಿಮನಿ, ಮುತ್ತಪ್ಪ ಚಮಲಾಪುರ್, ಮಹೇಬ ಜಬರ್ದಸ್ತಿ, ಕಾಶಿನಾಥ್ ಮುರಾಳ್, ಮುರುಗೆಪ್ಪ ಸರಾಶೆಟ್ಟಿ, ಸಿದ್ದನಗೌಡ ಪಾಟೀಲ, ಅಮಿತ್ ಸಿಂಗ್ ಮನಗೂಳಿ, ವಾಸುದೇವ ಹೇಬಸೂರ, ಮಯೂರ ಪಾಟೀಲ, ಸಿರಾಜ್ ಕುಮಾರ್ ಹಜೇರಿ, ಸುರೇಶ್ ಹಜೇರಿ, ರಾಗು ಮಾನೆ, ಸದ್ದಾಂ ಬೀಳಗಿ ಸೇರಿದಂತೆ ಪಟ್ಟಣದ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.
