ವಿಜಯ ಸಿಂಧೂರ, ನರಗುಂದ
ಮಹಿಳೆಯರು ಮುತ್ತೈದೆಯರಾಗಿ ಬಾಳಬೇಕೆಂಬ ಉದ್ದೇಶದಿಂದ ಈ ಶಿಬಿರ ನಡೆಯುತ್ತಿದೆ. ಯಾವ ಹೆಣ್ಣಿಗೂ ಕುಡುಕ ಗಂಡ ಬೇಕಾಗಿಲ್ಲ, ಯಾವ ಮಗುವಿಗೂ ಕುಡುಕ ಅಪ್ಪ ಬೇಕಾಗಿಲ್ಲ. ದೇವರಿಗೂ ಕುಡುಕ ಭಕ್ತ ಬೇಕಾಗಿಲ್ಲ. ಸಮಾಜಕ್ಕೂ ಕುಡುಕ ವ್ಯಕ್ತಿ ಬೇಕಾಗಿಲ್ಲ. ಕುಡಿತದಿಂದ ಸತ್ತ ವ್ಯಕ್ತಿಯ ಕುಟುಂಬವು ಕತ್ತಲಲ್ಲಿ ಮುಳಗಬಾರದು. ದುಶ್ಚಟಮುಕ್ತ ಸಮಾಜ ನಿರ್ಮಾಣ ಮಾಡುವ ಉದ್ದೇಶವನ್ನಿಟ್ಟುಕೊಂಡು ಈ ಶಿಬಿರವನ್ನು ಮಾಡುತ್ತಿದ್ದೇವೆ ಎಂದು ಕೊಪ್ಪಳ ಜನಜಾಗೃತಿ ಯೋಜನಾಧಿಕಾರಿ ನಾಗೇಶ ವೈ ಎ ಅವರು ಹೇಳಿದರು.

ಪಟ್ಟಣದ ರೋಟರ್ಯಾಕ್ಟ್ ಕನ್ನಡ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಡಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ತಾಲೂಕಿನ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಬುಧವಾರ ಲ್ಯಾಲ ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಹಾಗೂ ಸಂಶೋಧನಾ ಕೇಂದ್ರ ವಿಸ್ತರಣಾ ಕಾರ್ಯಕ್ರಮದ ಅಂಗವಾಗಿ ಜರುಗಿದ 2059ನೇ ಮದ್ಯವರ್ಜನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ತಹಶೀಲ್ದಾರ ಶ್ರೀಶೈಲ ತಳವಾರ ಮಾತನಾಡಿ, ಕುಡಿತಕ್ಕೆ ದಾಸರಾದ ವ್ಯಕ್ತಿಗಳು ಮನೆಯ ಸಾಮಾನಗಳನ್ನು ಮಾರಾಟ ಮಾಡ್ತಾರೆ. ಕೊನೆಗೆ ಹೆಂಡ್ತಿ ಮಕ್ಕಳನ್ನು ಮಾರ್ತಾರೆ. ಇದರಿಂದ ಸಮಾಜದಲ್ಲಿ ಗೌರವ ಸಿಗಲ್ಲ, ಆದ್ದರಿಂದ ಸಂಜೀವಿನಿಯಂತೆ ಇರುವ ಈ ಮದ್ಯವರ್ಜನ ಶಿಬಿರದ ಸದುಪಯೋಗ ಪಡೆದುಕೊಂಡು ತಮ್ಮ ಜೀವನವನ್ನು ಬದಲಾಯಿಸಿಕೊಳ್ಳಿರಿ ಎಂದು ಹೇಳಿದರು.
ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಮಾತನಾಡಿ, ಸರ್ವತೋಮುಖ ಅಭಿವೃದ್ಧಿ ಹಾಗೂ ಸ್ವಾವಲಂಬಿ ಜೀವನ ನಡೆಸಬೇಕು. ದುಶ್ಚಟಮುಕ್ತ ಸಮಾಜ ನಿರ್ಮಾಣ ಆಗಬೇಕು. 1992 ರಿಂದ 96 ರವರೆಗೆ ಧರ್ಮಸ್ಥಳ ಸಂಘದಿಂದ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಹೋರಾಟ ಮಾಡಲಾಯಿತು. ಹೋರಾಟಕ್ಕೆ ಮಣಿದ ರಾಜ್ಯ ಸರಕಾರವು ಕೊನೆಗೆ ಬೆಳ್ತಂಗಡಿ ಹಾಗೂ ಸಂಡೂರ ತಾಲೂಕಗಳಲ್ಲಿ ಮಾತ್ರ ಮಧ್ಯಮಾರಾಟ ನಿಷೇದ ಮಾಡಿತು. ಪರಿಣಾಮ ಅಲ್ಲಲ್ಲಿ ಜನರು ಕಳ್ಳಬಟ್ಟಿ ತಯಾರಿ ಹಾಗೂ ಕಳ್ಳಬಟ್ಟಿ ಸೇವನೆ ಘಟನೆಗಳು ಜರುಗಿದವು. ಕೊನೆಗೆ ಸಂಘವು ಪರ್ಯಾಯ ಮಾರ್ಗ ಕಂಡುಹಿಡಿಯಲು ಮಧ್ಯವರ್ಜನ ಶಿಬಿರಗಳನ್ನು ಪ್ರಾರಂಭಿಸಿತು. ಅಲ್ಲಿಂದ ಇಲ್ಲಿಯವರೆಗೆ ಅಂದರೆ 34 ವರ್ಷಗಳಲ್ಲಿ 2059 ಶಿಬಿರಗಳನ್ನು ನಡೆಸಲಾಯಿತು. ಆಡು ಮುಟ್ಟದ ಸೊಪ್ಪಿಲ್ಲ ಧರ್ಮಸ್ಥಳ ಸಂಘವು ಮುಟ್ಟದ ಯೋಜನೆಗಳಿಲ್ಲ, ಎನ್ನುವಂತೆ ಧರ್ಮಸ್ಥಳ ಸಂಘವು ಅಷ್ಟೊಂದು ಸಮಾಜುಪಯೋಗಿ ಯೋಜನೆಗಳನ್ನು ಸಮಾಜಕ್ಕೆ ಕೊಡುತ್ತಾ ಬಂದಿದೆ ಎಂದರು.
ಪೂಜ್ಯಶ್ರೀ ಶಿವಕುಮಾರ ಮಹಾಸ್ವಾಮಿಗಳು ಮಾತನಾಡಿ, ಶಿಬಿರದ ಉದ್ದೇಶ ಅರ್ಥ ಮಾಡಿಕೊಳ್ಳಬೇಕು. ಕುಟುಂಬದ ಕಷ್ಟಕ್ಕೆ ಕುಡಿತವೇ ಕಾರಣ. ಕುಡಿತವೇ ಜೀವನ ಆಗಬಾರದು. ಕುಡುಕರ ಜೀವನ ಏನಾಗಿದೆ ಎಂಬುದನ್ನು ನೋಡಿಕೊಳ್ಳಿರಿ. ಏನು ಪರಿಚಯವಿಲ್ಲದ, ಸಂಬಂದವು ಇಲ್ಲದ ಒಂದು ಹೆಣ್ಣು ತಂದೆತಾಯಿ ಅವರನ್ನು ಬಿಟ್ಟು ನಿಮ್ಮನ್ನು ನಂಬಿಕೊಂಡು ಜೊತೆ ಜೀವನ ಹಂಚಿಕೊಂಡಿರುತ್ತಾಳೆ. ಅವಳಿಗೆ ಮತ್ತು ನಿಮ್ಮಿಬ್ಬರಿಗೂ ಹುಟ್ಟಿದ ಮಕ್ಕಳಿಗೆ ಅನ್ಯಾಯ ಮಾಡಬೇಡಿ. ದುಶ್ಚಟಮುಕ್ತ ಜೀವನ ನಡೆಸಿ, ಸುಂದರವಾದ ಬದುಕು ಕಟ್ಟಿಕೊಳ್ಳಿರೆಂದು ಹೇಳಿದರು.
ವೇದಿಕೆಯಲ್ಲಿ ಸಮಿತಿ ಗೌರವಾಧ್ಯಕ್ಷ ರಾಜು ಕಲಾಲ, ಜಿಲ್ಲಾ ಜನಜಾಗೃತಿ ನಿಕಟಪೂರ್ವ ಅಧ್ಯಕ್ಷ ಹೆಚ್ ಬಿ ಅಸೂಟಿ, ಚನ್ನಪ್ಪ ಕಂಠಿ, ವಿಜಯ ಕುಲಕರ್ಣಿ, ಮಂಜುನಾಥ ಮೆಣಸಗಿ ಅವರುಗಳು ಮಾತನಾಡಿದರು. ಶಿಬಿರದಲ್ಲಿ ನೂರರಷ್ಟು ಶಿಬಿರಾರ್ಥಿಗಳು ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಮಂಜುನಾಥ ಮೆಣಸಗಿ, ಪ್ರಶಾಂತ ಜೋಶಿ, ಚಂದ್ರಗೌಡ ಪಾಟೀಲ, ಕೊಟ್ರೇಶ ಕೊಟ್ರಶೆಟ್ಟಿ, ಶಂಕ್ರಣ್ಣ ಇಂಗಳಳ್ಳಿ, ವ್ಹಿ ಎನ್ ಕೊಳ್ಳಿಯವರ, ನೀಲಪ್ಪ ಗುಡದನ್ನವರ, ಪರಶುರಾಮ ಭೋವಿ, ನಬೀಸಾಬ ಕಿಲೇದಾರ, ಉಮಾ ದ್ಯಾವನೂರ, ಶಿಬಿರಾಧಿಕಾರಿ ರಮೇಶ ಕೆ, ಆರೋಗ್ಯ ಸಹಾಯಕ ವೆಂಕಟೇಶ, ಜನಜಾಗೃತಿ ಮೇಲ್ವಿಚಾರಕ ಸಚಿನ್, ಯೋಗ ಶಿಕ್ಷಕ ಎಫ್ ವ್ಹಿ ಶಿರೂಂದಮಠ, ರಾಜೇಶಸಾಬ ತಹಶೀಲ್ದಾರ, ಆನಂದ ಗೌಳಿ ಹಾಗೂ ನವಜೀವನ ತಂಡ, ಶೌರ್ಯಶ್ರೀ ವಿಪತ್ತು ನಿರ್ವಹಣಾ ತಂಡದವರು ಇದ್ದರು. ಯೋಜನಾಧಿಕಾರಿ ಮಾಲತಿ ದಿನೇಶ ಸ್ವಾಗತಿಸಿದರು.
ಬೆಳಿಗ್ಗೆ ಹಾಲು ತರಲಿಕ್ಕೆ ಹೋದರೆ ಹಾಲು ಸಿಗಲ್ಲ, ಬದಲಾಗಿ ಆಲ್ಕೋಹಾಲ್ ಸಿಗುತ್ತದೆ. ಹಾಲಿನ ಅಂಗಡಿಗಳಿಗಿಂತ ಸರಾಯಿ ಅಂಗಡಿಗಳೇ ಬೇಗ ತೆರೆಯುತ್ತವೆ. ವೇದಿಕೆಯಲ್ಲಿನ ತಹಶೀಲ್ದಾರರು ಮಧ್ಯದಂಗಡಿಗಳು ನಿಯಮಪಾಲನೆ ಮಾಡುವಂತೆ ಗಮನ ಹರಿಸಬೇಕು. ಕಾನೂನು ಪಾಲನೆ ಆಗಬೇಕು. ನರಗುಂದ ತಾಲೂಕ ಸರಾಯಿಮುಕ್ತ ತಾಲೂಕು ಮಾಡಲು ತಹಶೀಲ್ದಾರರು ಸಹಕಾರ ನೀಡಬೇಕು — ವಿಜಯ ಕುಲಕರ್ಣಿ, ಕಳಸಾ ಬಂಡೂರಿ ಹೋರಾಟಗಾರರು.
