ವಿಜಯ ಸಿಂಧೂರ ತಾಳಿಕೋಟೆ
ಬಸವನ ಬಾಗೇವಾಡಿ ತಾಲೂಕಿನ ಹಂಗರಗಿ ಕ್ರಾಸ್ ಬಳಿ ಇತ್ತೀಚೆಗೆ ನಡೆದ ದಲಿತ ಯುವಕ ರವಿಚಂದ್ರ ಮಾದರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ತಕ್ಷಣ ಬಂಧಿಸಿ, ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಆಗ್ರಹಿಸಿ ಪಟ್ಟಣದಲ್ಲಿ ಸೋಮವಾರ ಅಂಬೇಡ್ಕರ್ ಸೇನೆ ನೇತೃತ್ವದಲ್ಲಿ ವಿವಿಧ ದಲಿತ ಪರ ಸಂಘಟನೆಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದವು.

ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಿಂದ ಹಲಗೆ ಬಾರಿಸುವುದರೊಂದಿಗೆ ಪ್ರಾರಂಭವಾದ ಮೆರವಣಿಗೆ ಶ್ರೀ ಬಸವೇಶ್ವರ ವೃತ್ತ, ಡಾ. ಅಂಬೇಡ್ಕರ್ ವೃತ್ತ, ಕತ್ರಿ ಬಜಾರ್ ಮಾರ್ಗವಾಗಿ ಶಿವಾಜಿ ವೃತ್ತ, ಮಹಾರಾಣಾ ಪ್ರತಾಪ ಸಿಂಹ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ತಹಶೀಲ್ದಾರ್ ಕಾರ್ಯಾಲಯದವರೆಗೆ ಸಾಗಿತು. ಮೆರವಣಿಗೆ ಉದ್ದಕ್ಕೂ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ತಹಶೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ನಡೆದ ಸಭೆಯಲ್ಲಿ ದಲಿತ ಮುಖಂಡರಾದ ಎ.ಬಿ. ದೊಡ್ಮನಿ, ಬಸವರಾಜ ಸಿದ್ದಾಪೂರ, ಬಾಲಚಂದ್ರ ಹುಲ್ಲೂರ, ಬಸ್ಸು ಮಾದರ ಹಾಗೂ ರಮೇಶ ದೊಡಮನಿ ಮಾತನಾಡಿ, ಘಟನೆ ನಡೆದು ಏಳು ದಿನಗಳಾದರೂ ಪ್ರಮುಖ ಆರೋಪಿಗಳನ್ನು ಬಂಧಿಸದಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಕರಣದ ಪ್ರಮುಖ ಸೂತ್ರಧಾರಿ ಗುತ್ತಿಗೆದಾರ ಮಲ್ಲಿಕಾರ್ಜುನ್ ಮದರಿ ಎಂಬ ಆರೋಪ ವ್ಯಕ್ತವಾಗಿದ್ದು, ಅವರ ರಾಜಕೀಯ ಹಾಗೂ ಆರ್ಥಿಕ ಪ್ರಭಾವದಿಂದಲೇ ಬಂಧನ ವಿಳಂಬವಾಗುತ್ತಿದೆ ಎಂದು ಮುಖಂಡರು ದೂರಿದರು.
“ದಲಿತರ ಜೀವಕ್ಕೆ ಬೆಲೆ ಇಲ್ಲದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೂ 3–4 ದಿನಗಳಲ್ಲಿ ಆರೋಪಿಗಳನ್ನು ಬಂಧಿಸದಿದ್ದರೆ ಜಿಲ್ಲೆಾದ್ಯಂತ ಉಗ್ರ ಹೋರಾಟ ನಡೆಸುತ್ತೇವೆ” ಎಂದು ಎಚ್ಚರಿಸಿದರು.
ನಂತರ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಉಪ ತಹಶೀಲ್ದಾರ ಅನೀಲ ಚೌಹಾಣ ಅವರಿಗೆ ಸಲ್ಲಿಸಲಾಯಿತು. ಮನವಿಯಲ್ಲಿ:
ಪ್ರಕರಣದ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಬೇಕುಸಾಕ್ಷಿದಾರರು ಮತ್ತು ಮೃತರ ಕುಟುಂಬಕ್ಕೆ ಭದ್ರತೆ ಒದಗಿಸಬೇಕುಪ್ರಮುಖ ಆರೋಪಿಗಳಿಂದ ಸಾಕ್ಷಿ ನಾಶವಾಗದಂತೆ ಕ್ರಮ ಕೈಗೊಳ್ಳಬೇಕುಆರೋಪಿಯಾದ ಗುತ್ತಿಗೆದಾರರ ಪರವಾನಗಿ ರದ್ದುಪಡಿಸಬೇಕುಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕುಅಗತ್ಯವಿದ್ದಲ್ಲಿ ಪ್ರಕರಣವನ್ನು ಸಿಬಿಐಗೆ ವಹಿಸಿಕೊಡಬೇಕುಎಂಬ ಬೇಡಿಕೆಗಳನ್ನು ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಅಂಬೇಡ್ಕರ್ ಸೇನೆ ತಾಲೂಕು ಅಧ್ಯಕ್ಷ ಗೋಪಾಲ ಕಟ್ಟಿಮನಿ, ಜಾಂಬವ ಯುವಸೇನೆ ತಾಲೂಕು ಅಧ್ಯಕ್ಷ ಕಾಲಪ್ಪ ಮಾದರ, ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘದ ದೇವಪ್ಪ ಮಾದರ, ಕರ್ನಾಟಕ ಮಾದಿಗ ದಂಡೋರ ಸಂಘದ ರಮೇಶ ಮಾದರ, ನಿವೃತ್ತ ಶಿಕ್ಷಕ ಶೇಖಪ್ಪ ಚಬನೂರ ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಅನೇಕ ದಲಿತ ಪರ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು
