ಜಿ.ಎಸ್. ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ಧರ್ಮಸ್ಥಳ ಮಂಜುನಾಥನಿಗೆ ಹರಕೆ; ಆರು ತಿಂಗಳಿಂದ ಗಡ್ಡ-ಮೀಸೆ ಬೆಳೆಸಿದ ಅಭಿಮಾನಿ!

ವಿಜಯ ಸಿಂಧೂರ, ನರೇಗಲ್

ರಾಜಕೀಯ ನಾಯಕರ ಮೇಲೆ ಕಾರ್ಯಕರ್ತರು ಹೊಂದಿರುವ ಅಭಿಮಾನ ಕೆಲವೊಮ್ಮೆ ಅಚ್ಚರಿ ಮೂಡಿಸುವ ಮಟ್ಟಕ್ಕೆ ತಲುಪುತ್ತದೆ.

ರೋಣ ಕ್ಷೇತ್ರದ ಶಾಸಕ ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ದೊರೆಯಬೇಕು ಎಂಬ ಆಶಯದೊಂದಿಗೆ ಸಮೀಪದ ಜಕ್ಕಲಿ ಗ್ರಾಮದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಶಿವರಾಜ ಶರಣಪ್ಪ ಮುಗಳಿ ಅವರು ಕಳೆದ ಆರು ತಿಂಗಳಿನಿಂದ ಗಡ್ಡ, ಮೀಸೆ ಹಾಗೂ ತಲೆಯ ಕೂದಲನ್ನು ಕತ್ತರಿಸದೆ ಹರಕೆ ಹೊತ್ತು ಸುದ್ದಿಯಾಗಿದ್ದಾರೆ.
ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿಯ ಭಕ್ತರಾಗಿರುವ ಶಿವರಾಜ ಮುಗಳಿ, “ಜಿ.ಎಸ್. ಪಾಟೀಲ ಸಚಿವರಾಗುವವರೆಗೆ ನಾನು ಕ್ಷೌರ ಮಾಡಿಸಿಕೊಳ್ಳುವುದಿಲ್ಲ” ಎಂದು ಸಂಕಲ್ಪ ಮಾಡಿಕೊಂಡಿದ್ದು, ಕಳೆದ ಆರು ತಿಂಗಳಿಂದ ತಮ್ಮ ಹರಕೆಯನ್ನು ಶ್ರದ್ಧೆಯಿಂದ ಪಾಲಿಸಿಕೊಂಡು ಬರುತ್ತಿದ್ದಾರೆ.
ರೋಣ ಕ್ಷೇತ್ರದಲ್ಲಿ ಜನಸೇವೆಯ ಮೂಲಕ ಗುರುತಿಸಿಕೊಂಡಿರುವ ಜಿ.ಎಸ್. ಪಾಟೀಲ ಅವರು ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಹಿರಿಯ ರಾಜಕಾರಣಿ. ಕ್ಷೇತ್ರದ ಅಭಿವೃದ್ಧಿ, ರೈತರ ಸಮಸ್ಯೆಗಳ ಪರಿಹಾರ, ಗ್ರಾಮೀಣ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಜನಸಂಪರ್ಕದ ಮೂಲಕ ಜನರ ವಿಶ್ವಾಸ ಗಳಿಸಿರುವ ಅವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಅರ್ಹರು ಎಂಬ ಅಭಿಪ್ರಾಯ ಕಾರ್ಯಕರ್ತರಲ್ಲಿ ವ್ಯಕ್ತವಾಗುತ್ತಿದೆ.
“ನಾಲ್ಕು ಬಾರಿ ಜನರು ಅವರನ್ನು ಗೆಲ್ಲಿಸಿದ್ದಾರೆ. ಅವರ ಅನುಭವ ಮತ್ತು ಸೇವೆಯನ್ನು ಗುರುತಿಸಿ ಸಚಿವ ಸ್ಥಾನ ನೀಡಬೇಕು. ಅವರು ಸಚಿವರಾದರೆ ರೋಣ ಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ” ಎಂದು ಶಿವರಾಜ ಮುಗಳಿ ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯ ಚರ್ಚೆಗಳು ಜೋರಾಗಿರುವ ಸಂದರ್ಭದಲ್ಲಿ ರೋಣ ಕ್ಷೇತ್ರದಲ್ಲಿಯೂ ಕಾರ್ಯಕರ್ತರ ನಿರೀಕ್ಷೆ ಹೆಚ್ಚಾಗಿದೆ. ಜಿ.ಎಸ್. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಾಯದ ನಡುವೆ ಶಿವರಾಜ ಅವರ ಹರಕೆ ವಿಶೇಷ ಗಮನ ಸೆಳೆಯುತ್ತಿದೆ.
“ನಮ್ಮ ನಾಯಕರು ಸಚಿವರಾದ ದಿನವೇ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ತಲೆಕೂದಲು, ಗಡ್ಡ ಹಾಗೂ ಮೀಸೆಯನ್ನು ಸಮರ್ಪಿಸಿ ಹರಕೆ ತೀರಿಸುತ್ತೇನೆ” ಎಂದು ಅವರು ತಿಳಿಸಿದ್ದಾರೆ.
ಒಬ್ಬ ಸಾಮಾನ್ಯ ಗ್ರಾಮೀಣ ಕಾರ್ಯಕರ್ತ ತನ್ನ ನೆಚ್ಚಿನ ನಾಯಕನ ರಾಜಕೀಯ ಉನ್ನತಿಗಾಗಿ ಆರು ತಿಂಗಳ ಕಾಲ ಗಡ್ಡ-ಮೀಸೆ ಬೆಳೆಸಿ ವ್ರತ ಆಚರಿಸುತ್ತಿರುವುದು ಇದೀಗ ಸ್ಥಳೀಯವಾಗಿ ಕುತೂಹಲದ ವಿಷಯವಾಗಿದೆ. ನಾಲ್ಕು ಬಾರಿ ಶಾಸಕರಾಗಿ ಜನರ ಆಶೀರ್ವಾದ ಪಡೆದ ಜಿ.ಎಸ್. ಪಾಟೀಲ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗುತ್ತದೆಯೇ? ಹಾಗಾದರೆ ಶಿವರಾಜ ಮುಗಳಿ ಅವರ ಆರು ತಿಂಗಳ ಹರಕೆ ಯಾವಾಗ ಈಡೇರುತ್ತದೆ? ಎಂಬ ಚರ್ಚೆ ರೋಣ ಕ್ಷೇತ್ರದ ರಾಜಕೀಯ ವಲಯದಲ್ಲಿ ಜೋರಾಗಿದೆ
.

Leave a Reply

Your email address will not be published. Required fields are marked *

error: ವಿಷಯವನ್ನು ರಕ್ಷಿಸಲಾಗಿದೆ - Content is protected !!