ತಾಳಿಕೋಟೆ: ತಾಲೂಕಿನ ಮೇಲೆಶ್ವರ ಗ್ರಾಮದ ಸಮೀಪ ಪ್ರಜಾಸೌಧ ನಿರ್ಮಾಣಕ್ಕೆ ಗುರುತಿಸಲಾದ ಸ್ಥಳದ ವಿರುದ್ಧ ಜನರ ಆಕ್ರೋಶ ತಾರಕ್ಕೇರಿದ್ದು, ಪ್ರಜಾಸೌಧವನ್ನು ತಾಳಿಕೋಟೆ ಪಟ್ಟಣದಲ್ಲಿಯೇ ನಿರ್ಮಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು 30ನೇ ದಿನಕ್ಕೂ ಮುಂದುವರಿದಿದೆ.
ಪಟ್ಟಣದ ಬಸವೇಶ್ವರ ವೃತ್ತದ ಬಳಿ ನಡೆಯುತ್ತಿರುವ ಈ ಹೋರಾಟ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ 29 ದಿನಗಳಿಂದಲೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಬುಧವಾರ ನಡೆದ ಸತ್ಯಾಗ್ರಹದಲ್ಲಿ ಮಿಣಜಗಿ ಗ್ರಾಮದ ಹಿರಿಯರು ಮತ್ತು ಯುವಕರು ಭಾರಿ ಸಂಖ್ಯೆಯಲ್ಲಿ ಭಾಗವಹಿಸಿ “ಅರಭತ್ತಲೆ ಧರಣಿ” ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು. ಹೋರಾಟಕ್ಕೆ ಗ್ರಾಮ ಮಟ್ಟದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.
ಗ್ರಾಮದ ಹಿರಿಯರಾದ ಪುನೀತಗೌಡ ಬಿರಾದಾರ ಹಾಗೂ ದ್ಯಾಮನಗೌಡ ಪಾಟೀಲ ಮಾತನಾಡಿ, “ಪ್ರಜಾಸೌಧಕ್ಕೆ ನಿಗದಿಪಡಿಸಿರುವ ಸ್ಥಳವು ಪಟ್ಟಣದಿಂದ ದೂರದ ನಿರ್ಜನ ಪ್ರದೇಶದಲ್ಲಿದ್ದು, ಮಹಿಳೆಯರು ಮತ್ತು ವಿದ್ಯಾರ್ಥಿನಿಯರ ಸುರಕ್ಷತೆಗೆ ಅಪಾಯಕಾರಿಯಾಗಿದೆ. ಜನಸಾಮಾನ್ಯರಿಗೆ ಸುಲಭವಾಗುವಂತೆ ಪಟ್ಟಣದಲ್ಲಿಯೇ ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಬೇಕು” ಎಂದು ಒತ್ತಾಯಿಸಿದರು.
ಇದಲ್ಲದೆ, ಈ ಕುರಿತು ಶಾಸಕರಿಗೂ ಜಿಲ್ಲಾಡಳಿತಕ್ಕೂ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ನಿಗದಿಪಡಿಸಿರುವ ಜಾಗದ ಆಯ್ಕೆ ಹಿಂದೆ ಸ್ವಹಿತಾಸಕ್ತಿ ಇರುವ ಶಂಕೆಯನ್ನೂ ವ್ಯಕ್ತಪಡಿಸಿದರು.
“ಇದು ಕೇವಲ ಒಂದು ಗ್ರಾಮದ ಹೋರಾಟವಲ್ಲ, ಇಡೀ ತಾಲೂಕಿನ ಹಕ್ಕಿನ ಪ್ರಶ್ನೆ” ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದು, ಬೇಡಿಕೆ ಈಡೇರಿಸುವವರೆಗೆ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದ್ದಾರೆ.
ಈ ಹೋರಾಟಕ್ಕೆ ಮಿಣಜಗಿ ಗ್ರಾಮದ ಎಲ್ಲಾ ಸಮುದಾಯದ ಹಿರಿಯರು ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ.
ಧರಣಿಯಲ್ಲಿ ರಾಮನಗೌಡ ಪಾಟೀಲ, ಶಿವನಗೌಡ ಬಿರಾದಾರ, ಶಶಿಧರ ಬೆಣ್ಣೂರ, ಮಲ್ಲಿಕಾರ್ಜುನ ಬಾದೋಡಗಿ, ಶಿವಾನಂದ ನಾಯಕ, ಗುರುನಗೌಡ ಪಾಟೀಲ, ಬಸನಗೌಡ ಪಾಟೀಲ, ಕಾಶಿನಾಥಗೌಡ ಪಾಟೀಲ, ವೀರೇಶ ಬಮಗೊಂಡ, ಮಹೇಶ ಬಿರಾದಾರ, ದೇವೇಂದ್ರಪ್ಪ ತೆಕ್ಕುರ್ ಸೇರಿದಂತೆ ಅನೇಕರು ಭಾಗವಹಿಸಿದರು.ಹೋರಾಟ ಸಮಿತಿಯ ಅಧ್ಯಕ್ಷ ದಶರತಸಿಂಗ್ ಮನಗೂಳಿ, ಎಸ್.ಬಿ. ಕಟ್ಟಿಮನಿ, ಮುತ್ತಪ್ಪ ಚಮಲಾಪುರ, ಕಾಶೀನಾಥ ಮುರಾಳ, ಮುರಿಗೆಪ್ಪ ಸರಶೆಟ್ಟಿ, ದತ್ತು ಹೆಬಸೂರ, ಪರಶುರಾಮ ತಂಗಡಗಿ, ದತ್ತು ಹೇಬಸೂರ್, ವಿಜಯಸಿಂಗ್ ಹಜೇರಿ, ರಾಜು ಹಂಚಾಟಿ, (ಸಂದಿ ಅಂಗಡಿ ), ಮಹೇಶ ಛಲವಾದಿ, ಪ್ರಕಾಶ್ ಹಜೇರಿ, ಮುದಕಪ್ಪ ಬಡಿಗೇರ ಸೇರಿದಂತೆ ಹಲವರು ಹಾಜರಿದ್ದರು.
