ಪಟ್ಟಣದಲ್ಲೇ ಪ್ರಜಾಸೌಧ ಕಟ್ಟಲಿ” ಎಂಬ ಗಟ್ಟಿಧ್ವನಿ ; ಸಂಘಟನೆಗಳಿಂದ ಭಾರೀ ಬೆಂಬಲ


ವಿಜಯ ಸಿಂಧೂರ, ತಾಳಿಕೋಟೆ
ಪ್ರಜಾಸೌಧ ಕಟ್ಟಡವನ್ನು ತಾಲೂಕಿನ ಮೈಲೇಶ್ವರ ಗ್ರಾಮದ ಸಮೀಪ ನಿರ್ಮಿಸಲು ಸರ್ಕಾರ ಕೈಗೊಂಡಿರುವ ನಿರ್ಧಾರಕ್ಕೆ ತಾಳಿಕೋಟೆ ಪಟ್ಟಣದಲ್ಲಿ ಜನರ ಆಕ್ರೋಶ ಉಗ್ರ ಸ್ವರೂಪ ಪಡೆದುಕೊಂಡಿದ್ದು, ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 27ನೇ ದಿನಕ್ಕೂ ಕಾಲಿಟ್ಟಿದೆ.
ಪಟ್ಟಣದ ಬಸವೇಶ್ವರ ವೃತ್ತ ಈಗ ಹೋರಾಟದ ಕೇಂದ್ರವಾಗಿದ್ದು, ಜನರ ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ ಸಂಕೇತವಾಗಿ ರೂಪಾಂತರಗೊಂಡಿದೆ. ದಿನದಿಂದ ದಿನಕ್ಕೆ ಜನಸಮೂಹ ಹೆಚ್ಚುತ್ತಿದ್ದು, ಹೋರಾಟ ಮತ್ತಷ್ಟು ತೀವ್ರಗೊಳ್ಳುತ್ತಿದೆ.
ಈ ಹೋರಾಟಕ್ಕೆ ಬಣಜಿಗ ಕ್ಷೇಮಾಭಿವೃದ್ಧಿ ಸಂಘ (ರಿ.) ನಗರ ಘಟಕದಿಂದ ಘೋಷಣಾತ್ಮಕ ಬೆಂಬಲ ವ್ಯಕ್ತವಾಗಿದ್ದು, ಸಮಾಜದ ಹಿರಿಯರು, ಯುವಕರು ಹಾಗೂ ಕಾರ್ಯಕರ್ತರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಹೊಸ ಶಕ್ತಿ ತುಂಬಿದರು

.
“ಪ್ರಜಾಸೌಧ ಪಟ್ಟಣದಲ್ಲೇ ನಿರ್ಮಿಸಬೇಕು” ಎಂಬ ಒಂದೇ ಬೇಡಿಕೆ ಘೋಷಣೆಗಳ ಮೂಲಕ ಗಟ್ಟಿಯಾಗಿ ಮೊಳಗಿತು.
ಧರಣಿ ವೇದಿಕೆಯಲ್ಲಿ ಮಾತನಾಡಿದ ಸಂಘದ ಮುಖಂಡರಾದ ಎಂ.ಆರ್. ಕತ್ತಿ, ರಮೇಶ ಸಾಲಂಕೆ ಮತ್ತು ನ್ಯಾಯವಾದಿ ಗಂಗಾಧರ ಕಸ್ತೂರಿ, ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿ,
“ಪಟ್ಟಣದಿಂದ 4–5 ಕಿ.ಮೀ ದೂರದ ನಿರ್ಜನ ಪ್ರದೇಶದಲ್ಲಿ ಪ್ರಜಾಸೌಧ ನಿರ್ಮಿಸುವುದು ಜನರೊಂದಿಗೆ ದ್ರೋಹ ಮಾಡುವಂತಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಅಲ್ಲಿ ಮೂಲಭೂತ ಸೌಲಭ್ಯಗಳೇ ಇಲ್ಲ. ವಯೋವೃದ್ಧರು, ಅಂಗವಿಕಲರು, ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಇಂತಹ ಸ್ಥಳಕ್ಕೆ ಹೋಗುವುದು ಕಷ್ಟ ಮಾತ್ರವಲ್ಲ, ಅಪಾಯಕಾರಿಯೂ ಆಗಿದೆ. ಸಾರ್ವಜನಿಕ ಸೇವೆಗಳ ಕೇಂದ್ರವಾಗಬೇಕಾದ ಪ್ರಜಾಸೌಧ ಜನರಿಗೆ ತಲುಪದಿದ್ದರೆ ಅದರ ಅರ್ಥವೇನು?” ಎಂದು ಪ್ರಶ್ನಿಸಿದರು.
ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರ ವಿರುದ್ಧ ಅಸಮಾಧಾನ ಹೊರಹಾಕಿದ ಅವರು,
“ಜನರ ಮನವಿಗಳಿಗೆ ಸ್ಪಂದನೆ ಇಲ್ಲ. ಈ ನಿರ್ಲಕ್ಷ್ಯ ಮುಂದುವರಿದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲಾಗುವುದು,” ಎಂದು ಎಚ್ಚರಿಕೆ ನೀಡಿದರು.
ಹೋರಾಟಗಾರರು ಜಾಗ ಆಯ್ಕೆ ವಿಚಾರದಲ್ಲಿ ಸ್ವಹಿತಾಸಕ್ತಿ ಇರುವವರ ಪ್ರಭಾವವಿದೆ ಎಂದು ಗಂಭೀರ ಆರೋಪ ಮಾಡಿದರು.
“ನಮಗೆ ಯಾವುದೇ ವೈಯಕ್ತಿಕ ಲಾಭ ಬೇಡ. ಸಾರ್ವಜನಿಕ ಹಿತವೇ ಮುಖ್ಯ. ಪ್ರಜಾಸೌಧ ಪಟ್ಟಣದಲ್ಲೇ ನಿರ್ಮಾಣವಾಗಬೇಕು,” ಎಂದು ಒತ್ತಾಯಿಸಿದರು.
ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಮುಖಂಡರು ಹೋರಾಟಕ್ಕೆ ಸಂಪೂರ್ಣ ಬೆಂಬಲ ಘೋಷಿಸಿ, ಹೋರಾಟ ಸಮಿತಿಯ ಕರೆ ಬಂದಾಗ ಒಗ್ಗಟ್ಟಿನಿಂದ ಹೋರಾಟವನ್ನು ಮತ್ತಷ್ಟು ಬಲಪಡಿಸುವುದಾಗಿ ಭರವಸೆ ನೀಡಿದರು. ಇದರಿಂದ ಹೋರಾಟಕ್ಕೆ ಹೊಸ ಚೈತನ್ಯ ದೊರೆತಿದೆ.
ಈ ಸಂದರ್ಭದಲ್ಲಿ ಮಹೇಶ್ ದೇವಶೆಟ್ಟಿ, ಮಲ್ಲಿಕಾರ್ಜುನ ದೇವಶೆಟ್ಟಿ, ಮಲ್ಲಿಕಾರ್ಜುನ ಕತ್ತಿ, ಶಾಂತಪ್ಪ ಇಜೇರಿ, ಕಾಶಿನಾಥ ಪಾಲ್ಕಿ, ಸಿ.ಬಿ. ಸರಶೆಟ್ಟಿ, ಗಂಗಾಧರ ಸರ್ಶೆಟ್ಟಿ, ವಿ.ಕೆ. ಜಿಗಜಿನ್ನಿ, ಸಂತೋಷ ಕತ್ತಿ, ಐ.ಆರ್. ಕಲ್ಬುರ್ಗಿ, ವೀರೇಶ್ ಸಾತನೂರು, ಮುರುಗೆಪ್ಪ ಸರಶೆಟ್ಟಿ, ಚಂದ್ರಕಾಂತ್ ಪಾಲ್ಕಿ, ಸಿ.ಬಿ. ತಿಳಗುಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋರಾಟ ಸಮಿತಿಯ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ, ಆರ್.ಎಸ್. ಪಾಟೀಲ (ಕೂಚಬಾಳ), ಮುತ್ತಪ್ಪ ಚಮಲಾಪುರ, ಕಾಶಿನಾಥ ಮುರಾಳ, ಪರಶುರಾಮ ತಂಗಡಗಿ, ಮಸೂಮಸಾಬ್ ಕೆಂಭಾವಿ, ವಿಜಯಸಿಂಗ್ ಹಜೇರಿ ಸೇರಿದಂತೆ ಹಲವು ಪ್ರಮುಖರು ಧರಣಿಯಲ್ಲಿ ಪಾಲ್ಗೊಂಡಿದ್ದರು. ವಿವಿಧ ಸಮಾಜಗಳ ಮುಖಂಡರು ಮತ್ತು ಪಟ್ಟಣದ ಹಿರಿಯರು ಕೂಡ ಹಾಜರಿದ್ದು, ಹೋರಾಟಕ್ಕೆ ಏಕಮತದ ಬೆಂಬಲ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!