ಪತ್ರಕರ್ತರ ಸಮ್ಮೇಳನಕ್ಕೆ ತೆರೆ

ಬೀದರ್:ಬೀದರ್‌ (ಲೋಕನಾಯಕ ಡಾ. ಭೀಮಣ್ಣ ಖಂಡ್ರೆ ವೇದಿಕೆ): ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಹಾಗೂ ಬೀದರ್‌ ಜಿಲ್ಲಾ ಘಟಕದಿಂದ ನಗರದ ಝೀರಾ ಕನ್ವೆನ್ಷನ್‌ ಹಾಲ್‌ನಲ್ಲಿ ಏರ್ಪಡಿಸಿದ್ದ ಎರಡು ದಿನಗಳ 40ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಭಾನುವಾರ ಸಂಜೆ ವಿದ್ಯುಕ್ತ ತೆರೆ ಬಿತ್ತು.

ಎರಡು ದಿನಗಳ ಅವಧಿಯಲ್ಲಿ ಸಮಕಾಲೀನ ವಿಷಯದ ಕುರಿತು ಗೋಷ್ಠಿಗಳು, ವ್ಯಂಗ್ಯಚಿತ್ರ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ನಡೆದವು. ಮೊದಲ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರೆ, ಸಮಾರೋಪದಲ್ಲಿ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ದತ್ತಿ ಪ್ರಶಸ್ತಿ ಹಾಗೂ ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ವಿತರಿಸಲಾಯಿತು.ಸಮಾರೋಪ ನುಡಿ ಆಡಿದ ಯು.ಟಿ. ಖಾದರ್, ಪತ್ರಿಕೋದ್ಯಮವು ಸಾಮಾಜಿಕ ಜವಾಬ್ದಾರಿಯ ಪ್ರತೀಕವಾಗಿದೆ. ಸಮಾಜ, ದೇಶ ಕಟ್ಟುವಲ್ಲಿ ಮಹತ್ವದ ಪಾತ್ರ ವಹಿಸುವ ಪತ್ರಕರ್ತರ ಪೆನ್ನುಸದಾಕಾಲ ಸತ್ಯದ ಪರವಾಗಿರಬೇಕು. ನಮ್ಮ ದೇಶದ ಪ್ರಬಲ ಶಕ್ತಿಯಾದ ಪತ್ರಿಕೋದ್ಯಮ, ಪತ್ರಕರ್ತರು, ಈ ದೇಶದ ಎಲ್ಲ ಜನರು ಒಂದೇ ಎಂದು ಹೇಳುವ ಅವಶ್ಯಕತೆಯಿದೆ. ಪ್ರತಿಯೊಬ್ಬರಿಗೂ ಪ್ರೇರಣಾದಾಯಕವಾದ ಬರವಣಿಗೆಯ ಶಕ್ತಿಯನ್ನು ಪತ್ರಕರ್ತರು ಹೊಂದಬೇಕು ಎಂದು ಸಲಹೆ ಮಾಡಿದರು.

ರಾಜಕೀಯ ಮತ್ತು ಪತ್ರಿಕೋದ್ಯಮ ಸಮಾಜದ ಎರಡು ಕಣ್ಣುಗಳಿದ್ದಂತೆ. ಎರಡೂ ಉತ್ತಮವಾದಾಗ ಸಮಾಜವು ಸಂಪನ್ನವಾಗಿರಲು ಸಾಧ್ಯವಿದೆ. ಪತ್ರಿಕೆಗಳು ಬರೀ ಟೀಕೆ, ಹೊಗಳಿಕೆಗೆ ಮಾತ್ರ ಸೀಮಿತವಾಗಬಾರದು. ಉತ್ತಮವಾಗಿ ಕೆಲಸ ಮಾಡುವರಿಗೆ ಪ್ರೇರಣೆಯಾಗುವ ಕಾರ್ಯ ಮಾಡಬೇಕು. ಮತ್ತು ಯಾವಾಗಲೂ ಪ್ರಾಮಾಣಿಕ ಸತ್ಯವನ್ನು ಪ್ರತಿಪಾದಿಸಬೇಕು ಎಂದು ತಿಳಿಸಿದರು.

