ಕೆಎಸ್‌ಎಸ್ ಶಾಲೆ ಬಾದಿಮನಾಳ ವಾರ್ಷಿಕ ಸ್ನೇಹ ಸಮ್ಮೇಳನದ ಸಂಭ್ರಮ.

ವಿಜಯ ಸಿಂಧೂರ, ಹನಮಸಾಗರ

2025-26ನೇ ಶೈಕ್ಷಣಿಕ ಸಾಲಿನ ಅಂಗವಾಗಿ ಕೆಎಸ್‌ಎಸ್ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹೋತ್ಸವವು ಸಂಭ್ರಮ-ಸಡಗರದ ವಾತಾವರಣದಲ್ಲಿ ನೆರವೇರಿತು. ಕಾರ್ಯಕ್ರಮಕ್ಕೆ ಶ್ರೀ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯ ಲಭಿಸಿದ್ದು, ಶಾಲಾ ವಾತಾವರಣ ಧಾರ್ಮಿಕ ಹಾಗೂ ಶೈಕ್ಷಣಿಕ ಮೌಲ್ಯಗಳಿಂದ ಮೆರೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಎಚ್.ಎಂ. ಗೌಡ್ರು ಗುರುಗಳು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ನಂತರ ವಿದ್ಯಾರ್ಥಿಗಳಿಂದ ನಡೆದ ನೃತ್ಯ, ಗೀತೆ ಹಾಗೂ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಪ್ರೇಕ್ಷಕರ ಮನಗೆದ್ದವು. ಮಕ್ಕಳ ಪ್ರತಿಭೆಗೆ ಉಪಸ್ಥಿತರಿದ್ದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಶ್ರೀಗಳು ತಮ್ಮ ಆಶಯ ಭಾಷಣದಲ್ಲಿ, “ಶಿಕ್ಷಣವೇ ವ್ಯಕ್ತಿಯ ಜೀವನವನ್ನು ರೂಪಿಸುವ ಶಕ್ತಿ. ಮೂಢನಂಬಿಕೆಗಳಿಂದ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾಭ್ಯಾಸವೇ ಮೂಲಾಧಾರ. ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು” ಎಂದು ಹೇಳಿದರು.

ಎಚ್.ಎಂ. ಗೌಡ್ರು ಗುರುಗಳು ಮಾತನಾಡಿ, “ನಮ್ಮ ಶಾಲೆಯಲ್ಲಿ ಅನುಭವಸಂಪನ್ನ ಶಿಕ್ಷಕರ ಬಳಗವಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡಲಾಗುತ್ತಿದೆ. ಈ ಶಾಲೆಯ ವಿದ್ಯಾರ್ಥಿಗಳು ವಸತಿ ಶಾಲೆ ಹಾಗೂ ಸೈನಿಕ ಶಾಲೆಗಳ ಪ್ರವೇಶದಲ್ಲಿ ಯಶಸ್ಸು ಸಾಧಿಸುವ ಸಾಮರ್ಥ್ಯ ಹೊಂದಿದ್ದಾರೆ” ಎಂದು ತಿಳಿಸಿದರು.

ಮುತ್ತಣ್ಣ ಯರಗೇರಿ ಅವರು, “ಮಕ್ಕಳ ಬೆಳವಣಿಗೆಯಲ್ಲಿ ಡಿಜಿಟಲ್ ವ್ಯತ್ಯಯಗಳು ಅಡ್ಡಿಯಾಗಬಾರದು. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಯಂತ್ರಿಸುವುದು ಅಗತ್ಯ” ಎಂದು ಅಭಿಪ್ರಾಯಪಟ್ಟರು.

ಮಾಂತೇಶ್ ಗಣವಾರಿ ಅವರು, “ಗ್ರಾಮೀಣ ವಿದ್ಯಾರ್ಥಿಗಳಲ್ಲೂ ಅಪಾರ ಪ್ರತಿಭೆ ಇದೆ. ಸರಿಯಾದ ಮಾರ್ಗದರ್ಶನ ದೊರೆತರೆ ಅವರು ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಲು ಸಮರ್ಥರು. ಈ ದಿಶೆಯಲ್ಲಿ ಕೆಎಸ್‌ಎಸ್ ಎಜುಕೇಶನ್ ಟ್ರಸ್ಟ್ ಶ್ರಮಿಸುತ್ತಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಶೋಕ ವಾಲಿಕಾರ, ರವಿ ಪರಸಾಪುರ, ಕಳಕಪ್ಪ ಕ್ಯಾದಿಗುಂಪಿ, ಮಲ್ಲಪ್ಪ ಬ್ಯಾಳಿ, ಶರಣಪ್ಪ ಇಲ್ಯಾಳ, ಸಿದ್ದಪ್ಪ ಪರಸಾಪುರ್, ಮಹೇಶ್ ಪರಸಾಪುರ, ಆನಂದ್ ಉಪ್ಪಿನ ಸೇರಿದಂತೆ ಅನೇಕ ಗಣ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ಭರಮಪ್ಪ ಪರಸಾಪುರ್ ನೆರವೇರಿಸಿದರು. ಮುಖ್ಯಗುರುಗಳಾದ ಮಹದೇವಪ್ಪ ಮಾನೋಟಗಿ ಪ್ರಾಸಂಗಿಕವಾಗಿ ಮಾತನಾಡಿ ಕೃತಜ್ಞತೆ ಸಲ್ಲಿಸಿದರು.

ವಾರ್ಷಿಕ ಸಮ್ಮೇಳನವು ವಿದ್ಯಾರ್ಥಿಗಳು, ಪಾಲಕರು ಮತ್ತು ಗ್ರಾಮಸ್ಥರ ಸಕ್ರಿಯ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ನೆರವೇರಿತು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!