ವಿಜಯ ಸಿಂಧೂರ ತಾಳಿಕೋಟೆ
ತಾಲೂಕಿನ ಕಲಕೇರಿ ಬಸವೇಶ್ವರ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಜಾಗೃತಿ ಹಾಗೂ ‘ಸ್ವಚ್ಛ ಸುಂದರ ಹಸ್ತಾಕ್ಷರ ಅಭಿಯಾನ’ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಡಾ. ಪ್ರವೀಣ ಬಿರಾದಾರ ಅವರು ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ, ಓದುವ ಅಭ್ಯಾಸ ಹಾಗೂ ಉತ್ತಮ ಹಸ್ತಾಕ್ಷರದ ಅಗತ್ಯತೆ ಕುರಿತು ಸಮಗ್ರವಾಗಿ ವಿದ್ಯಾರ್ಥಿಗಳ ಮನಮುಟ್ಟುವಂತೆ ಕಿವಿಮಾತು ಹೇಳಿದರು

ವಿದ್ಯಾರ್ಥಿಗಳು ಕೇವಲ ಪಾಠಪುಸ್ತಕಗಳಿಗೆ ಸೀಮಿತವಾಗದೇ ಪ್ರತಿದಿನ ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಓದು ವ್ಯಕ್ತಿತ್ವ ವಿಕಾಸಕ್ಕೆ ಮೂಲವಾಗಿದ್ದು, ಉತ್ತಮ ಭವಿಷ್ಯ ನಿರ್ಮಾಣಕ್ಕೆ ದಾರಿಯಾಗುತ್ತದೆ ಎಂದರು
ಸಮಯದ ಸದುಪಯೋಗ ಮತ್ತು ನಿಯಮಿತ ಅಧ್ಯಯನದ ಮೂಲಕ ಗುರಿ ಸಾಧಿಸಬಹುದು ಎಂದು ಸಲಹೆ ನೀಡಿದರು.
ಇಂದಿನ ತಾಂತ್ರಿಕ ಯುಗದಲ್ಲಿ ಮೊಬೈಲ್ ಹಾಗೂ ಆನ್‌ಲೈನ್ ಆಟಗಳ ಪರಿಣಾಮವಾಗಿ ವಿದ್ಯಾರ್ಥಿಗಳು ಬರವಣಿಗೆಯಿಂದ ದೂರವಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು. ವಿಶೇಷವಾಗಿ ಕೊರೊನಾ ಬಳಿಕ ಈ ಪ್ರವೃತ್ತಿ ಹೆಚ್ಚಿದ್ದು, ಸುಂದರ ಹಸ್ತಾಕ್ಷರದ ಕೊರತೆ ಕಂಡುಬರುತ್ತಿದೆ ಎಂದರು. ಸ್ಪರ್ಧಾತ್ಮಕ ಯುಗದಲ್ಲಿ ಉತ್ತಮ ಅಂಕ ಗಳಿಸಲು ಹಸ್ತಾಕ್ಷರವೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಭಾರತ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ (NEP 2020) ಅಡಿಯಲ್ಲಿ ಆರಂಭವಾದ ‘ಸ್ವಚ್ಛ ಸುಂದರ ಹಸ್ತಾಕ್ಷರ ಅಭಿಯಾನ’ದ ಉದ್ದೇಶವನ್ನು ವಿವರಿಸಿದ ಅವರು, ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಸ್ಪಷ್ಟವಾಗಿ ಹಾಗೂ ಆಕರ್ಷಕವಾಗಿ ಪ್ರದರ್ಶಿಸುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ತರಗತಿಯಲ್ಲಿ ವಿದ್ಯಾರ್ಥಿಗಳ ನಡವಳಿಕೆ ಕುರಿತು ಮಾರ್ಗದರ್ಶನ ನೀಡಿದ ಅವರು, ಶಿಕ್ಷಕರೊಂದಿಗೆ ದೃಷ್ಟಿ ಸಂಪರ್ಕ ಕಾಪಾಡಿಕೊಳ್ಳುವುದು ಹಾಗೂ IOC (Interest, Observation, Concentration) ತತ್ವಗಳನ್ನು ಅನುಸರಿಸುವುದು ಅತ್ಯಗತ್ಯ ಎಂದರು. ಆಸಕ್ತಿ, ವೀಕ್ಷಣೆ ಮತ್ತು ಏಕಾಗ್ರತೆ ಈ ಮೂರು ಅಂಶಗಳು ಶಿಕ್ಷಣದಲ್ಲಿ ಯಶಸ್ಸಿನ ಕೀಲಿಕೈ ಎಂದು ವಿವರಿಸಿದರು.
ಇಂಗ್ಲಿಷ್ ಸಂವಹನ ಕೌಶಲ್ಯದಲ್ಲಿ ಕಾಲಗಳ (Tenses) ಮಹತ್ವವನ್ನು ವಿವರಿಸಿದ ಅವರು, ವರ್ತಮಾನ, ಭೂತ ಹಾಗೂ ಭವಿಷ್ಯಕಾಲಗಳ ಸರಿಯಾದ ಅರಿವು ಭಾಷೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಇದೇ ವೇಳೆ ವೇದ ಗಣಿತದ ಕೆಲವು ಸರಳ ತಂತ್ರಗಳನ್ನು ಪರಿಚಯಿಸಿ ವಿದ್ಯಾರ್ಥಿಗಳಲ್ಲಿ ಗಣಿತದ ಆಸಕ್ತಿಯನ್ನು ಹೆಚ್ಚಿಸಿದರು.
ಈ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಜ. ಬಿ. ಗುಮಶೆಟ್ಟಿ, ಶಿಕ್ಷಕರಾದ ಎಸ್. ಆರ್. ಹರಿಜನ, ಪಿ. ಟಿ. ಜಾಣಮಟ್ಟಿ, ಕೆ. ಎಸ್. ದೇಸಾಯಿ, ಪಿ. ಎಂ. ಸಿಂದಗಿ, ಎಸ್. ಎಸ್. ಕಾರವಾರ, ಎಸ್. ಎಸ್. ಬಿರಾದಾರ, ಸುಧಾ ಬಜೇಂತ್ರಿ, ದುಂಡಸಿ ಸೇರಿದಂತೆ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದ್ದರು.