ಕಣ್ಣು, ಕಿವಿ ತೆರೆದು ಸಮಾಜವನ್ನು ತಲಸ್ಪರ್ಶಿಯಾಗಿ ನೋಡಿದಾಗಲೇ ಉತ್ತಮ ಪತ್ರಕರ್ತನಾಗಲು ಸಾಧ್ಯವಿದೆ ಎಂದು ಹೇಳಿದರು.‍‍

ಆರ್‌. ಅಶೋಕ್‌ ಮಾತನಾಡಿ, ಪತ್ರಿಕೋದ್ಯಮವು ಈಗ ಹೊಸ ತಿರುವು ಪಡೆದಿದೆ. ಮಾಧ್ಯಮವನ್ನು ಕಪಿಮುಷ್ಟಿಯಲ್ಲಿ ಇಡಬಾರದು. ವಿರೋಧ ಪಕ್ಷದ ಕಾರ್ಯವನ್ನು ಪತ್ರಿಕೋದ್ಯಮ ಮಾಡಬೇಕು. ಎದೆಗಾರಿಕೆಯಿಂದ, ಧೈರ್ಯದಿಂದ ವೃತ್ತಿ ಮಾಡಿದಾಗ ಪತ್ರಿಕಾ ವೃತ್ತಿಯ ಘನತೆ ಹೆಚ್ಚಲಿದೆ ಎಂದರು.

ಪ್ರಜಾಪ್ರಭುತ್ವ ಇರುವ ಕಡೆಗಳಲ್ಲಿ ಮಾಧ್ಯಮಗಳು ಇರುತ್ತವೆ. ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ ಪ್ರಯತ್ನಗಳು ಆಗಬಾರದು. ಇಲ್ಲವಾದರೆ ಅದು ದನಿ ಅಡಗಿಸುವ ಕೆಲಸವಾಗುತ್ತದೆ ಎಂದರು.ಎಷ್ಟೋ ಸಲ ಮಾಧ್ಯಮದವರು ಅಪಾಯ ಲೆಕ್ಕಿಸದೇ ಕೆಲಸ ಮಾಡುತ್ತಾರೆ. ಯುದ್ಧದ ಸಂದರ್ಭಗಳಲ್ಲಿ ಯುದ್ಧದ ಸ್ಥಳಗಳಿಗೆ ತೆರಳಿ ವರದಿ ಮಾಡಿದ್ದಾರೆ.

ಕೋವಿಡ್‌ನಲ್ಲಿ ಕೋವಿಡ್‌ ವಾರಿಯರ್ಸ್‌ಗಳಾಗಿ ಪತ್ರಕರ್ತರು ಕೆಲಸ ಮಾಡಿದ್ದಾರೆ. ಬರವಣಿಗೆ ಪತ್ರಕರ್ತನ ಯಶಸ್ಸು ಆಧರಿಸಿದೆ ಎಂದು ಹೇಳಿದರು.

ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್‌, ಶಾಸಕರಾದ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಡಾ.ಸಿದ್ಧಲಿಂಗಪ್ಪ ಪಾಟೀಲ, ಶರಣು ಸಲಗರ, ಮಾರುತಿರಾವ್ ಮುಳೆ, ರಾಜ್ಯ ಮಾಹಿತಿ ಆಯುಕ್ತ ಬಿ. ವೆಂಕಟಸಿಂಗ್, ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ ಪಾಟೀಲ ಸೋಲಪೂರ, ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ, ಡಿಸಿಸಿ ಬ್ಯಾಂಕ್‌ ನಿರ್ದೇಶಕಿ ಶಕುಂತಲಾ ಬೆಲ್ದಾಳೆ, ಸಂಘದ ಜಿಲ್ಲಾ ಅಧ್ಯಕ್ಷ ಆನಂದ ದೇವಪ್ಪ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!