33 ದಿನಗಳ ಶಿವಯೋಗ ಸಮಾಧಿ ಬಳಿಕ ರಾಚೋಟೇಶ್ವರ ಶ್ರೀಗಳು ಅಸ್ವಸ್ಥ..! ಗದಗ ಜಿಲ್ಲಾಸ್ಪತ್ರೆಗೆ ದಾಖಲು

“33 ದಿನಗಳ ಸಮಾಧಿ ಬಳಿಕ…”
“ಶ್ರೀಗಳು ಅಸ್ವಸ್ಥ..!”ಆತಂಕ ಬೇಡ ಎಂದ ವೈದ್ಯರು..!

ವಿಜಯ ಸಿಂಧೂರ ಸುದ್ದಿ

ಗದಗ ಜಿಲ್ಲೆಯ ಅಂತೂರು-ಬೆಂತೂರು ಮಠದಲ್ಲಿ ಕಳೆದ 33 ದಿನಗಳಿಂದ ಶಿವಯೋಗ ಸಮಾಧಿ ತಪಸ್ಸು ಕೈಗೊಂಡಿದ್ದ ರಾಚೋಟೇಶ್ವರ ಶಿವಾಚಾರ್ಯ ಶ್ರೀಗಳು ಇಂದು ಸಮಾಧಿ ಅನುಷ್ಠಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಆದರೆ ಸಮಾಧಿಯಿಂದ ಹೊರಬಂದ ಕೆಲವೇ ಹೊತ್ತಿನಲ್ಲಿ ಅವರ ಆರೋಗ್ಯದಲ್ಲಿ ಏರುಪೇರು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣವೇ ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಲೋಕ ಕಲ್ಯಾಣ, ಉತ್ತಮ ಮಳೆ-ಬೆಳೆ ಹಾಗೂ ಸಕಲ ಜೀವ ಸಂಕುಲದ ಒಳಿತಿಗಾಗಿ ಈ ವಿಶೇಷ ಶಿವಯೋಗ ಸಮಾಧಿ ಅನುಷ್ಠಾನವನ್ನು ಶ್ರೀಗಳು ಕೈಗೊಂಡಿದ್ದರು. ಮಠದ ಆವರಣದಲ್ಲಿ ನಿರ್ಮಿಸಲಾಗಿದ್ದ ಸಮಾಧಿ ಸ್ಥಳವನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಶಿವಲಿಂಗದ ಸನ್ನಿಧಿಯಲ್ಲಿ 33 ದಿನಗಳ ಕಾಲ ಶ್ರೀಗಳು ನಿರಂತರ ಧ್ಯಾನದಲ್ಲಿ ತೊಡಗಿದ್ದರು ಎಂದು ಮಠದ ವತಿಯಿಂದ ತಿಳಿಸಲಾಗಿತ್ತು.

ರವಿವಾರ ಬೆಳಿಗ್ಗೆ ನಿಗದಿತ ಸಮಯಕ್ಕೆ ವೇದಮಂತ್ರಗಳ ಘೋಷ ಹಾಗೂ ಧಾರ್ಮಿಕ ವಿಧಿವಿಧಾನಗಳ ನಡುವೆ ಸಮಾಧಿಯನ್ನು ತೆರೆಯಲಾಯಿತು. ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಅಂತೂರು-ಬೆಂತೂರು ಮಠಕ್ಕೆ ಆಗಮಿಸಿದ್ದರು. ಶ್ರೀಗಳು ಸಮಾಧಿಯಿಂದ ಹೊರಬಂದ ಕೂಡಲೇ ಭಕ್ತರು ಜಯಘೋಷ ಮೊಳಗಿಸಿ ಆಶೀರ್ವಾದ ಪಡೆದರು.

ಆದರೆ ಕೆಲವೇ ಕ್ಷಣಗಳಲ್ಲಿ ಶ್ರೀಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದ ಹಿನ್ನೆಲೆಯಲ್ಲಿ ವೈದ್ಯರು ಸ್ಥಳದಲ್ಲೇ ಪ್ರಾಥಮಿಕ ತಪಾಸಣೆ ನಡೆಸಿದರು. ನಂತರ ಹೆಚ್ಚಿನ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣೆಗಾಗಿ ಆಂಬ್ಯುಲೆನ್ಸ್ ಮೂಲಕ ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು.

ಪ್ರಸ್ತುತ ವೈದ್ಯರು ಶ್ರೀಗಳ ಆರೋಗ್ಯದ ಮೇಲೆ ನಿಗಾ ವಹಿಸಿದ್ದು, ಅಗತ್ಯ ವೈದ್ಯಕೀಯ ಪರೀಕ್ಷೆಗಳು ಹಾಗೂ ಚಿಕಿತ್ಸೆ ಮುಂದುವರಿದಿವೆ. ಶ್ರೀಗಳ ಆರೋಗ್ಯ ಶೀಘ್ರವಾಗಿ ಸುಧಾರಿಸಲಿ ಎಂದು ಸಾವಿರಾರು ಭಕ್ತರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

33 ದಿನಗಳ ಕಾಲ ನಡೆದ ಈ ಶಿವಯೋಗ ಸಮಾಧಿ ಅನುಷ್ಠಾನ ರಾಜ್ಯದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದ್ದು, ಸಮಾಧಿ ಪೂರ್ಣಗೊಂಡ ದಿನವೂ ಸಾವಿರಾರು ಭಕ್ತರು ಮಠಕ್ಕೆ ಭೇಟಿ ನೀಡಿ ಶ್ರೀಗಳ ದರ್ಶನ ಪಡೆದಿದ್ದಾರೆ.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!